ನಿರ್ಬಂಧಿತ ಪಟಾಕಿ ಮಾರಾಟ: 8 ಮಳಿಗೆ ಬಂದ್
ಮೈಸೂರು

ನಿರ್ಬಂಧಿತ ಪಟಾಕಿ ಮಾರಾಟ: 8 ಮಳಿಗೆ ಬಂದ್

November 15, 2020

ಮೈಸೂರು, ನ.14(ಎಂಟಿವೈ)-ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ `ಹಸಿರು ಪಟಾಕಿ’ಯನ್ನಷ್ಟೇ ಬಳಕೆ ಮಾಡುವಂತೆ ಆದೇಶಿಸಿರುವು ದರಿಂದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿ ಕಾರಿಗಳ ತಂಡ, ಶನಿವಾರ ಮೈಸೂರಿನ ವಿವಿಧೆಡೆ ತೆರೆದಿದ್ದ ಪಟಾಕಿ ಮಳಿಗೆಗಳ ತಪಾಸಣೆ ನಡೆಸಿ ಜೆಕೆ ಮೈದಾನದಲ್ಲಿ 8 ಮಳಿಗೆಗಳನ್ನು ಬಂದ್ ಮಾಡಿಸಿತು.

ಜೆ.ಕೆ.ಮೈದಾನದಲ್ಲಿ ತೆರೆದಿದ್ದ 12 ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಲೇಬಲ್, ಬಾರ್‍ಕೋಡ್, ಹಸಿರು ಪ್ರಾಧಿಕಾರದ ಲೋಗೊ ಇಲ್ಲದ ಪಟಾಕಿ ಗಳನ್ನು ಮಾರಾಟಕ್ಕಿಟ್ಟಿದ್ದ 8 ಮಳಿಗೆಗಳನ್ನು ಮುಚ್ಚಿಸಿದರು. ಹಸಿರು ಪಟಾಕಿ ಗಳಿದ್ದ 4 ಮಳಿಗೆಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದರು. ಸಾಮಾನ್ಯ ಪಟಾಕಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸುಪ್ರೀಂಕೋರ್ಟ್ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗಷ್ಟೇ ಅವಕಾಶ ನೀಡಿದೆ. ಹಾಗಾಗಿ, ಹಸಿರು ಪಟಾಕಿಯ ನೈಜತೆ ಪರಿಶೀಲಿಸುವಂತೆ ಕೆಲವು ಪರಿಸರ ಪ್ರೇಮಿಗಳು ಹೈಕೋರ್ಟ್‍ಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶದಂತೆಯೇ ರಾಜ್ಯದಲ್ಲಿ `ಹಸಿರು ಪಟಾಕಿ’ಯನ್ನಷ್ಟೇ ಮಾರಾಟ ಮಾಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾ ರಕ್ಕೆ ಸೂಚಿಸಿದೆ. ಮೈಸೂರಲ್ಲಿ ವಿವಿಧೆಡೆ ತೆರೆದಿದ್ದ ಪಟಾಕಿ ಮಾರಾಟ ಮಳಿಗೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಶುಕ್ರವಾರ ಬೆಳಗ್ಗೆಯೇ ಬಂದ್ ಮಾಡಿಸಿದ್ದರು. ಹಸಿರು ಪಟಾಕಿಯನ್ನೇ ಮಾರುವ ದೃಢೀಕರಣ ಪತ್ರ ಹಾಜರು ಪಡಿಸುವಂತೆ ವ್ಯಾಪಾರಿಗಳಿಗೆ ಸೂಚಿಸಿದರು. ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಪಟಾಕಿ ಹೋಲ್‍ಸೇಲ್ ವ್ಯಾಪಾರಿಗಳು ಸಮರ್ಪಕ ದಾಖಲೆ ಹಾಜರುಪಡಿಸಿ, ಶುಕ್ರವಾರ ಮಧ್ಯಾಹ್ನದಿಂದಲೇ ವಹಿ ವಾಟು ಆರಂಭಿಸಿದ್ದರು. ಇನ್ನೊಂದೆಡೆ ಜೆ.ಕೆ.ಮೈದಾನ, ಕುವೆಂಪುನಗರ, ಉದಯಗಿರಿ, ವಿವಿಪುರಂ, ಇಟ್ಟಿಗೆ ಗೂಡು ಮತ್ತಿತರೆಡೆ ಮಳಿಗೆ ತೆರೆದಿದ್ದ ಪಟಾಕಿ ಮಾರಾಟಗಾರರು ತೋರಿಸಿದ ದಾಖಲೆ ಹಾಗೂ ನೀಡಿದ ಕಾರಣವನ್ನು ಒಪ್ಪದ ಪೊಲೀಸರು ಮಾರಾಟಕ್ಕೆ ಅವಕಾಶ ನಿರಾಕರಿಸಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಪರಿಶೀಲಿಸಿ ವರದಿ ನೀಡಿದ ನಂತರವಷ್ಟೇ ಅನುಮತಿ ನೀಡುವುದಾಗಿ ತಿಳಿಸಿದ್ದರು.

ಮುಂದುವರಿದ ಪರಿಶೀಲನೆ: ಪಟಾಕಿ ವ್ಯಾಪಾರಿಗಳು ತಂದಿರುವುದು `ಹಸಿರು ಪಟಾಕಿ’ಗಳೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಶನಿವಾರ ಬೆಳಗ್ಗೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಅಧಿಕಾರಿ ಎನ್.ಕವಿತಾ ನೇತೃತ್ವದಲ್ಲಿ ಉಪ ಪರಿಸರ ಅಧಿಕಾರಿ ನೂಬಿಯಾ, ಸಹಾಯಕ ವೈಜ್ಞಾನಿಕ ಅಧಿಕಾರಿ ವನಿತಾ, ಸಹಾಯಕ ಪರಿಸರ ಅಧಿಕಾರಿ ವಿಜಯ ಅವರ ತಂಡ ದೇವರಾಜ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಜು ಅವರ ನೇತೃತ್ವ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಜೆ.ಕೆ.ಮೈದಾನದ 12 ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು. 8 ಮಳಿಗೆಗಳಲ್ಲಿ ಶೇ.70ರಷ್ಟು ಪಟಾಕಿ ಬಾಕ್ಸ್‍ಗಳ ಮೇಲೆ ಹಸಿರು ಪಟಾಕಿ ಲೇಬಲ್ ಆಗಲೀ, ಬಾರ್‍ಕೋಡ್ ಹಾಗೂ ಲೈಸನ್ಸ್ ನಂಬರ್ ಆಗಲೀ ಇಲ್ಲದ ಕಾರಣ ಆ ಪಟಾಕಿಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಚ್ಚರಿಕೆ: ವ್ಯಾಪಾರಿಗಳು, ತಾವು ಖರೀದಿಸಿರುವುದು ಹಸಿರು ಪಟಾಕಿ. ಅನುಮತಿ ಪಡೆದ ಕಂಪನಿಗಳಿಂದಲೇ ಖರೀದಿಸಿದ್ದೇವೆ ಎಂದು ಸಮಜಾಯಿಷಿ ನೀಡಿ ಬಿಲ್ ಹಾಗೂ ಕಂಪನಿ ನೀಡಿದ್ದ ಲೈಸನ್ಸ್ ಪ್ರತಿಯನ್ನು ಪ್ರದರ್ಶಿಸಿದರು. ಆ ದಾಖಲೆಗಳನ್ನು ಪರಿಗಣಿಸದ ಸೈಂಟಿಫಿಕ್ ಆಫೀಸರ್ ಎನ್.ಕವಿತಾ, ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಬಾಕ್ಸ್ ಮೇಲೆ ಹಸಿರು ಪಟಾಕಿ ಲೇಬಲ್, ಲೋಗೋ ಹಾಗೂ ಲೈಸನ್ಸ್ ನಂಬರ್ ಮುದ್ರಿಸಿಲ್ಲದಿದ್ದರೆ ಅಂಥ ಪಟಾಕಿ ಮಾರಾಟಕ್ಕೆ ಅವಕಾಶವಿಲ್ಲ. ಕದ್ದುಮುಚ್ಚಿ ಮಾರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

 

 

Translate »