ವರುಣಾರ್ಭಟಕ್ಕೆ ನಲುಗಿದ ಮಂಡ್ಯ
ಮಂಡ್ಯ

ವರುಣಾರ್ಭಟಕ್ಕೆ ನಲುಗಿದ ಮಂಡ್ಯ

August 3, 2022

ಮಂಡ್ಯ, ಆ.2- ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಸಕ್ಕರೆ ನಾಡು ಮಂಡ್ಯ ಅಕ್ಷರಶಃ ನಲುಗಿ ಹೋಗಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ತತ್ತರಿಸಿದ್ದಾರೆ. ಮಂಡ್ಯದಲ್ಲಿ ಒಂದೇ ದಿನ ದಾಖಲೆಯ ಮಳೆಯಾಗಿದೆ. ನಿನ್ನೆ (ಸೋಮವಾರ) ರಾತ್ರಿ ಮಂಡ್ಯ ಜಿಲ್ಲೆಯಾದ್ಯಂತ 61.0 ಮಿಮೀ ಮಳೆಯಾಗಿದೆ. ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆಗಳು, ಪಾತ್ರೆ ಪಗಡೆಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಹಾಳಾಗಿವೆ. ಅಲ್ಲದೆ, ಕುಟುಂಬಸ್ಥರು ಮಳೆಯ ನೀರನ್ನು ಮನೆಯಿಂದ ಹೊರ ಹಾಕುವುದರಲ್ಲೇ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ. ಮುಳುಗಿದ ವಿವೇಕಾನಂದ ನಗರ: ರಾತ್ರಿ 6.45ರಲ್ಲಿ ಪ್ರಾರಂಭಗೊಂಡ ಮಳೆ ಮಧ್ಯರಾತ್ರಿವರೆಗೂ ಧೋ ಎಂದು ಸುರಿಯಿತು. ಇದರಿಂದ ನಗರದ ಕೆರೆ ಅಂಗಳದಲ್ಲಿರುವ ವಿವೇಕಾನಂದ ಬಡಾವಣೆ ಹಾಗೂ ಪಕ್ಕದಲ್ಲೇ ಇರುವ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದೆ. ಬಡಾವಣೆಯ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಯನ್ನು ಸಂಪೂರ್ಣವಾಗಿ ಜಲ ದಿಗ್ಬಂಧನ ವಿಧಿಸಿದೆ. ನಗರಸಭೆ ಹಾಗೂ ರಕ್ಷಣಾ ತಂಡ ಬೋಟ್‍ಗಳ ಮೂಲಕ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ನಗರಸಭೆ ಸಿಬ್ಬಂದಿ ನೀರು ಹೊರ ಹಾಕಲು ಹರಸಾಹಸಪಡುತ್ತಿದ್ದಾರೆ.

ಮನೆಯ ಮೇಲೆ ಹತ್ತಿ ಕುಳಿತ ನಿವಾಸಿಗಳು: ಮಂಡಿಯುದ್ದ ನೀರು ಮನೆಗಳಿಗೆ ನುಗ್ಗಿದ್ದರಿಂದ ಆರ್‍ಸಿಸಿ ಮನೆ ಇರುವ ನಿವಾಸಿಗಳು ಮನೆಯ ಮೇಲೆ ಹತ್ತಿ ಕುಳಿತರೆ, ಆರ್‍ಸಿಸಿ ಇಲ್ಲದ ಮನೆಯವರು ಸಂಪೂರ್ಣ ತೊಂದರೆ ಅನುಭವಿಸಿದರು. ರಾತ್ರಿಯಿಡೀ ಊಟ, ನಿದ್ರೆ ಇಲ್ಲದೆ ಸಾಕಷ್ಟು ಸಂಕಷ್ಟ ಅನುಭವಿಸಿದರು. ಬೀಡಿ ಕಾರ್ಮಿಕರ ಕಾಲೋನಿಯ ಬಹುತೇಕ ಎಲ್ಲಾ ಮನೆಗಳಿಗೂ ನೀರು ನುಗ್ಗಿದೆ. ಮನೆ ಒಳಗಡೆ ಹಾಗೂ ಹೊರಗಡೆ ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದ್ದ ದೃಶ್ಯ ಕಂಡು ಬಂದಿತು.

ವಾಹನಗಳು ಮುಳುಗಡೆ: ವಿವೇಕಾನಂದನಗರ ಹಾಗೂ ಬೀಡಿ ಕಾರ್ಮಿಕರ ಕಾಲೋನಿಯ ನಿವಾಸಿಗಳ ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಿಂದ ಮುಳುಗಡೆಯಾಗಿವೆ. ಅಲ್ಲದೆ, ಮನೆಯಲ್ಲಿದ್ದ ವಸ್ತುಗಳು ನೀರಿನಿಂದ ಜಲಾವೃತ್ತಗೊಂಡು ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯ ಹಲವೆಡೆ ಮಳೆಯ ಅವಾಂತರ: ಮಳೆಯಬ್ಬರಕ್ಕೆ ಮಳವಳ್ಳಿ ತಾಲೂಕು ಮಾರ್ಕಾಲು ಕೆರೆ ಕೋಡಿ ಬಿದ್ದು ಲಕ್ಷಾಂತರ ಮೀನುಗಳು ಕೊಚ್ಚಿ ಹೋಗಿವೆ. ಇದರಿಂದ ಕೆರೆ ಗುತ್ತಿಗೆ ಪಡೆದವರಿಗೆ ನಷ್ಟ. ಎದುರಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಜಮೀನಿನ ಕಿರುನಾಲೆಯಲ್ಲಿ ವೃದ್ಧೆಯೊಬ್ಬರ ಶವ ತೇಲಿ ಬಂದಿದೆ. ಗ್ರಾಮದ ಜವರ ಎಂಬುವರ ಕೃಷಿ ಜಮೀನಿನಲ್ಲಿ ಶವ ಪತ್ತೆಯಾಗಿದೆ. ಸುಮಾರು 75 ವರ್ಷದ ವೃದ್ಧೆಯಾಗಿದ್ದು, ಮಳೆ ನೀರಿನ ರಭಸಕ್ಕೆ ಕಿರುನಾಲೆಯಲ್ಲಿ ಶವ ತೇಲಿ ಬಂದಿದೆ. ಒಟ್ಟಾರೆ ಮಂಡ್ಯದಲ್ಲಿ ಮಹಾಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳಾಗಿವೆ. ರಸ್ತೆ ಹಾಗೂ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜಿಲ್ಲೆ ರೈತರಿಗೆ ಸಂಕಷ್ಟ ತಂದಿಟ್ಟಿದ್ದು, ಜನರು ಹೈರಾಣಾಗಿದ್ದಾರೆ.

Translate »