SSLC ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ನೆರವು
ಮಂಡ್ಯ

SSLC ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ನೆರವು

July 17, 2021

ಮಂಡ್ಯ, ಜು.16(ಮೋಹನ್‍ರಾಜ್)- ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ರೋಟರಿ ಸಂಸ್ಥೆ ಗಳು ಒಗ್ಗೂಡಿ ಸುಮಾರು 20 ಸಾವಿರದ 716 ಗುಣಮಟ್ಟದ ಮಾಸ್ಕ್‍ಗಳನ್ನು ವಿತರಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಡಿಡಿಪಿಐ ರಘುನಂದನ್ ತಿಳಿಸಿದರು.

ನಗರದಲ್ಲಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಬಳಿ ಶುಕ್ರವಾರ ಸಕ್ಕರೆ ನಾಡು ರೋಟರಿ ಸಂಸ್ಥೆ, ಮಂಡ್ಯ ರೋಟರಿ ಸಂಸ್ಥೆ, ಯಲಹಂಕ ರೋಟರಿ ಸಂಸ್ಥೆ, ಐಟಿ ಕಾರಿಡಾರ್ ರೋಟರಿ ಸಂಸ್ಥೆ ಸಹಯೋಗದಲ್ಲಿ ಕೋವಿಡ್- 19ರ 2ನೇ ಅಲೆ ಸಂಕಷ್ಟಕರ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮಾಸ್ಕ್ ವಿತರಣೆ ಕಾರ್ಯದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳು 21 ಸಾವಿರಕ್ಕೂ ಹೆಚ್ಚಿದ್ದು, ಅವರಿಗೆಲ್ಲಾ ಆರೋಗ್ಯ ಮತ್ತು ಪರೀಕ್ಷೆ ಎದುರಿಸುವ ನೈತಿಕ ಸ್ಥೈರ್ಯ ತುಂಬಲು ರೋಟರಿ ಸಂಸ್ಥೆ ಸಹಾಯ ಮಾಡಿದೆ, ಗುಣಮಟ್ಟದ ಮಾಸ್ಕ್‍ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಿರು ವುದು ಮಾನವೀಯತೆ ಗುಣವಾಗಿದೆ ಎಂದು ನುಡಿದರು.

ಕೋವಿಡ್-19ರ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ಕೇಂದ್ರವೆಂದು ಸಚಿವರು ಘೋಷಿಸಿದ್ದಾರೆ, ಪರೀಕ್ಷೆಗೆ ಹಾಜರಾಗುವ ಮಕ್ಕಳ ಆರೋಗ್ಯದ ಸುರಕ್ಷತೆ ಕಾಪಾಡುವುದು ಸರ್ಕಾರದ ಜವಬ್ದಾರಿ ಯಾಗಿದ್ದು, ಸೂಕ್ತ ಕ್ರಮಕೈಗೊಳ್ಳಲಾಗಿದೆ. ರೋಟರಿ ಸಂಸ್ಥೆ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವುದು ಹೆಮ್ಮೆ ತರುತ್ತದೆ ಎಂದರು.

ಬಳಿಕ ಮಾತನಾಡಿದ ರೊಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ರಮೇಶ್, ಪ್ರಸ್ತುತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲಿ, ಕಳೆದ ವರ್ಷದಂತೆ ಈ ವರ್ಷವೂ ರೋಟರಿ ಸಂಸ್ಥೆಗಳು ಆರೋಗ್ಯ ಕಾಳಜಿಗೆ ನೆರವಾಗಿವೆ. ಭವಿಷ್ಯದ ವಿದ್ಯಾರ್ಥಿಗಳು ಕೀರ್ತಿತರುವ ಫಲಿತಾಂಶ ದಾಖಲಿಸಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಂಡ್ಯ ಜಿಲ್ಲಾ ಸಹ ಪಾಲಕ ಸಿ.ಪ್ರಶಾಂತ್, ಸಕ್ಕರೆ ನಾಡು ರೋಟರಿ ಸಂಸ್ಥೆಯ ಅಧ್ಯಕ್ಷ ವಿನಯ್, ಮಂಡ್ಯ ರೋಟರಿ ಸಂಸ್ಥೆಯ ಅಧ್ಯಕ್ಷ ಬರ್ನಾಡಪ್ಪ, ಮಾಜಿ ಅಧ್ಯಕ್ಷರುಗಳಾದ ರಮೇಶ್, ಮಹೇಂದ್ರಬಾಬು, ವಸಂತಕುಮಾರ್, ವಿನಯ್, ಶಿವಕುಮಾರ್ ಸೋಮಶೇಖರ್, ಮಂಜುನಾಥ್, ಅನುಪಮಾ ಮತ್ತಿತರರು ಪಾಲ್ಗೊಂಡಿದ್ದರು.

Translate »