ಮಕ್ಕಳೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಮೈಸೂರು

ಮಕ್ಕಳೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ

November 15, 2020

ಕುಶಾಲನಗರ, ನ.14- ಮದ್ಯವ್ಯಸನಿ ಪತಿಯ ಕಿರುಕುಳ ತಾಳದೆ ಗೃಹಿಣಿಯೋರ್ವಳು ತನ್ನ ಮೂವರು ಪುಟಾಣಿ ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕೊಡಗು-ಹಾಸನ ಗಡಿಯ ಬನ್ನೂರು ಗ್ರಾಪಂನ ಅರಗಲ್ಲು ಗ್ರಾಮದ ಹಾರಂಗಿ ಎಡ ದಂಡೆ ನಾಲೆಯಲ್ಲಿ ನಡೆದಿದೆ. ಮೂಲತಃ ಚಿತ್ರ ದುರ್ಗ ಜಿಲ್ಲೆಯ ದೇವರಾಜು ಎಂಬಾತನ ಪತ್ನಿ ಚೆನ್ನಮ್ಮ (48) ಎಂಬಾಕೆ ತನ್ನ ಪುತ್ರರಾದ 6 ವರ್ಷದ ವಿಜಯ್, ಮೂರೂವರೆ ವರ್ಷದ ವಿನಯ್ ಮತ್ತು ಪುತ್ರಿ ಎರಡೂ ವರೆ ವರ್ಷದ ದೀಕ್ಷಾ ಅವರೊಂದಿಗೆ ಹಾರಂಗಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿವರ: ಚಿತ್ರದುರ್ಗ ಮೂಲದ ಈ ದಂಪತಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಹೆಬ್ಬಾಲೆ ಗ್ರಾಮಕ್ಕೆ ಶುಂಠಿ ಕೀಳುವ ಕೆಲಸಕ್ಕಾಗಿ ತಮ್ಮ ಸ್ನೇಹಿತರು ಹಾಗೂ ನೆಂಟರ ಜೊತೆ ಬಂದಿದ್ದರು. ಕೂಲಿ ಸಿಕ್ಕಿದ ಕಡೆಗಳಲ್ಲಿ ಕೆಲಸ ಮಾಡಿಕೊಂಡು ಇವರು ಜೀವನ ಸಾಗಿಸುತ್ತಿದ್ದರು. ಆದರೆ ದೇವರಾಜು ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಕುಡಿದು ಬಂದು ಪತ್ನಿ ಚೆನ್ನಮ್ಮಳ ಜೊತೆ ಜಗಳವಾಡು ತ್ತಿದ್ದ ಎಂದು ಹೇಳಲಾಗಿದೆ. ನ.12ರಂದು ರಾತ್ರಿ ಪಾನ ಮತ್ತನಾಗಿ ಬಂದಿದ್ದ ದೇವರಾಜು ಪತ್ನಿ ಜೊತೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದ ಎಂದು ಈ ದಂಪತಿ ಜೊತೆ ಹೆಬ್ಬಾಲೆ ಗ್ರಾಮಕ್ಕೆ ಬಂದಿರುವ ಇತರರು ಪೊಲೀ ಸರಿಗೆ ತಿಳಿಸಿದ್ದಾರೆ. ಅಂದು ರಾತ್ರಿ ನಡೆದ ಗಲಾಟೆಯಿಂದ ಮನನೊಂದಿದ್ದ ಚೆನ್ನಮ್ಮ ನ.13ರಂದು ಎಲ್ಲರೂ ಕೆಲಸಕ್ಕೆ ಹೋದ ಬಳಿಕ ತನ್ನ ಮೂವರು ಮಕ್ಕಳ ಜೊತೆ ಹಾರಂಗಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮೂರು ಮಕ್ಕಳ ಮೃತದೇಹಗಳು ನಾಲೆಯಲ್ಲಿ ತೇಲುತ್ತಿದುದ್ದನ್ನು ಕಂಡ ಸ್ಥಳೀ ಯರು ಕುಶಾಲನಗರ ಗ್ರಾಮಾಂತರ ಪೊಲೀ ಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮೂರು ಮಕ್ಕಳ ಮೃತದೇಹವನ್ನು ವಶ ಪಡಿಸಿಕೊಂಡು, ಚೆನ್ನಮ್ಮಳ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಸಂಜೆ ವೇಳೆಗೆ ಆಕೆಯ ಮೃತ ದೇಹವೂ ಕೂಡ ಪತ್ತೆಯಾಗಿದೆ. ಮೃತ ದೇಹಗಳು ದೊರೆತ ಸ್ಥಳ ಹಾಸನ ಜಿಲ್ಲೆ ಕೊಣ ನೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದರಿಂದ ಕೊಣನೂರು ಪೊಲೀಸರು ಚೆನ್ನಮ್ಮಳ ಸಹೋದರ ಯಲ್ಲಪ್ಪ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಚೆನ್ನಮ್ಮಳ ಪತಿ ದೇವರಾಜುವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

 

 

 

Translate »