ಮಹಾರಾಜ ಸಲೂನ್ ಮೈಸೂರು ರೈಲ್ವೆ ಮ್ಯೂಸಿಯಂಗೆ ಹಿಂದಿರುಗಿಸಿ
ಮೈಸೂರು

ಮಹಾರಾಜ ಸಲೂನ್ ಮೈಸೂರು ರೈಲ್ವೆ ಮ್ಯೂಸಿಯಂಗೆ ಹಿಂದಿರುಗಿಸಿ

February 9, 2022

ಮೈಸೂರು, ಫೆ.8(ಆರ್‍ಕೆಬಿ)- ನವದೆಹಲಿಯ ರಾಷ್ಟ್ರೀಯ ರೈಲು ವಸ್ತು ಸಂಗ್ರಹಾಲಯದಲ್ಲಿರುವ ಮೈಸೂರು ಮಹಾರಾಜರ ಸಲೂನ್ ಅನ್ನು ಮೈಸೂರು ರೈಲ್ವೆ ಮ್ಯೂಸಿಯಂಗೆ ನೀಡುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಮೈಸೂರು ದೊರೆಗಳು ಸ್ಥಾಪಿಸಿದ ರೈಲ್ವೆ ವ್ಯವಸ್ಥೆ ಐತಿಹಾಸಿಕ ಹಿನ್ನೆಲೆಯ ದೃಷ್ಟಿಯಿಂದ ಮೈಸೂರಿನ ಈ ಮಹಾರಾಜ ಸಲೂನ್ ಅನ್ನು ಮೈಸೂರಿಗೆ ವಾಪಸ್ ನೀಡುವುದರಿಂದ ಮೈಸೂರಿನ ರೈಲ್ವೆ ವಸ್ತು ಸಂಗ್ರಹಾಲಯದ ಹಿರಿಮೆ ಹೆಚ್ಚುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಒಡೆಯರ್ ರಾಜವಂಶಸ್ಥರು 1399-1947 ರವರೆಗೆ ಮೈಸೂರು ಸಾಮ್ರಾಜ್ಯವನ್ನು ಸುದೀರ್ಘ ಕಾಲ ಆಳ್ವಿಕೆ ನಡೆಸಿದ್ದರು. ಮಾದರಿ ರಾಜ್ಯದ ವಾಸ್ತುಶಿಲ್ಪಿ ಎಂದು ಪ್ರಶಂಸಿಸಲ್ಪಟ್ಟ 10ನೇ ಮಹಾರಾಜ ಚಾಮರಾಜ ಒಡೆ ಯರ್ (1863-1894), 1881ರಲ್ಲಿ ಮೈಸೂರು ಪ್ರತಿನಿಧಿ ಸಭೆಯನ್ನು ದೇಶದ ಮೊದಲ ಪ್ರಜಾಪ್ರಭುತ್ವ ಸಂಸ್ಥೆ ಯಾಗಿ ರಚಿಸಿದ್ದರು. ಅವರ ಉತ್ತರಾಧಿಕಾರಿ, ಮಹಾ ರಾಜ ನಾಲ್ಕನೇ ಕೃಷ್ಣರಾಜ ಒಡೆಯರ್ (1894-1940) ಅವರನ್ನು ಮಹಾತ್ಮಾ ಗಾಂಧೀಜಿಯವರು ರಾಜರ್ಷಿ ಎಂದು ಸಂಬೋಧಿಸಿ, ಗೌರವಿಸಿದ್ದರು. ಅವರ ಆಡಳಿತ ಎಷ್ಟರ ಮಟ್ಟಿಗೆ ಖ್ಯಾತಿ ಗಳಿಸಿತ್ತು ಎಂದರೆ ಭಾರತದ ಇತರ ಭಾಗಗಳ ರಾಜರು ತರಬೇತಿಗಾಗಿ ಮೈಸೂರಿಗೆ ಆಗಮಿಸುತ್ತಿದ್ದರು.

ಮೈಸೂರು ರಾಜ್ಯದ ಸಾಂವಿಧಾನಿಕ ಸ್ವರೂಪದ ಆಡಳಿತ ಪ್ರಯೋಗಗಳು ಇತರ ಭಾರತೀಯ ರಾಜ್ಯ ಗಳಿಗೂ ವಿಸ್ತರಣೆಯಾಗಿ ಮಾದರಿಯಾಗಿ ಕಾರ್ಯ ನಿರ್ವಹಿಸಿತು. ಬಡತನ ನಿರ್ಮೂಲನೆ, ಗ್ರಾಮೀಣ ಮೂಲಸೌಕರ್ಯ ಸುಧಾರಣೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ ಮತ್ತು ರೈಲ್ವೆಗೆ ಅವರ ಆಡಳಿತದಲ್ಲಿ ಆದ್ಯತೆ ನೀಡಲಾಗಿತ್ತು. ಅವರು ಕಲೆ ಮತ್ತು ಸಂಸ್ಕೃತಿಯ ಮಹಾನ್ ಪೆÇೀಷಕರಾಗಿ ದ್ದರು. ಸುಮಾರು 760 ಮೈಲುಗಳಷ್ಟು ರೈಲುಮಾರ್ಗ ಮತ್ತು ಟ್ರಾಮ್ವೇಗಳ ಕೊಡುಗೆ ನೀಡಿದ್ದರು. ರಾಜ್ಯದಲ್ಲಿ ಪ್ರಮುಖ ರೈಲ್ವೆ ಯೋಜನೆಗಳ ನಿರ್ಮಾಣವು ತ್ವರಿತ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ. ಮೈಸೂರು ಬ್ರಿಟಿಷ್ ಭಾರತದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿದೆ.

ಮೈಸೂರಿನ ದೊರೆ 24ನೇ ಕೃಷ್ಣರಾಜ ಒಡೆಯರ್ ಈ ಸಲೂನ್ ಅನ್ನು ಬಳಸುತ್ತಿದ್ದರು. ಮೂಲತಃ, ಇದು ಮಹಾರಾಣಿಯ ಕೋಚ್ (ಸಿಆರ್- 7342) ಮತ್ತು ಡೈನಿಂಗ್-ಕಂ-ಕಿಚನ್ ಕಾರ್ (ಸಿಆರ್- 7345) ರೈಲುಗಳನ್ನು ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ.

ಹಿಂದಿನ ರಾಜವಂಶಸ್ಥರ ಅದ್ಭುತ ಕೊಡುಗೆಯನ್ನು ಪುರಸ್ಕರಿಸಿ, ರಾಜ್ಯದ ಜನರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಮೈಸೂರು ವಿಮಾನ ನಿಲ್ದಾಣ ಮತ್ತು ಮೈಸೂರು ರೈಲು ನಿಲ್ದಾಣಕ್ಕೆ ಮೈಸೂರು ಸಾಮ್ರಾಜ್ಯದ ಮಹಾರಾಜರ ಹೆಸರನ್ನು ಮರುನಾಮಕರಣ ಮಾಡಲು ಚಿಂತನೆ ನಡೆಸುತ್ತಿದೆ. ಅದೇ ರೀತಿ, ಮೈಸೂರು ಮಹಾರಾಜರ ಸಲೂನ್ ಅನ್ನು ನವೀಕರಿಸಿದ ಮೈಸೂರು ರೈಲು ವಸ್ತು ಸಂಗ್ರಹಾ ಲಯಕ್ಕೆ ವಾಪಸು ನೀಡಿದರೆ ಇದರಿಂದ ಮೂಲ 3 ಕ್ಯಾರೇಜ್ ರಾಯಲ್ ವಿಶೇಷ ರೈಲುಗಳು ಗತಕಾಲದ ಮೆಲುಕು ಹಾಕಲು ಅನುವಾಗುತ್ತದೆ. ಮಹಾರಾಜರ ಸಲೂನ್ ಇಲ್ಲಿದ್ದರೆ ವಸ್ತು ಸಂಗ್ರಹಾಲಯದ ಪರಂ ಪರೆಯ ಮೌಲ್ಯವೂ ಗಮನಾರ್ಹವಾಗಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮನವಿಯನ್ನು ಪುರಸ್ಕರಿಸುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ.

Translate »