ನಟ ವಿನೋದ್ ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ ಕಳ್ಳತನ!
ಮೈಸೂರು

ನಟ ವಿನೋದ್ ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ ಕಳ್ಳತನ!

September 29, 2018

ಬೆಂಗಳೂರು:  ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಕನ್ನಡ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್‍ರಾಜ್ ಅವರ ಗಮನ ಬೇರೆಡೆ ಸೆಳೆದ ಕಳ್ಳರು ಕಾರಿನಲ್ಲಿದ್ದ 1 ಲಕ್ಷ ರೂ. ಕದ್ದೊಯ್ದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ಶುಕ್ರವಾರ ತಮ್ಮ ತೋಟದ ಕೆಲಸಗಾರರಿಗೆ ವೇತನ ಪಾವತಿಸುವ ಸಲುವಾಗಿ ವಿನೋದ್ ರಾಜ್ ಅವರು ಬ್ಯಾಂಕ್‍ನಿಂದ ಒಂದು ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ತಂದಿದ್ದರು. ನೆಲಮಂಗಲ ಪಟ್ಟಣದ, ಇಂಡಸ್‍ಲ್ಯಾಂಡ್ ಬ್ಯಾಂಕ್‍ನಿಂದ ಹಣ ತಂದಿದ್ದ ನಟ ಕಾರನ್ನು ಸಿಎನ್‍ಆರ್ ಬಟ್ಟೆ ಮಳಿಗೆ ಸಮೀಪ ನಿಲ್ಲಿಸಿದ್ದಾಗ ಅಲ್ಲಿಗೆ ಆಗಮಿಸಿದ ಇಬ್ಬರು ಅಪರಿಚಿತರು
“ಏನ್ ಸರ್, ಚೆನ್ನಾಗಿದ್ದೀರಾ?” ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಬಳಿಕ ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಅದನ್ನು ರಿಪೇರಿ ಮಾಡಿಕೊಡುತ್ತೇವೆಂದು ಹೇಳಿದ ಕಳ್ಳರು ವಿನೋದ್ ರಾಜ್ ಕಣ್ ತಪ್ಪಿಸಿ ಕಾರಿನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ನೆಲಮಂಗಲ ಪೊಲೀಸರಿಗೆ ದೂರು ಸಲ್ಲಿಸಿರುವ ನಟ “ಲಕ್ಷ ರೂ. ಕಳೆದು ಹೋಗಿರುವುದು ನನಗೆ ಬಹಳ ಸಮಸ್ಯೆಯಾಗಿದೆ” ಎಂದು ಮಾಧ್ಯಮದವರ ಬಳಿ ನೋವು ತೋಡಿಕೊಂಡಿದ್ದಾರೆ. ಹಣ ಕಳ್ಳತನದ ಕುರಿತಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Translate »