ಮಳೆ ಹಾನಿಗೆ ತಕ್ಷಣಪರಿಹಾರ ನೀಡಿ
News

ಮಳೆ ಹಾನಿಗೆ ತಕ್ಷಣಪರಿಹಾರ ನೀಡಿ

August 3, 2022

ಬೆಂಗಳೂರು, ಆ.2-ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ತಕ್ಷಣವೇ ಪರಿ ಹಾರ ಒದಗಿಸಿ ಹಾಗೂ ಕೆರೆ ಕಟ್ಟೆಗಳು ಒಡೆಯದಂತೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಮಂಗಳವಾರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾರೀ ಮಳೆಯಿಂದ ಹಾನಿಗೊಳಗಾದ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ಈ ವೇಳೆ ಕಳೆದ ಎರಡು ತಿಂಗಳಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ಬೊಮ್ಮಾಯಿ ಮಾಹಿತಿ ಪಡೆದರು. ನಂತರ ಮಳೆ ಹಾನಿಗೆ ತುತ್ತಾದ ಜನರ ನೆರವಿಗೆ ಧಾವಿಸಿ ಎಂದು ಅಧಿಕಾರಿಗಳಿಂದ ಸೂಚಿಸಿದರು.

ಮಳೆಯಿಂದ ಉಂಟಾದ ಹಾನಿ ಎಷ್ಟು: ರಾಜ್ಯದಲ್ಲಿ ಈವರೆಗೆ ಸುರಿದ ಹಾಗೂ ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಒಟ್ಟು 3,499 ಹೆಕ್ಟೇರ್ ಬೆಳೆ ನಾಶವಾಗಿದೆ. 2,057 ಹೆಕ್ಟೇರ್ ತೋಟ ಗಾರಿಕಾ ಬೆಳೆ ಹಾಳಾಗಿದ್ದು ರೈತರು ಕಂಗಾಲಾಗಿದ್ದಾರೆ. ಸುಮಾರು 2,430 ಮನೆಗಳು ಸಂಪೂರ್ಣ ಹಾನಿಗೊಂಡಿದ್ದರೆ, 4,378 ಮನೆಗಳು ಭಾಗಶಃ ಹಾನಿಗೆ ತುತ್ತಾಗಿವೆ. ಭಾರಿ ಮಳೆಗೆ ಕರಾವಳಿ, ಮಲೆನಾಡು, ಉತ್ತರ ಒಳನಾಡು ಸೇರಿದಂತೆ ರಾಜ್ಯದಲ್ಲಿ ಒಟ್ಟು 629 ಸೇತುವೆಗಳಿಗೆ ಹಾನಿಯಾಗಿದ್ದು, 3,264 ಶಾಲಾ ಕಟ್ಟಡಗಳು ಕುಸಿದು ಬಿದ್ದಿವೆ. 29 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳಿಗೂ ಮಳೆಯಿಂದ ಧಕ್ಕೆ ಉಂಟಾಗಿದೆ. 11,796 ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ 759 ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳು ನಿರುಪಯುಕ್ತ ವಾಗಿವೆ ಎಂದು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಮಳೆಗೆ 39 ಮಂದಿ ಸಾವು: ಈವರೆಗೆ ಮಳೆ ಹಾಗೂ ನೆರೆ ಪ್ರವಾಹ ದಿಂದ 39 ಮಂದಿ ಸಾವನ್ನಪ್ಪಿದ್ದು, 99 ಪ್ರಾಣಿಗಳು ಜೀವ ಬಿಡುವ ಮೂಲಕ ಅಪಾರ ಸಾವು ನೋವು ಉಂಟಾಗಿದೆ. ಜೋರು ಮಳೆ ನೀರು ಹರಿದು, ರಸ್ತೆಗಳಲ್ಲೇ ನಿಂತ ಪರಿಣಾಮ ರಾಜ್ಯದಲ್ಲಿ 1,730 ಕಿ.ಮೀ ರಸ್ತೆ ಹಾನಿಗೀಡಾಗಿದೆ.

5,419 ಕಿ.ಮಿ ಗ್ರಾಮೀಣ ರಸ್ತೆಗಳು ಮಳೆಗೆ ಅಲ್ಲಲ್ಲಿ ಕೊಚ್ಚಿಹೋಗಿರುವ ಬಗ್ಗೆ ವರದಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಐ.ಎಸ್.ಎನ್.ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

* ಸತತ ಮಳೆಯಿಂದ ಎಲ್ಲ ಕೆರೆಗಳು ತುಂಬಿದ್ದು, ಕೆರೆಗಳ ಕಟ್ಟೆಗಳು ಮತ್ತು ಕೋಡಿಗಳು ದುರ್ಬಲಗೊಂಡಿರುತ್ತವೆ. ಸಂಗ್ರಹ ಸಾಮರ್ಥ್ಯ ಹೆಚ್ಚಿರುವ ಕೆರೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆರೆಗಳು ವಡ್ಡು ಬಿರುಕು ಬಿಡದಂತೆ ನಿಗಾವಹಿಸಿ. ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ಈ ಬಗ್ಗೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು.

* ಸಮರೋಪಾದಿಯಲ್ಲಿ ಜೀವ ರಕ್ಷಣೆ, ಹಾನಿಗೆ ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳುವುದು. ಕರಾವಳಿ ಮೂರು ಜಿಲ್ಲೆಗಳಲ್ಲಿ ಕೊಚ್ಚಿಹೋದ ರಸ್ತೆ ಸಂಪರ್ಕ ಪುನಃ ಸ್ಥಾಪಿಸಲು ಕ್ರಮ ಕೈಗೊಳ್ಳುವುದು.

* ಬಿದ್ದುಹೋದ ಮನೆಗಳ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ನಡೆಸಿ. ಭೂ ಕುಸಿತ ಸಂಭವಿಸುವ ಸಾಧ್ಯತೆ ಇರುವ ಕಡೆಗಳಲ್ಲಿ ಜನರನ್ನು ಮುಂಚಿತವಾಗಿಯೇ ಸ್ಥಳಾಂತರ ಮಾಡಿ. ಭಟ್ಕಳ, ಸುಳ್ಯ ಸೇರಿದಂತೆ ಇತರ ಕಡೆಗಳ ವಾಣಿಜ್ಯ ಸಂಕೀರ್ಣಗಳಲ್ಲಿ ನೀರು ನುಗ್ಗಿ ಹಾಳಾಗಿರುವ ಬಗ್ಗೆ ವರದಿ ಸಲ್ಲಿಸುವುದು.

* ಭಾರೀ ಮಳೆ ಹಿನ್ನೆಲೆ ‘ರೆಡ್ ಅಲರ್ಟ್’ ಪಡೆದ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತವಾಗುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ.

* ಪ್ರವಾಹದಂಥ ತುರ್ತು ಸಂದರ್ಭದಲ್ಲಿ ತಕ್ಷಣ ಪರಿಹಾರ ಕೈಗೊಳ್ಳುವ ಮೂಲಕ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂಬ ಸಂದೇಶ ರವಾನಿಸುವುದು.

* ಜಿಲ್ಲಾಧಿಕಾರಿಗಳು ಪರಿಹಾರ ವಿಳಂಬ ಮಾಡದೇ ವಿತರಿಸಬೇಕು. ಪ್ರತಿ ತಾಲೂಕು ಇಒಗಳು ಅವರ ವ್ಯಾಪ್ತಿಯಲ್ಲಿ ಹಾನಿಯಾದ ಮನೆಗಳ ಪ್ರಾಥಮಿಕ ವರದಿ ಪಡೆಯಬೇಕು.

* ಕಾಳಜಿ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿ ತಹಶೀಲ್ದಾರ್‍ಗಳು ಖಾತರಿಪಡಿಸಿ ಕೊಳ್ಳಬೇಕು. ಅದನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು.

* ಮೈಸೂರು, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ನೀಡಿ. ಹಾನಿಯಾದ ಮೀನುಗಾರರ ದೋಣಿಗಳ ದುರಸ್ತಿಗೆ ತಗಲುವ ವೆಚ್ಚ ಅಂದಾಜು ಮಾಡಿ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಭಾರಿ ಮಳೆ, ನೆರೆಯ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಗೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಕ್ಕೆ ಆದ್ಯತೆ ನೀಡಬೇಕು. ಅಲ್ಲದೇ ತ್ವರಿತ ಕ್ರಮ ಕೈಗೊಳ್ಳಬೇಕು.

Translate »