ಸುಯೋಗ್ ಆಸ್ಪತ್ರೆಯಲ್ಲಿ ನರರೋಗ ವಿಭಾಗ ಆರಂಭ
ಮೈಸೂರು

ಸುಯೋಗ್ ಆಸ್ಪತ್ರೆಯಲ್ಲಿ ನರರೋಗ ವಿಭಾಗ ಆರಂಭ

June 17, 2018

ಮೈಸೂರು:  ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಬ್ರೈನ್ ಸಂಸ್ಥೆಯ ಸಹಯೋಗದಲ್ಲಿ ನರರೋಗ ವಿಭಾಗವನ್ನು ಆರಂಭಿಸಲಾಗಿದ್ದು, ವಿವಿಧ ನರರೋಗಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ಬ್ರೈನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ತಿಳಿಸಿದ್ದಾರೆ.

ಸುಯೋಗ್ ಆಸ್ಪತ್ರೆಯಲ್ಲಿ ಶನಿವಾರ ಹೊಸದಾಗಿ ಆರಂಭಿಸಲಾಗಿರುವ ನರರೋಗ ವಿಭಾಗವನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಯೋಗ್ ಆಸ್ಪತ್ರೆಯಲ್ಲಿ ಮೆದುಳು, ಮೆದುಳಿನ ಬಳ್ಳಿ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಸಮಸ್ಯೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡುವುದಕ್ಕಾಗಿ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ನಿರ್ವಹಿಸುತ್ತಿರುವ ಬ್ರೈನ್ಸ್ ಕೇಂದ್ರ ಇದೀಗ ಮೈಸೂರಿನಲ್ಲೂ ಸೇವೆ ಆರಂಭಿಸಿದೆ. ಅತ್ಯಾಧುನಿಕ ನುರಿತ ವೈದ್ಯರನ್ನು ಸಂಸ್ಥೆ ಹೊಂದಿದೆ. ಅಪಘಾತ, ಮೆದುಳಿನ ರಕ್ತನಾಳಗಳಿಂದ ಉಂಟಾಗುವ ಲಕ್ವ ಸಮಸ್ಯೆಗೆ ಬಹುಬೇಗ ಚಿಕಿತ್ಸೆ ನೀಡಿ ರೋಗಿಗಳನ್ನು ಬದುಕಿಸುವ ವ್ಯವಸ್ಥೆ ಆಸ್ಪತ್ರೆಯಲ್ಲಿದೆ. ವರ್ಷದ ಎಲ್ಲ ದಿನಗಳಲ್ಲಿಯೂ 24 ಗಂಟೆಯೂ ನರರೋಗ ವಿಭಾಗದಲ್ಲಿ ಸೇವೆ ಇರುತ್ತದೆ ಎಂದರು.

ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಆಸ್ಪತ್ರೆಯಲ್ಲಿ 200 ಹಾಸಿಗೆ ಸೌಲಭ್ಯವಿದೆ. ಪರಿಣಾಮಕಾರಿ ತುರ್ತು ಚಿಕಿತ್ಸಾ ಘಟಕವಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಮೊದಲು ಶುಲ್ಕ ನಂತರ ಎಂಬ ಆಶಯವನ್ನು ನಾವು ಅಳವಡಿಸಿಕೊಂಡಿದ್ದೇವೆ ಎಂದರು.

ಸುದ್ದಿಗೋಷ್ಠೀಯಲ್ಲಿ ನರರೋಗ ವೈದ್ಯೆ ಡಾ.ಭವಾನಿ ಆನಂದ್, ನರರೋಗ ಶಸ್ತ್ರಚಿಕಿತ್ಸಕ ಡಾ.ಅನಿಲ್ ಸಾಂಗ್ಲಿ, ಬ್ರೈನ್ಸ್ ಸಿಇಒ ಡಾ.ಪಿ.ಪ್ರಭಾಕರ್, ಸುಯೋಗ್ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥಾಪಕ ರಾಜೇಂದ್ರ ಪ್ರಸಾದ್ ಇದ್ದರು.

Translate »