ಮೈಸೂರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಜಯಂತಿ
ಮೈಸೂರು

ಮೈಸೂರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಜಯಂತಿ

September 28, 2021

ಮೈಸೂರು,ಸೆ.27(ಪಿಎಂ)- ಮೈಸೂರು ಸಮಾನ ಮನಸ್ಕರ ಬಳಗದ ವತಿಯಿಂದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಅವರ 114ನೇ ಜಯಂತಿಯನ್ನು ಆಚರಿಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಭಗತ್‍ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ಕೊಡುಗೆ ಸ್ಮರಿಸಿ, ಗೌರವ ಸಲ್ಲಿಸಲಾಯಿತು.

ಪುಷ್ಪ ನಮನ ಸಲ್ಲಿಸಿದ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಮಾತನಾಡಿ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. `ಬ್ರಿಟಿಷರು ನನ್ನನ್ನು ಕೊಲ್ಲಬಹುದು. ಆದರೆ ನನ್ನ ಚಿಂತನೆಗಳನ್ನು ಕೊಲ್ಲಲಾರರು’ ಎಂಬ ಅವರ ನುಡಿಮುತ್ತು ಎಂದಿಗೂ ಅಜರಾಮರ ಎಂದರು.

ತಮ್ಮ 23ನೇ ವಯಸ್ಸಿನಲ್ಲೇ ಬ್ರಿಟಿಷರಿಂದ ನೇಣುಗಂಬಕ್ಕೇರಿದ ಭಗತ್‍ಸಿಂಗ್, `ನನ್ನ ದೇಹವನ್ನು ಹೊಸಕಿ ಹಾಕಬಹುದು. ಆದರೆ ನನ್ನ ಸ್ಫೂರ್ತಿ ಹೊಸಕಿ ಹಾಕಲು ಸಾಧ್ಯವೇ ಇಲ್ಲ’ ಎಂದು ಅಬ್ಬರಿಸುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮಹಾನ್ ಯುವ ಚೇತನ ಎಂದು ಸ್ಮರಿಸಿದರು. ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ನಿರ್ದೇಶಕರಾದ ಜೆ.ಯೋಗೇಶ್, ಹೆಚ್.ಹರೀಶ್‍ಕುಮಾರ್, ದಿ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿ.ಮಧು, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಎನ್.ಬೆಟ್ಟೇಗೌಡ, ಸಮಾಜ ಸೇವಕ ಸಿ.ಜಿ.ಗಂಗಾಧರ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಗುರುರಾಜ್, ಮುಖಂಡರಾದ ಟೆನ್ನಿಸ್ ಗೋಪಿ, ಸೊಪ್ಪನಕೇರಿ ಶೇಖರ್, ಮಂಜು, ದರ್ಶನ್, ರಾಜೇಶ್, ಸುರೇಂದ್ರ, ಸಿ.ಡಿ.ಕುಮಾರ್ ಮತ್ತಿತರರು ಹಾಜರಿದ್ದರು.

Translate »