ಮೈಸೂರು ನೂತನ ಡಿಸಿ ಕಚೇರಿ ಎದುರು ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ಸಿಎಂಗೆ ಮನವಿ ಸಲ್ಲಿಕೆ
ಮೈಸೂರು

ಮೈಸೂರು ನೂತನ ಡಿಸಿ ಕಚೇರಿ ಎದುರು ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ಸಿಎಂಗೆ ಮನವಿ ಸಲ್ಲಿಕೆ

June 23, 2021

ಮೈಸೂರು,ಜೂ.22(ಪಿಎಂ)- ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಎದುರು ಡಿ.ದೇವರಾಜ ಅರಸು ಅವರ ಪ್ರತಿಮೆ ಸ್ಥಾಪಿಸಲು ಕ್ರಮ ವಹಿಸುವಂತೆ ಡಿ.ದೇವರಾಜ ಅರಸು ಹಿಂದುಳಿದ ವರ್ಗ ಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯಮಂತ್ರಿಗಳನ್ನು ಬೆಂಗಳೂರಿನ ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ನಿಯೋಗ, ಪ್ರತಿಮೆ ಸ್ಥಾಪನೆ ಸಂಬಂಧ ಅಧಿಕಾರಿ ವರ್ಗಕ್ಕೆ ಸೂಕ್ತ ಆದೇಶ ನೀಡುವ ಮೂಲಕ ಮುಂಬರುವ ಆ.20ರ ದೇವರಾಜ ಅರಸು ಅವರ ಜನ್ಮದಿನದ ವೇಳೆಗೆ ಪ್ರತಿಮೆ ಸ್ಥಾಪನೆಗೊಳ್ಳಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ಈ ನಾಡು ಕಂಡ ಹಿಂದುಳಿದ ವರ್ಗಗಳ ಮಹಾ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನ್ಮತಾಳಿದವರು. ಮೈಸೂರು ಜಿಲ್ಲೆಯ ಕೇಂದ್ರದಲ್ಲಿ ಈವರೆಗೂ ಅವರ ಯಾವುದೇ ಒಂದು ಪ್ರತಿಮೆ ಸ್ಥಾಪನೆಯಾಗದೇ ಇರುವುದು ಮೈಸೂರು ಜಿಲ್ಲೆಯ ಜನತೆ ಮತ್ತು ಹಿಂದುಳಿದ ವರ್ಗಗಳ ಸಮು ದಾಯಕ್ಕೆ ಅತ್ಯಂತ ನೋವಿನ ಸಂಗತಿಯಾಗಿದೆ.

ರಾಜ್ಯದ ಇತಿಹಾಸದಲ್ಲಿ 12ನೇ ಶತಮಾನದ ಬಸವಣ್ಣ ನವರ ನಂತರ ಸಾಮಾಜಿಕ ನ್ಯಾಯದ ಬಗ್ಗೆ ಹಾಗೂ ಸಮ ಸಮಾಜದ ಕುರಿತು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ದನಿ ಇಲ್ಲದವರಿಗೆ ವರ್ಗಾತೀತವಾಗಿ ಶಕ್ತಿ ತುಂಬಿದ ದೇವರಾಜ ಅರಸು ಧೀಮಂತ ನಾಯಕರು. ಅವರಂತೆಯೇ ಹಲವು ಸಾಧನೆಗಳಿಗೆ ಹೆಸರಾಗಿರುವ ತಾವು ಪ್ರತಿಮೆ ಸ್ಥಾಪಿಸ ಬೇಕೆಂಬ ಮೈಸೂರಿನ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಲು ತುರ್ತಾಗಿ ಮುಂದಾಗಬೇಕೆಂದು ನಿಯೋ ಗದ ಸದಸ್ಯರು ಮನವಿ ಮಾಡಿದರು. ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ದೇವರಾಜ ಅರಸು ಅವರ ಪ್ರತಿಮೆಗಿಂತ ಭಿನ್ನವಾಗಿ ಹೊಸ ಸ್ವರೂಪದ ಪ್ರತಿಮೆ ಮೂಡಿಬರಲು ತಾವು ಸಂಬಂಧಿಸಿದವರಿಗೆ ಸ್ಪಷ್ಟ ಆದೇಶ ನೀಡುವ ಮೂಲಕ ಮೈಸೂರು ಜಿಲ್ಲೆಯ ಇತಿಹಾಸದಲ್ಲಿ ಒಂದು ದಾಖಲೆಯಾಗಿ ಉಳಿಯುವ ನಿರ್ಧಾರಕ್ಕೆ ತಾವು ಕಾರಣೀಭೂತರಾಗಬೇಕೆಂದು ಕೋರಲಾಯಿತು. ಡಿ.ದೇವ ರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಗೌರವ ಸಲಹೆಗಾರ ಡಾ.ಡಿ.ತಿಮ್ಮಯ್ಯ, ಗೌರವಾಧ್ಯಕ್ಷ ಎಂ.ಚಂದ್ರ ಶೇಖರ್, ಅಧ್ಯಕ್ಷ ಜಾಕೀರ್ ಹುಸೇನ್, ಪ್ರಧಾನ ಸಂಚಾ ಲಕ ಡೈರಿ ವೆಂಕಟೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಉದ್ಯಮಿ ಹೆಚ್.ಜೆ.ವಿಶ್ವನಾಥ್ ಒಳಗೊಂಡ ನಿಯೋಗದಿಂದ ಮನವಿ ಸಲ್ಲಿಸಲಾಯಿತು.

Translate »