ಲಂಚ ಪಡೆಯುತ್ತಿದ್ದ ಪಾಲಿಕೆ ರೆವಿನ್ಯೂ  ಇನ್ಸ್‍ಪೆಕ್ಟರ್ ಎಸಿಬಿ ಬಲೆಗೆ
ಮೈಸೂರು

ಲಂಚ ಪಡೆಯುತ್ತಿದ್ದ ಪಾಲಿಕೆ ರೆವಿನ್ಯೂ ಇನ್ಸ್‍ಪೆಕ್ಟರ್ ಎಸಿಬಿ ಬಲೆಗೆ

August 5, 2022

ಮೈಸೂರು, ಆ.4(ಆರ್‍ಕೆ)-ಆಸ್ತಿಯೊಂದರ ಖಾತೆ ಮಾಡಿಕೊಡುವ ಸಂಬಂಧ ವ್ಯಕ್ತಿ ಯಿಂದ 15,000 ರೂ. ಲಂಚ ಪಡೆ ಯುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ ರೆವಿನ್ಯೂ ಇನ್ಸ್‍ಪೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರಿಗೆ ಗುರುವಾರ ಸಿಕ್ಕಿಬಿದ್ದಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 7ರ ರೆವಿನ್ಯೂ ಇನ್ಸ್‍ಪೆಕ್ಟರ್ ಬಿ.ಸಿದ್ದರಾಜು ಎಸಿಬಿ ಬಲೆಗೆ ಬಿದ್ದವರು. ಗಾಯತ್ರಿಪುರಂ ನಿವಾಸಿಯೊಬ್ಬರು ಖರೀದಿಸಿದ್ದ ಎನ್.ಆರ್.ಮೊಹಲ್ಲಾದ ಆಸ್ತಿಯ ಖಾತೆ ಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡುವಂತೆ ಕೋರಿ ಪಾಲಿಕೆ ವಲಯ ಕಚೇರಿ-8ಕ್ಕೆ ಅವರು ಅರ್ಜಿ ಸಲ್ಲಿಸಿದ್ದರು. ಅದರ ಬಗ್ಗೆ ವ್ಯವಹರಿಸುತ್ತಿದ್ದ ಗಾಯತ್ರಿ ಪುರಂ ನಿವಾಸಿ ಮಹೇಶ್ ಎಂಬುವರು, ಆಗಸ್ಟ್ 3 ರಂದು ರೆವಿನ್ಯೂ ಇನ್ಸ್‍ಪೆಕ್ಟರ್ ಸಿದ್ದರಾಜು ಅವರನ್ನು ಭೇಟಿ ಮಾಡಿದಾಗ ಖಾತೆ ವರ್ಗಾವಣೆ ಪ್ರಕ್ರಿಯೆ ಮಾಡಲು 15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಿಂದ ಬೇಸತ್ತ ಸಿದ್ದರಾಜು ಇಂದು ಬೆಳಗ್ಗೆ ಎಸಿಬಿ ಕಚೇರಿಗೆ ದೂರು ನೀಡಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ಮಧ್ಯಾಹ್ನ ಪ್ರಭಾರ ರೆವಿನ್ಯೂ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‍ಟಿಎಸ್ ಸರ್ಕಲ್ ಬಳಿ ಇರುವ ಪಾಲಿಕೆ ವಲಯ ಕಚೇರಿ 7ರಲ್ಲಿ ಮಹೇಶ್‍ರಿಂದ 15,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿದ್ದರಾಜುರನ್ನು ಹಣದ ಸಮೇತ ಬಂಧಿಸಿದರು. ಎಸಿಬಿ ಎಸ್ಪಿ ಸಜೀತ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ ಪೆಕ್ಟರ್ ಮೋಹನ್ ಕೃಷ್ಣ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »