ಮೈಸೂರು: ಇಂದು ಸಾಮಾಜಿಕ ಜಾಲ ತಾಣಗಳ ಭರಾಟೆಯಲ್ಲಿ ಪುಸ್ತಕ ಸಂಸ್ಕೃತಿ ಕ್ಷಿಣಿಸುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿ ನಿವಾರಿಸಿ, ಪುಸ್ತಕ ಸಂಸ್ಕೃತಿ ವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಹೇಳಿದರು.
ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂವಹನ ಪ್ರಕಾಶನ ಹೊರತಂದಿರುವ ಡಿ.ನಾಗೇಂದ್ರಪ್ಪ ಅವರ `ತಿರುಳ್ಗನ್ನಡ ತಿರುಕ ಉತ್ತಂಗಿ ಚನ್ನಪ್ಪ’, `ಕರುನಾಡ ಸಿರಿ’, ಡಾ.ರಾಮೇಗೌಡ (ರಾಗೌ) ಅವರ `ಬಿಎಂಶ್ರೀ’ ಹಾಗೂ ಡಾ.ಬಿ.ವಿ.ವಸಂತಕುಮಾರ್ ಅವರ `ಸಮರಸದ ಜೀವ ಸೆಲೆ’ ಎಂಬ ನಾಲ್ಕು ಕೃತಿಗಳನ್ನು ಬಿಡುಗಡೆಗೊಳಿಸಿ, ಅವರು ಮಾತನಾಡಿದರು.
ಪುಸ್ತಕ ಸಂಸ್ಕೃತಿಯೇ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ನಾಲ್ಕು ಪುಸ್ತಕಗಳನ್ನು ಹೊರತಂದಿರುವುದು ಸಾಹಸದ ಕೆಲಸ. ಜೊತೆಗೆ ಈ ಎಲ್ಲಾ ಪುಸ್ತಕಗಳು ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನೇ ಕೇಂದ್ರೀಕರಿಸಿಕೊಂಡು ರಚನೆಗೊಂಡಿರುವುದು ವಿಶೇಷ. ಇಂದು ಫೇಸ್‍ಬುಕ್, ವಾಟ್ಸಪ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣ ಬಳಕೆ ಹೆಚ್ಚುತ್ತಿದ್ದು, ಪರಿಣಾಮ ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು, ಯುವಜನರಲ್ಲಿ ಪುಸ್ತಕ ಸಂಸ್ಕøತಿಯನ್ನು ಬೆಳೆಸುವುದು ಬಹುಮುಖ್ಯವಾಗಿ ಆಗಬೇಕಿದೆ ಎಂದು ತಿಳಿಸಿದರು.
ದಶಕಗಳ ಹಿಂದೆ ಬಹುತೇಕ ಮನೆಗಳಲ್ಲಿ ಗ್ರಂಥಗಳ ಸಂಗ್ರಹ ಕಾಣಬಹುದಿತ್ತು. ಮೊಹಲ್ಲಾಗಳಲ್ಲಿ ಖಾಸಗಿ ಗ್ರಂಥಾಲಯಗಳು ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿದ್ದವು. ಆದರೆ ಈಗ ಇದೆಲ್ಲವೂ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪುಸ್ತಕ ಪ್ರಕಾಶನ ಕಷ್ಟಕರ ಕೆಲಸವಾಗಿದೆ. ಇಂತಹ ಸನ್ನಿವೇಶದಲ್ಲೂ ಸಂವಹನ ಪ್ರಕಾಶನ ಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಡಾ.ರಾಮೇಗೌಡ (ರಾಗೌ) ಅಧ್ಯಕ್ಷತೆ ವಹಿಸಿದ್ದರು. ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್, ಕೃತಿಗಳ ಕರ್ತೃಗಳಾದ ಡಿ.ನಾಗೇಂದ್ರಪ್ಪ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್, ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್.ಲೋಕಪ್ಪ ವೇದಿಕೆಯಲ್ಲಿದ್ದರು. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಸಾಹಿತಿ ಮಲೆಯೂರು ಗುರುಸ್ವಾಮಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.