ಬೆಂಗಳೂರು, ನ.3- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಈ ನಡುವಲ್ಲೇ ಮತಗಟ್ಟೆಯಲ್ಲಿ ಮತದಾರರಿಗೆ ನೀಡಲಾಗಿರುವ ಗ್ಲೌಸ್‍ಗಳನ್ನು ಮತದಾರರು ಎಲ್ಲೆಂದರಲ್ಲಿ ಬಿಸಾಡಿ ಹೋಗಿ ರುವುದು ಕಂಡು ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಮತದಾರರಿಗೆ ಹ್ಯಾಂಡ್ ಗ್ಲೌಸ್ ನೀಡಲಾಗುತ್ತಿದೆ. ಆದರೆ, ಚುನಾವಣಾ ಆಯೋಗದ ಈ ನಿರ್ಧಾರ ಮತ್ತೊಂದು ಸಮಸ್ಯೆಯನ್ನು ಸೃಷ್ಟಿ ಮಾಡಿದೆ. ಬೂತ್ ನಂಬರ್ 137 ರಿಂದ 139ರ ಮುಂಭಾಗ ಚುನಾವಣಾ ಸಿಬ್ಬಂದಿ ನೀಡಿದ ಹ್ಯಾಂಡ್ ಗ್ಲೌಸ್‍ಗಳು ಬೇಕಾಬಿಟ್ಟಿಯಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ. ರಸ್ತೆಯುದ್ದಕ್ಕೂ ಹಲವಾರು ಗ್ಲೌಸ್‍ಗಳು ಬಿದ್ದಿವೆ.
ಕೆಲ ಮತಕ್ಷೇತ್ರಗಳಲ್ಲಿ ಹ್ಯಾಂಡ್ ಗ್ಲೌಸ್‍ಗಳನ್ನು ಬಿಸಾಡಲು ವ್ಯವಸ್ಥೆಗಳನ್ನು ಮಾಡದಿರದ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಬೂತ್ 141, 141/ಂ ನಲ್ಲಿ ಕಸದ ಬುಟ್ಟಿ ವ್ಯವಸ್ಥೆ ಇಲ್ಲ. ಆದರೆ 143, 153 ನಲ್ಲಿ ಕಸದ ಬುಟ್ಟಿಯ ವ್ಯವಸ್ಥೆ ಮಾಡಲಾಗಿದೆ.