ಭಾರೀ ಮಳೆಗೆ ಕೊಡಗು ತತ್ತರ; ಹೆದ್ದಾರಿ ಬಂದ್ 15ಕ್ಕೂ ಹೆಚ್ಚು ಕಡೆ ಭೂ ಕುಸಿತ, ಸೇತುವೆಗಳು ಧ್ವಂಸ
ಕೊಡಗು

ಭಾರೀ ಮಳೆಗೆ ಕೊಡಗು ತತ್ತರ; ಹೆದ್ದಾರಿ ಬಂದ್ 15ಕ್ಕೂ ಹೆಚ್ಚು ಕಡೆ ಭೂ ಕುಸಿತ, ಸೇತುವೆಗಳು ಧ್ವಂಸ

August 5, 2022

ಮಡಿಕೇರಿ,ಆ.4-ಕೊಡಗು ಜಿಲ್ಲೆಯಲ್ಲಿ ಮಳೆ ಮುಂದು ವರೆದಿದ್ದು, ವಿವಿಧ ಕಡೆಗಳಲ್ಲಿ ಭೂ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಜೊತೆಗೆ ಭಾರೀ ಜಲಸ್ಫೋಟದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಮಳೆ ಸುರಿಯ ಲಾರಂಭಿಸಿದ್ದು, ಶುಕ್ರವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾ ದ್ಯಂತ `ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸರಣಿ ಭೂ ಕಂಪನದ ಕೇಂದ್ರ ಬಿಂದು, ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಆ.4ರ ಬೆಳಗಿನ 8.30 ಗಂಟೆಗೆ ಕೊನೆ ಗೊಂಡಂತೆ 220 ಮಿ.ಮೀ ಮಳೆ ಸುರಿದಿದೆ. ಕಳೆದ 4 ದಿನಗಳ ಅಂತರದಲ್ಲಿ ಚೆಂಬು ಗ್ರಾಮಕ್ಕೆ ದಾಖಲೆಯ 551 ಮಿ.ಮೀ ಮಳೆ ಸುರಿದಿದ್ದು, ಸಹಜವಾಗಿಯೇ ಅನಾಹುತ ಗಳಿಗೆ ಕಾರಣವಾಗಿದೆ. ಸರಣಿ ಭೂ ಕಂಪನಗಳಿಗೆ ತುತ್ತಾಗಿದ್ದ ಸಂಪಾಜೆ, ಚೆಂಬು, ದಬ್ಬಡ್ಕ, ಊರುಬೈಲು, ಕುದುರೆಪಾಯ, ಅರೆಕಲ್ಲು ಮತ್ತಿತ್ತರ ಕಡೆಗಳಲ್ಲಿ ಆಗಸ್ಟ್ ತಿಂಗಳ ಪ್ರಾರಂಭ ದಲ್ಲೇ 15ಕ್ಕೂ ಹೆಚ್ಚು ಕಡೆಗಳಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಎಲ್ಲಿಯೂ ಮನೆ, ಪ್ರಾಣ ಹಾನಿ ನಡೆಯದ ಹಿನ್ನೆಲೆಯಲ್ಲಿ ಈ ಘಟನೆಗಳು ತಡವಾಗಿ ವರದಿಯಾಗಿದೆ.

ಹೆದ್ದಾರಿ ಬಂದ್: ಕೊಯನಾಡು-ದೇವರಕೊಲ್ಲಿ ನಡುವೆ ಹಾದು ಹೋಗಿರುವ ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ನಲ್ಲಿ ಭಾರೀ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಓಡಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾ ಗಿದೆ. ಬಿರುಕು ಮೂಡಿರುವ ಸ್ಥಳದ ಮತ್ತೊಂದು ಬದಿಯಲ್ಲಿ ಈ ಹಿಂದೆ ಇದ್ದ ರಸ್ತೆಯನ್ನು ಮತ್ತಷ್ಟು ಸದೃಢ ಮಾಡಲಾ ಗುತ್ತಿದೆ. ಸುರಿಯುವ ಮಳೆಯ ನಡುವೆಯೇ ಹೆದ್ದಾರಿ ದುರಸ್ತಿ ಕಾರ್ಯ ನಡೆಸಲಾಗುತ್ತಿದ್ದು, ವೈಬ್ರೇಟರ್ ಯಂತ್ರದ ಸಹಾಯದಿಂದ ಕಾಂಕ್ರೀಟ್ ಗ್ರೋಟ್ ಹಾಕಲಾಗುತ್ತಿದೆ.

ಭಾರೀ ಜಲಸ್ಫೋಟ: ಭಾಗಮಂಡಲ ವ್ಯಾಪ್ತಿಯಲ್ಲಿ ಬುಧ ವಾರ ನಡು ರಾತ್ರಿ ಭಾರೀ ಮಳೆ ಸುರಿದಿದ್ದು, ಬಾಚಿಮಲೆ ಹಾಗೂ ಕೊಟ್ಟಮಲೆ ಬೆಟ್ಟ ಶ್ರೇಣಿಯಲ್ಲಿ ಜಲಸ್ಫೋಟದಿಂದ ಭಾರೀ ಭೂ ಕುಸಿತ ಉಂಟಾಗಿದೆ.

ಬೆಟ್ಟದಿಂದ ಬೃಹತ್ ಗಾತ್ರದ ಬಂಡೆಗಳ ಸಹಿತ ಮರಗಳು ದಾರಿಯುದ್ದಕ್ಕೂ ಉರುಳಿ ಬಿದ್ದಿದ್ದು, ಇದರಿಂದ ಭಾಗಮಂಡಲ-ಕರಿಕೆ ರಸ್ತೆ ಬಂದ್ ಆಗಿತ್ತು. ಬೆಟ್ಟ ಕುಸಿದ ಸ್ಥಳದಲ್ಲಿ ಅಂತರ್ಜಲ ಉಕ್ಕುತ್ತಿದೆ. ಜಲಸ್ಫೋಟಕ್ಕೆ ಇದು ಸಾಕ್ಷಿಯಾಗಿ, ಸ್ಥಳದಲ್ಲಿ 2 ಜೆಸಿಬಿ ಯಂತ್ರಗಳ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ಗುರುವಾರ ಸಂಜೆ ವೇಳೆಗೆ ಮರ, ಮಣ್ಣು, ಬಂಡೆಗಳ ತೆರವು ಕಾರ್ಯ ನಡೆದಿದೆ. ಮದೆನಾಡು ವ್ಯಾಪ್ತಿಯ ಬೆಟ್ಟತ್ತೂರು ಬಾಳೆಕಂಡಿ ಎಂಬಲ್ಲಿಯೂ ಜಲಸ್ಫೋಟವಾಗಿ ಭಾರೀ ಭೂಕುಸಿತ ಸಂಭವಿಸಿದೆ. ಮರಗಳು ಸಹಿತ ಮುರಿದು ಬಿದ್ದು, ರಸ್ತೆ ಸಂಚಾರ ಅಡ್ಡಿಯಾಗಿದೆ. ಪಂಚಾಯಿತಿ ವತಿಯಿಂದ ಮರಗಳ ತೆರವು ಕಾರ್ಯ ನಡೆಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಲಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು ಭಾಗಮಂಡಲ-ತಣ್ಣಿಮಾನಿ-ಕರಿಕೆ ರಸ್ತೆಯಲ್ಲಿ ಹತ್ತಾರು ಮರಗಳು ಮುರಿದು ಬಿದ್ದಿದ್ದು, ತೆರವು ಕಾರ್ಯ ನಡೆಸಲಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 83 ಮಿ.ಮೀ ಮಳೆ ಸುರಿದಿದೆ.

ಸೇತುವೆಗಳು ನೀರು ಪಾಲು: ಭೂ ಕಂಪನ ಪೀಡಿತ ಸಂಪಾಜೆ ವ್ಯಾಪ್ತಿಯ ದಬ್ಬಡ್ಕ ಗ್ರಾಮದ ವಿವಿಧ ಕಡೆಗಳಲ್ಲಿ 3 ಸಂಪರ್ಕ ಸೇತುವೆಗಳಿಗೆ ಭಾರೀ ಹಾನಿ ಸಂಭವಿಸಿದೆ. ದಬ್ಬಡ್ಕ-ಅಡ್ಡಹೊಳೆ ಮತ್ತು ದಬ್ಬಡ್ಕ-ಕೊಪ್ಪ ಸಂಪರ್ಕ ಸೇತುವೆಗಳಲ್ಲಿ ವಾಹನ, ಜನ ಸಂಚಾರ ಬಂದ್ ಆಗಿದೆ. ಭಾರೀ ಮಳೆಗೆ ಭೂ ಕುಸಿತವಾಗಿ ಮರದ ದಿಮ್ಮಿಗಳು ತೇಲಿ ಬಂದು ಸೇತುವೆಗೆ ಅಪ್ಪಳಿಸಿದ್ದು, ತಡೆಗೋಡೆಗಳು ಕುಸಿದು ಬಿದ್ದಿವೆ. ಉಕ್ಕಿ ಹರಿದ ಪ್ರವಾಹ ನೀರಿಗೆ ತಡೆಗೋಡೆಗಳ ಪಕ್ಕದ ಮಣ್ಣು ಕೊಚ್ಚಿ ಹೋಗಿದ್ದು, ತಾತ್ಕಾಲಿಕ ದುರಸ್ಥಿ ಕಾರ್ಯವೂ ಅಸಾಧ್ಯವಾಗಿ ಪರಿಣಮಿಸಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಅಡಿಕೆ ಮರಗಳನ್ನು ಕಡಿದು ಸೇತುವೆಗೆ ಜೋಡಿಸಿ ಗ್ರಾಮಗಳಿಗೆ ಕಾಲು ಸೇತುವೆಯ ಮಾದರಿಯಲ್ಲಿ ಸಂಪರ್ಕ ಸಾಧಿಸಿದ್ದಾರೆ. ಮಳೆ ಹೆಚ್ಚಾಗಿ ನದಿ ನೀರು ಉಕ್ಕಿದರೆ ಈ ಮರದ ಸೇತುವೆಗಳು ಕೂಡ ಕೊಚ್ಚಿ ಹೋಗುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ಕಲ್ಲುಗುಂಡಿ ಜಲಾವೃತ: ಸಂಪಾಜೆ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಕಲ್ಲುಗುಂಡಿಯಲ್ಲಿ ಬುಧವಾರ ರಾತ್ರಿ 3ನೇ ಬಾರಿಗೆ ಪ್ರವಾಹ ಉಕ್ಕೇರಿದೆ. ಮನೆಗಳು ಅಂಗಡಿಗಳು ಪ್ರವಾಹ ನೀರಿನಲ್ಲಿ ತೊಯ್ದು ಹೋಗಿವೆ. ಪರಿಣಾಮ ನಡುರಾತ್ರಿ 2 ಗಂಟೆಯವರೆಗೆ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಆಗಿತ್ತು. ನದಿ ನೀರಿನ ಪ್ರವಾಹ ಇಳಿಕೆಯಾದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಪ್ರಸ್ತುತ ಈ ರಸ್ತೆಯಲ್ಲಿ ವಾಹನ ಸಂಚಾರ ಮುಂದುವರೆದಿದೆ.

Translate »