ಶಾರ್ಟ್‍ಸಕ್ರ್ಯೂಟ್: ಶ್ರೀಬಳ್ಳೇಶ್ವರಸ್ವಾಮಿ ದೇಗುಲ ಉದ್ಯಾನವನ ಭಾಗಶಃ ಬೆಂಕಿಗಾಹುತಿ
ಮೈಸೂರು ಗ್ರಾಮಾಂತರ

ಶಾರ್ಟ್‍ಸಕ್ರ್ಯೂಟ್: ಶ್ರೀಬಳ್ಳೇಶ್ವರಸ್ವಾಮಿ ದೇಗುಲ ಉದ್ಯಾನವನ ಭಾಗಶಃ ಬೆಂಕಿಗಾಹುತಿ

May 20, 2020

ತಿ.ನರಸೀಪುರ, ಮೇ 19(ಎಸ್‍ಕೆ)-ಪಟ್ಟಣದ ಶ್ರೀ ಬಳ್ಳೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನವನ ವಿದ್ಯುತ್ ಮಾರ್ಗದಲ್ಲಿ ಸಂಭವಿಸಿದ ಶಾರ್ಟ್‍ಸಕ್ರ್ಯೂಟ್ ಪರಿಣಾಮ ಭಸ್ಮವಾಗಿರುವ ಘಟನೆ ಮಂಗಳವಾರ ನಡೆದಿದೆ.

ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪರಿಶ್ರಮದಿಂದ ಪಟ್ಟಣದ ಅಭಿವೃದ್ಧಿಗೆ ಕೋಟ್ಯಾಂತರ ರೂ.ಗಳ ಅನುದಾನ ಬಿಡುಗಡೆಯಾದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣಗೊಂಡಿತ್ತು. ಬಳಿಕ ನಿರ್ವಹಣೆಯಿಲ್ಲದೆ ಸೊರಗಿತ್ತು. ಅಲ್ಲದೆ ಪಾರ್ಕ್‍ಗೆ ನೀರು ಸಿಂಪಡಿಸಲು ಅಳವಡಿಸಲಾಗಿದ್ದ ಸ್ಪಿಂಕ್ಲರ್‍ಗಳು ಬೀಡಾಡಿ ದನಗಳಿಂದ ಹಾನಿಯಾಗಿ ನೀರಿಲ್ಲದೆ ಒಣಗಿತ್ತು.

ಪಾರ್ಕ್‍ಗೆ ಹೊಂದಿಕೊಂಡಂತೆ ರಸ್ತೆಬದಿ ಒಣಗಿದ್ದ ಗೊಬ್ಬಳಿ ಮರ ಸಮೀಪವೇ ಹಾದು ಹೋಗಿದ್ದ ವಿದ್ಯುತ್ ಮಾರ್ಗದಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಅದರ ಕಿಡಿ ಮರಕ್ಕೆ ತಗುಲಿದೆ. ಇದರ ಪರಿಣಾಮ ಇಡೀ ಪಾರ್ಕ್‍ಗೆ ಬೆಂಕಿಯ ಜ್ವಾಲೆ ವ್ಯಾಪಿಸಿ ಮರಗಿಡಗಳು, ಅಲಂಕಾರಿಕ ಸಸ್ಯಗಳು ಬೆಂಕಿಗಾಹುತಿಯಾಗಿ ಉದ್ಯಾನವನ ಸಂಪೂರ್ಣ ಭಸ್ಮವಾಗಿದೆ.

ಶ್ರೀ ಬಳ್ಳೇಶ್ವರಸ್ವಾಮಿ ದೇವಸ್ಥಾನದ ಸಿಬ್ಬಂದಿ ಅಗ್ನಿ ಶಾಮಕ ಠಾಣೆ ಸುದ್ದಿ ಮುಟ್ಟಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಿದರು. ಘಟನಾ ಸ್ಥಳಕ್ಕೆ ಪುರಸಭಾ ಸದಸ್ಯ ಕಿರಣ್ ಹಾಗೂ ಬಾದಾಮಿ ಮಂಜು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು.

Translate »