ದಸರಾ ಆಚರಣೆ ಈಗ ನಮ್ಮ ಮುಂದಿರುವ ಸವಾಲು
ಮೈಸೂರು,ಸೆ.29(ಆರ್‍ಕೆ)-ಮೈಸೂರಿನ ನೂತನ ಜಿಲ್ಲಾಧಿಕಾರಿ ಯಾಗಿ ರೋಹಿಣಿ ಸಿಂಧೂರಿ ದಾಸರಿ ಮಂಗಳವಾರ ಬೆಳಗ್ಗೆ ಅಧಿಕಾರ ವಹಿಸಿಕೊಂಡರು. ಸೋಮವಾರ ಸಂಜೆಯಷ್ಟೇ ಸರ್ಕಾರ ಧಾರ್ಮಿಕ ಮತ್ತು ಚಾರಿಟೆಬಲ್ ಎಂಡೋಮೆಂಟ್ಸ್ ಆಯುಕ್ತರಾಗಿದ್ದ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಅವರು ಮೈಸೂರು ಡಿಸಿ ಕಚೇರಿಯಲ್ಲಿ ದಾಖಲಾತಿಗಳಿಗೆ ಸಹಿ ಮಾಡುವ ಮೂಲಕ ಅಧಿಕಾರ ವಹಿಸಿಕೊಂಡರು.
ಬೆಳಗ್ಗೆ 11.15 ಗಂಟೆಗೆ ಆಗಮಿಸಿದ ರೋಹಿಣಿ ಸಿಂಧೂರಿ ಅವ ರನ್ನು ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಉಪವಿಭಾಗಾ ಧಿಕಾರಿ ವೆಂಕಟರಾಜು, ತಹಸೀಲ್ದಾರ್ ಜಾನ್ಸನ್ ಸೇರಿದಂತೆ ಹಲವು ಅಧಿಕಾರಿಗಳು ರೋಹಿಣಿ ಸಿಂಧೂರಿ ಅವರಿಗೆ ಪುಷ್ಪಗುಚ್ಛ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು. ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಲು ನನಗೆ ಸಂತೋಷವಾಗು ತ್ತಿದೆ. ಇಂದು ಬೆಳಗ್ಗೆಯಷ್ಟೇ ಮೈಸೂರಿಗೆ ಬಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿದೇವಿ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದರ್ಶನ ಮಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ.
ಜಿಲ್ಲಾಧಿಕಾರಿಯಾಗಿ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಪ್ರಸ್ತುತ ಕೋವಿಡ್-19 ಸೋಂಕು ನಿಯಂತ್ರಿಸುವುದು ಹಾಗೂ ಕೊರೊನಾ ನಡುವೆ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ನಮ್ಮ ಮುಂದಿರುವ ಸವಾಲು. ಮೊದಲು ಇಂದು ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿ, ನಿರ್ವಹಣೆ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಅವರು ತಿಳಿಸಿದರು.
ಬೆಂಗಳೂರನ್ನು ಹೊರತುಪಡಿಸಿದರೆ ಮೈಸೂರಿನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗುತ್ತಿವೆ. ಈ ಮಹಾಮಾರಿ ಹರಡದಂತೆ ನಿಯಂತ್ರಿಸುವುದು ನಮ್ಮ ಮೊದಲ ಆದ್ಯತೆಯಾಗಿರು ವುದರಿಂದ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಲು ಪ್ರಯತ್ನಿಸುತ್ತೇವೆ ಎಂದ ಅವರು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ರೋಗ ಲಕ್ಷಣ ಕಂಡಾಗ ಆರಂಭದಲ್ಲೇ ಸ್ಪಾಟ್ ಟೆಸ್ಟ್ ಮಾಡಿಸಿ ಕೊಂಡರೆ, ಚಿಕಿತ್ಸೆ, ಆರೈಕೆ ಮಾಡಿ ರೋಗ ಉಲ್ಬಣವಾಗದಂತೆ ತಡೆಯಬಹುದಲ್ಲದೇ ಸಾವಿನ ಸಂಖ್ಯೆಯನ್ನೂ ನಿಯಂತ್ರಿಸಬಹುದು. ಜಿಲ್ಲಾಡಳಿತದೊಂದಿಗೆ ಜನರು ಸಹಕರಿಸಬೇಕೆಂದು ಮನವಿ ಮಾಡಿ ಕೊಂಡರು. ಆಗಿಂದಾಗ್ಗೆ ಸಭೆಗಳನ್ನು ನಡೆಸಿ ರ್ಯಾಪಿಡ್ ಆ್ಯಂಟಿಜೆನ್ ಕಿಟ್‍ಗಳ ಮೂಲಕ ಪರೀಕ್ಷೆ ನಡೆಸಿ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತೇವೆ. ಸಾರ್ವಜನಿ ಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್‍ನಿಂದ ಆಗಿಂದಾಗ್ಗೆ ಕೈ ಸ್ವಚ್ಛಮಾಡಿಕೊಂಡು ತಪ್ಪದೇ ಮಾಸ್ಕ್ ಧರಿಸಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಹಕರಿಸಬೇಕೆಂದರು.
ದಸರಾ ಆಚರಣೆ: ಕೋವಿಡ್ ಪರಿಸ್ಥಿತಿಯಲ್ಲಿ ನಾಡಹಬ್ಬ ದಸರಾ ಮಹೋತ್ಸವ ಆಚರಿಸಬೇಕಾಗಿದೆ. ಮೈಸೂರಿನ ಜನರು ಸುಸಂಸ್ಕøತರು. ನಿಯಮ, ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸುತ್ತಾರೆಂಬ ವಿಶ್ವಾಸವಿದೆ. ಹಾಸನದಲ್ಲಿದ್ದಾಗ ಶ್ರವಣಬೆಳಗೊಳದ ಗೊಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ ಮಾಡಿದ್ದೇವೆ. ಅದು ಸಹಸ್ರಾರು ಮಂದಿ ಸೇರುವ ಕಾರ್ಯಕ್ರಮ. ಆದರೆ ಇದೇ ಮೊದಲ ಬಾರಿ ಮೈಸೂರು ದಸರಾ ಮಹೋತ್ಸವ ಆಚರಿಸುವ ಅತಿರಥ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡು ವುದಾಗಿ ನುಡಿದರು. ನನಗೆ ಮೈಸೂರು ಚೆನ್ನಾಗಿ ಗೊತ್ತು. ಇಲ್ಲಿನ ಆಡಳಿತ ತರಬೇತಿ ಸಂಸ್ಥೆಯಲ್ಲೇ ನಾನು ಪ್ರೊಬೇಷನರಿಯಾಗಿ ತರಬೇತಿ ಪಡೆದಿರುವುದರಿಂದ ಮೈಸೂರು ಹೊಸದೇನಲ್ಲ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನರ ಸಹಕಾರದಿಂದ ಉತ್ತಮ ಕೆಲಸ ಮಾಡಬಹುದೆಂಬ ವಿಶ್ವಾಸವಿದೆ ಎಂದು ಅವರು ಇದೇ ವೇಳೆ ನುಡಿದರು.