ಕೊಡಗಲ್ಲಿ ಬೊಬ್ಬಿರಿಯುತ್ತಿರುವ ಮಳೆ ತತ್ತರಿಸಿದ ಸಂಪಾಜೆ, ಕೊಯನಾಡು, ಚೆಂಬು, ದಬ್ಬಡ್ಕ ಗ್ರಾಮಸ್ಥರು
ಕೊಡಗು

ಕೊಡಗಲ್ಲಿ ಬೊಬ್ಬಿರಿಯುತ್ತಿರುವ ಮಳೆ ತತ್ತರಿಸಿದ ಸಂಪಾಜೆ, ಕೊಯನಾಡು, ಚೆಂಬು, ದಬ್ಬಡ್ಕ ಗ್ರಾಮಸ್ಥರು

August 3, 2022

ಮಡಿಕೇರಿ, ಆ.2- ಕಳೆದ ಕೆಲ ದಿನಗಳಿಂದ ಸ್ವಲ್ಪ ಬಿಡುವು ನೀಡಿದ್ದ ವರುಣ ಮತ್ತೆ ಆಗಸ್ಟ್ 1ರ ರಾತ್ರಿಯಿಂದ ಬೊಬ್ಬಿರಿಯಲು ಪ್ರಾರಂಭಿಸಿದ್ದು, ಜಿಲ್ಲೆಯ ಪಶ್ಚಿಮ ಘಟ್ಟ ಸಾಲಿನಲ್ಲಿ ತನ್ನ ಆರ್ಭಟ ತೋರಿದೆ. ಜುಲೈ ತಿಂಗಳಲ್ಲಿ ಸರಣಿ ಲಘು ಭೂ ಕಂಪನಗಳಿಗೆ ಸಾಕ್ಷಿಯಾಗಿದ್ದ ಸಂಪಾಜೆ, ಕೊಯ ನಾಡು, ಚೆಂಬು, ದಬ್ಬಡ್ಕ ಗ್ರಾಮದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಅಲ್ಲಿನ ಜನರು ತತ್ತರಿಸಿದ್ದಾರೆ.

ಭಾರೀ ಮಳೆಯಿಂದಾಗಿ ದಬ್ಬಡ್ಕ ಗ್ರಾಮದಲ್ಲಿ ಸಂಪರ್ಕ ಸೇತುವೆಗೆ ಹಾನಿ ಸಂಭವಿಸಿದೆ. ದಬ್ಬಡ್ಕ ಗ್ರಾಮವನ್ನು ಸಂಪಾಜೆಯೊಂದಿಗೆ ಬೆಸೆಯುವ ಸೇತುವೆಯ ತಡೆಗೋಡೆ ಪಕ್ಕದಲ್ಲಿದ್ದ ಮಣ್ಣು ನದಿ ಪ್ರವಾಹ ನೀರಿನಿಂದ ಕೊಚ್ಚಿ ಹೋಗಿದ್ದು, ಗ್ರಾಮ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ದಬ್ಬಡ್ಕ ಗ್ರಾಮದಿಂದ ಸಂಪಾಜೆಗೆ ಸಂಪರ್ಕ ಕಡಿತವಾ ಗಿದ್ದು, ಈ ಸೇತುವೆಯ ಮೇಲೆ 2 ಅಡಿ ನದಿ ನೀರು ಹರಿಯುತ್ತಿದೆ. ಸಂಪಾಜೆ ಸಮೀಪದ ಕಳ್ಳಾಲ ಎಂಬ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾ ಗಿದ್ದು, ಗ್ರಾಮದ ರಸ್ತೆ ಸಂಪರ್ಕ ಬಂದ್ ಆಗಿದೆ. ಸಂಪಾಜೆ ಗ್ರಾಮದ ಜನಾರ್ಧನ ಅವರ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಗೆ ಹಾನಿ ಸಂಭವಿಸಿದೆ. ಭಾರೀ ಮಳೆ ಮತ್ತು ಅಂತರ್ ಜಲದ ಪರಿಣಾಮ ಕೊಯನಾಡು ಬಳಿ ರಾಷ್ಟ್ರೀಯ ಹೆದ್ದಾರಿ 275 ಬಿರುಕು ಬಿಟ್ಟಿದೆ. ಅಂದಾಜು 20 ಮೀಟರ್ ಉದ್ದಕ್ಕೂ ಬಿರುಕು ಮೂಡಿರುವುದು ಹೈವೇ ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿದೆ. ಈ ಸ್ಥಳದಲ್ಲಿ 2018ರ ಪ್ರಾಕೃತಿಕ ವಿಕೋಪದ ಸಂದರ್ಭ ಸಂಪೂರ್ಣ ಹೆದ್ದಾರಿಯೇ ಕೊಚ್ಚಿ ಹೋಗಿ ರಸ್ತೆ ಸಂಚಾರ ಕೆಲ ದಿನಗಳ ಕಾಲ ಬಂದ್ ಆಗಿತ್ತು. ಇದೀಗ ಮತ್ತದೇ ಸ್ಥಳದಲ್ಲಿ ಬಿರುಕು ಮೂಡಿರುವುದು ಆತಂಕ ಮೂಡಿಸಿದೆ.
ಕಲ್ಲುಗುಂಡಿ ವರದಿ: ಕೊಡಗು-ದಕ್ಷಿಣ ಕನ್ನಡ ಗಡಿ ಗ್ರಾಮವಾದ ಕಲ್ಲುಗುಂಡಿಯಲ್ಲಿ ಆಶ್ಲೇಷಾ ಮಳೆ ಭಾರೀ ಪ್ರವಾಹ ಸೃಷ್ಟಿಸಿದ ಬಗ್ಗೆ ವರದಿಯಾಗಿದೆ.

ಸೋಮವಾರ ತಡ ರಾತ್ರಿ ಆರ್ಭಟಿಸಿದ ಮಳೆಗೆ ಪಯಶ್ವಿನಿ ನದಿಯಲ್ಲಿ ಏಕಾಏಕಿ ನದಿ ಪ್ರವಾಹ ನೀರು ಉಕ್ಕೇರಿ ಹತ್ತಾರು ಮನೆಗಳು, ಅಂಗಡಿ ಮಳಿಗೆಗಳು ನೀರಿನಲ್ಲಿ ಮುಳುಗಿವೆ. ಅಂಗಡಿಗಳ ಮುಂದಿಟ್ಟಿದ್ದ ಪ್ಲಾಸ್ಟಿಕ್ ಬಾಕ್ಸ್‍ಗಳು, ಕುರ್ಚಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಕೋಳಿ ಮಾಂಸ ಮಾರಾಟದ ಅಂಗಡಿ ಒಂದಕ್ಕೆ ಪ್ರವಾಹ ನೀರು ನುಗ್ಗಿ ಅಂಗಡಿ ಯಲ್ಲಿದ್ದ ಫಾರಂ ಕೋಳಿಗಳು ಜಲಮಯವಾಗಿವೆ. ಮನೆಯ ಮುಂದೆ ನಿಲ್ಲಿಸಿದ್ದ ಕಾರೊಂದು ನದಿ ನೀರಿನಲ್ಲಿ ತೇಲಿ ಹೋಗಿ ಪಲ್ಟಿಯಾಗಿದೆ. ಭಾರೀ ಪ್ರಮಾಣದಲ್ಲಿ ಕೆಸರು ನೀರು ಮನೆಗಳು ಅಂಗಡಿಗಳಿಗೆ ನುಗಿದ್ದು, ಅಪಾರ ಹಾನಿ ಸಂಭವಿಸಿದೆ. ಪ್ರವಾಹದ ರಭಸಕ್ಕೆ ಹಲವಾರು ಮನೆಗಳ ಮೇಲ್ಚಾವಣಿ, ಮನೆಯ ಗೋಡೆಗಳು ಕುಸಿದು ಬಿದ್ದಿದೆ. ಮಡಿಕೇರಿ-ಕಲ್ಲುಗುಂಡಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ರ ಕಲ್ಲುಗುಂಡಿ ಸೇತುವೆ ಮೇಲೆ ಪ್ರವಾಹ ನೀರು ಹರಿದು ಕೆಲಕಾಲ ಹೆದ್ದಾರಿ ಸಂಚಾರವೇ ಬಂದ್ ಆಗಿತ್ತು ಎಂದು ವರದಿಯಾಗಿದೆ. ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.

Translate »