33 ಕೋಟಿ ಸಾಲ ಬಾಕಿಗಾಗಿ ಮೈಸೂರಲ್ಲಿ ವಾಣಿಜ್ಯ  ಸಂಕೀರ್ಣಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಬೀಗಮುದ್ರೆ
ಮೈಸೂರು

33 ಕೋಟಿ ಸಾಲ ಬಾಕಿಗಾಗಿ ಮೈಸೂರಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಬೀಗಮುದ್ರೆ

July 5, 2018

2001ರಲ್ಲಿ ಪಡೆದ 1.91 ಕೋಟಿ ಸಾಲ 17 ವರ್ಷಗಳ ನಂತರ 33 ಕೋಟಿಗೆ ಬೆಳೆದಿದೆ!
ಮೈಸೂರು:  ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಮೈಸೂರಿನ ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯ ಜಂಕ್ಷನ್‍ನಲ್ಲಿರುವ ನಾಲ್ಕು ಅಂತಸ್ತಿನ ವಾಣ ಜ್ಯ ಸಂಕೀರ್ಣಕ್ಕೆ ಡೆಟ್ ರಿಕವರಿ ಟ್ರಿಬ್ಯೂನಲ್ (ಡಿಆರ್‍ಟಿ) ಆದೇಶ ದಂತೆ ಬೀಗಮುದ್ರೆ ಹಾಕಲಾಯಿತು.

ವಾಣಿಜ್ಯ ಕಟ್ಟಡ ಮಾಲೀಕರು ಕುವೆಂಪು ನಗರ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಪಡೆದಿದ್ದ 1.91 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದಂತೆ 2001ರಿಂದ ಇಲ್ಲಿವರೆಗೆ ತ್ರೈಮಾಸಿಕ ಶೇ.18ರಷ್ಟು ಬಡ್ಡಿ ಒಳ ಗೊಂಡಂತೆ ಒಟ್ಟು 33 ಕೋಟಿ ರೂ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ ಬೀಗ ಜಡಿದು ಮುಟ್ಟುಗೋಲು ಹಾಕಿಕೊಳ್ಳ ಲಾಯಿತು. ಡಿಆರ್‍ಟಿ-2 (ಸಾಲ ವಸೂಲಾತಿ ನ್ಯಾಯಪೀಠ) ಆದೇಶದಂತೆ ನ್ಯಾಯಪೀಠ ನಿಯೋಜಿಸಿದ್ದ ವಕೀಲ ಆಯುಕ್ತರ ನೇತೃತ್ವ ಹಾಗೂ ವಿಜಯಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಯಿತು. ಬನ್ನೂರು ಮೂಲದ ಮೈಸೂರು ನಿವಾಸಿ ಎಂ.ನಾಗರಾಜು ಅವರ ಮಾಲೀಕತ್ವದಲ್ಲಿರುವ ಈ ಕಟ್ಟಡ ದಲ್ಲಿ ಹಲವು ಮಳಿಗೆಗಳಿದ್ದು, ಕಟ್ಟಡ ಮಾಲೀಕರು ಸಾಲ ಮರುಪಾವತಿ ಮಾಡದ ಕಾರಣಕ್ಕೆ ಇದೀಗ ಮಳಿಗೆಗಳ ಬಾಡಿಗೆ ದಾರರು ಈಗ ಸಂಕಷ್ಟ ಅನುಭವಿಸುವಂತಾ ಗಿದೆ. ಎಂ.ನಾಗರಾಜು ತಮ್ಮ ಸ್ಥಿರಾಸ್ತಿಯಾದ ವಾಣ ಜ್ಯ ಸಂಕೀರ್ಣ ಆಧಾರ ಮಾಡಿ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕಳೆದ ವರ್ಷ ನಾಗರಾಜು ಅವರ ಕುವೆಂಪುನಗರದ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ಆ ಬಳಿಕ ನಾಗರಾಜು ತಮ್ಮ ವಾಣ ಜ್ಯ ಕಟ್ಟಡದ ಕೊಠಡಿಯೊಂದ ರಲ್ಲಿ ವಾಸವಿದ್ದರು ಎನ್ನಲಾಗಿದೆ. ಕಟ್ಟಡ ಮಳಿಗೆಗೆ ಬೀಗ ಮುದ್ರೆ ಹಾಕುವ ಮುನ್ನ ಮಳಿಗೆಗಳ ಲ್ಲಿದ್ದ ಸರಕುಗಳ ವಿವರಗಳನ್ನು ದಾಖಲು ಮಾಡಿಕೊಳ್ಳಲಾಯಿತು. ಜೊತೆಗೆ ವಿಡೀಯೋ ಚಿತ್ರೀಕರಣ, ಫೋಟೋಗ್ರಾಫಿಕ್ಸ್ ಸಹ ಮಾಡ ಲಾಯಿತು. ಸರಸ್ವತಿಪುರಂ ಪೊಲೀಸರು ಹಾಗೂ ವಿಜಯಾ ಬ್ಯಾಂಕಿನ ಭದ್ರತಾ ಸಿಬ್ಬಂದಿ ಬೆಂಗಾವಲಿನಲ್ಲಿ ಮುಟ್ಟುಗೋಲು ಕಾರ್ಯಾಚರಣೆ ನಡೆಯಿತು.

ಮಳಿಗೆಗಳಿಗೆ ಬೀಗಮುದ್ರೆ ಹಾಕುವ ಪ್ರಕ್ರಿಯೆ ವೇಳೆ ಸ್ಥಳ ದಲ್ಲಿ ಸಾರ್ವಜನಿಕರು
ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸ್ತಿದ್ದರು. ಕಟ್ಟಡ ಮಾಲೀಕ ನಾಗರಾಜು ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಮುಟ್ಟುಗೋಲು ಪ್ರಕ್ರಿಯೆ ನಡೆಸುತ್ತಿದ್ದ ಬ್ಯಾಂಕ್ ಸಿಬ್ಬಂದಿ ಎದುರಾದರು. ಈ ವೇಳೆ ನಾಗರಾಜು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಇದೇ ವೇಳೆ ಸ್ಥಳದಲ್ಲಿದ್ದ ಕಟ್ಟಡ ಮಾಲೀಕ ನಾಗರಾಜು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನನ್ನ ವಾಣ ಜ್ಯ ಸಂಕೀರ್ಣ ಹಾಗೂ ಮನೆ ಆಧಾರದಲ್ಲಿ 1.45 ಕೋಟಿ ರೂ. ಸಾಲ ಪಡೆದಿದ್ದೆ. ಈಗಾಗಲೇ ಡಿಆರ್‍ಟಿ ನಿರ್ದೇಶನದಂತೆ ಕಳೆದ ತಿಂಗಳವರೆಗೂ ಮಳಿಗೆಗಳ ಬಾಡಿಗೆದಾರರಿಂದ ಬಂದ ಬಾಡಿಗೆ ಹಣವನ್ನು ಬ್ಯಾಂಕ್‍ನವರೇ ಪಡೆದು ಕೊಂಡಿದ್ದಾರೆ. ಅದರಂತೆ ಈಗಾಗಲೇ 48 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಸಾಲಕ್ಕೆ ಸಂಬಂಧಿಸಿದಂತೆ ಇದುವರೆಗೆ 2 ಕೋಟಿ ರೂ.ಗೂ ಅಧಿಕ ಹಣವನ್ನು ಪಾವತಿ ಮಾಡಿದ್ದೇನೆ. ಸಾಲ ಮರುಪಾವತಿಗಾಗಿ ನಿನ್ನೆಯಷ್ಟೇ 1.3 ಕೋಟಿ ಡಿಡಿ ತೆಗೆದುಕೊಂಡು ಬ್ಯಾಂಕ್‍ಗೆ ತೆರಳಿದ್ದೆ. ಆದರೆ ಅದನ್ನು ಅವರು ಪರಿಗಣ ಸಲಿಲ್ಲ. ಮುಟ್ಟುಗೋಲು ಹಾಕಿಕೊಳ್ಳಬಾರದೆಂದು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶದ ಕಾಲಾವಧಿ ಇಂದಿಗೂ ಇದ್ದು, ಹೀಗಿದ್ದರೂ ಡಿಆರ್‍ಟಿ ಮೂಲಕ ಬಂದು ಈ ರೀತಿ ಮಾಡುತ್ತಿದ್ದಾರೆ. ಬ್ಯಾಂಕಿನ ಉನ್ನತ ಅಧಿಕಾರಿಯೊಬ್ಬರು ವೈಯಕ್ತಿಕ ದ್ವೇಷದಿಂದ ಕಾಲಾವಕಾಶ ನೀಡದೆ ಹೀಗೆಲ್ಲಾ ಮಾಡಲಾಗುತ್ತಿದ್ದು, ಆತ್ಮಹತ್ಯೆ ಮಾಡಿ ಕೊಳ್ಳುವ ಮನಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ನೊಂದು ನುಡಿದರು.

ಇದೇ ವೇಳೆ ಸದರಿ ವಾಣ ಜ್ಯ ಸಂಕೀರ್ಣದ ಪ್ರಮುಖ ಮಳಿಗೆಯಾದ ಮೋಹನ್ ಭಂಡಾರ್ ಸೂಪರ್ ಮಾರ್ಕೆಟ್ ವಾಣಿಜ್ಯ ಸಂಸ್ಥೆಯ ಪರ ವಕೀಲ ಜಯಪ್ರಕಾಶ್ ಮಾತನಾಡಿ, ಈ ವ್ಯಾಜ್ಯಕ್ಕೂ ಮೋಹನ್ ಭಂಡಾರ್‍ಗೂ ಯಾವುದೇ ಸಂಬಂಧವಿಲ್ಲ. ಕಟ್ಟಡ ಮಾಲೀಕರು ಮಾಡಿದ ಸಾಲದ ಹಿನ್ನೆಲೆಯಲ್ಲಿ ಮುಟ್ಟುಗೋಲು ಹಾಕಿಕೊಳ್ಳ ಲಾಗುತ್ತಿದೆ. ಹೀಗಾಗಿ ಕಟ್ಟಡದಲ್ಲಿರುವ ನಮ್ಮ ಮಳಿಗೆಗೂ ಬೀಗ ಜಡಿಯುವ ಅನಿವಾರ್ಯ ಎದುರಾಗಿದೆ. ಆದರೆ ನಮ್ಮ ಸಂಸ್ಥೆಯ ಸರಕುಗಳು ಸಾಲ ವಸೂಲಿ ವ್ಯಾಪ್ತಿಗೆ ಬರುವುದಿಲ್ಲ. ವಹಿವಾಟು ನಷ್ಟಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮುಂದುವರೆಯಬೇಕಾ ಗುತ್ತದೆ ಎಂದು ವಿವರಿಸಿದರು. ಮೋಹನ್ ಭಂಡಾರ್ ಮಳಿಗೆ ಮಾಲೀಕ ಸಂದೀಪ್ ಮಾತನಾಡಿ, ನಮ್ಮ ಸಂಸ್ಥೆಯು ಯಾವುದೇ ವಿವಾದಗಳಿಗೆ ಸಿಲುಕದೇ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಇಂದಿನ ವ್ಯಾಜ್ಯ ಏನಿದ್ದರೂ ಕಟ್ಟಡ ಮಾಲೀಕರು ಹಾಗೂ ಬ್ಯಾಂಕಿಗೆ ಸಂಬಂಧಿಸಿದ ವಿಚಾರವಾಗಿದೆ. ನಾವು ಕೂಡ ಬೀಗ ಮುದ್ರೆ ಹಾಕಬಾರದೆಂದು ಸಂಬಂಧಿಸಿದವರಿಗೆ ಮನವಿ ಮಾಡಿದೆವು. ಆದರೆ ಯಾವುದೇ ಪ್ರಯೋಜವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Translate »