ಡಿಕೆಶಿಯಲ್ಲಿ ಇನ್ನು ಪವರ್ ಇದೆ…ರೇವಣ್ಣಗೆ ವಾಸ್ತು ಪ್ರಕಾರ ಮುಂದ್ಗಡೆ ಸೀಟ್…
ಮೈಸೂರು

ಡಿಕೆಶಿಯಲ್ಲಿ ಇನ್ನು ಪವರ್ ಇದೆ…ರೇವಣ್ಣಗೆ ವಾಸ್ತು ಪ್ರಕಾರ ಮುಂದ್ಗಡೆ ಸೀಟ್…

July 5, 2018

ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನದ 3ನೇ ದಿನವಾದ ಇಂದು ಹಲವಾರು ಸ್ವಾರಸ್ಯ ಕರ ಸನ್ನಿವೇಶಗಳು ಕಂಡುಬಂದವು. ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತಮ್ಮ ಪಂಚಿಂಗ್ ಡೈಲಾಗ್ ಗಳು ಕೆಲವರನ್ನು ತಬ್ಬಿಬ್ಬಾಗಿಸಿದರೆ, ಉಳಿ ದವರನ್ನು ನಗೆಗಡಲಲ್ಲಿ ಮುಳುಗಿಸಿದವು.

ಡಿಕೆಶಿ ಪವರ್ರು: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸದನಕ್ಕೆ ತಡವಾಗಿ ಆಗಮಿಸಿದಾಗ `ಶಭಾಷ್, ಡಿ.ಕೆ.ಶಿವಕುಮಾರ್ ಅವರು ಕೊನೆಗೂ ಆಗಮಿಸಿದರು. ಅವರಿಗೆ ಸ್ವಾಗತ’ ಎಂದು ಛೇಡಿಸಿದರು. ಡಿ.ಕೆ.ಶಿವಕುಮಾರ್ ಅವರು ತಮ್ಮ ಆಸನದಲ್ಲಿ ಆಸೀನರಾಗುತ್ತಿದ್ದಂತೆಯೇ ಕರೆಂಟ್ ಬಂತು. ಆಗ `ಏನೇ ಆದರೂ ಶಿವಕುಮಾರ್ ಅವರೇ ಪವರ್… ನೋಡಿ ಅವರು ಬಂದ್ರು, ಲೈಟೂ ಬಂತು…’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ವಾಸ್ತು ಪ್ರಕಾರ: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಯ ಸಾಲಿಗೆ ಹೋದರೂ ಅವರನ್ನು ಬಿಡಲೊಲ್ಲರು. ಸಿದ್ದರಾಮಯ್ಯ ಪಕ್ಕ ಕುಳಿತು ರೇವಣ್ಣ ಮಾತನಾಡುತ್ತಿದ್ದುದನ್ನು ಗಮನಿಸಿದ ಸಭಾಧ್ಯಕ್ಷರು, `ರೇವಣ್ಣ ನೀವು ಮುಂದ್‍ಗಡೆ ಕೂತರೇನೆ ಭೂಷಣ… ನೀವು ನಿಮ್ಮ ಜಾಗದಲ್ ಕೂತ್ಕೊಂಡ್ರೆ ಎಷ್ಟ್ ಸಂತೋಷ ಆಗತ್ತು ಅಂದರು. ಆಗ ರೇವಣ್ಣ `ಮುಂದ್ ಗಡೆ ಹಿರಿಯರಿಗೆ ಅವಕಾಶ ನೀಡಿ ದ್ದೀವಿ, ನಾನ್ ಇಲ್ಲೇ ಕೂತ್ಕೋತೀನಿ’ ಎಂದಾಗ `ಮುಂದ್‍ಗಡೆ ನಿಮ್ ಸೀಟು ವಾಸ್ತು ಪ್ರಕಾರನೇ ಇದೆ, ಬನ್ನಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆಗ ಶಾಸಕರೊಬ್ಬರು `ಸಭಾಧ್ಯಕ್ಷರೇ ನೀವು ರೇವಣ್ಣ ಅವರಿಗೆ ವಾಸ್ತು ಪ್ರಕಾರನೇ ಸೀಟ್ ಕೊಡಬೇಕು’ ಎಂದಾಗ ಧ್ವನಿ ಗೂಡಿಸಿದ ಕೆ.ಎಸ್.ಈಶ್ವರಪ್ಪ `ಅವರ್ ಕೂತ್ಕೋಳ್ಳೋಕೆ ಟೈಮ್ ಕೂಡ ವಾಸ್ತು ಪ್ರಕಾರನೇ ಫಿಕ್ಸ್ ಮಾಡಬೇಕು’ ಎಂದಾಗ ಸಭೆ ನಗೆಗಡಲಲ್ಲಿ ಮುಳುಗಿತು. ತಕ್ಷಣ ರೇವಣ್ಣ ಅವರು ನನಗೆ ಹಾಗೇನೂ ಇಲ್ಲ ಎಂದು ನಗು ನಗುತ್ತಲೇ, ಎರಡನೇ ಸಾಲಿನ ತಮ್ಮ ಆಸನಕ್ಕೆ ಬಂದು ಕುಳಿತರು.

ಸಂತೆ ನೆನಪಾಗುತ್ತೆ: ಸದನದಲ್ಲಿ ಶಾಸಕರು ಅತ್ತಿಂದಿತ್ತ-ಇತ್ತಿಂದತ್ತ ಓಡಾಡುತ್ತಿದ್ದನ್ನು ಗಮನಿಸಿದ ರಮೇಶ್ ಕುಮಾರ್, `ಏನ್ ಹೀಗ್ ಓಡಾಡ್ತಿದೀರಿ… ನೀವ್ ಓಡಾಡ್ತಾ ಇರೋದ್ ನೋಡಿದ್ರೆ ನನಗೆ ಬಾಲ್ಯದಲ್ಲಿ ಸಂತೆ ನೋಡಿದ ನೆನಪಾಗುತ್ತೆ’ ಎಂದು ಹಾಸ್ಯಭರಿತವಾಗಿ ಹೇಳಿದಾಗ ಎಚ್ಚೆತ್ತು ಕೊಂಡ ಶಾಸಕರು ಅವರವರ ಸ್ಥಳಕ್ಕೆ ಹೋಗಿ ಆಸೀನರಾದರು.

ನಾನೇ ಕರೀತೀನಿ: ರಾಯಚೂರು ಶಾಸಕ ಬಸವರಾಜ ಗದ್ದಲ್ ಅವರು ಸಭಾಧ್ಯಕ್ಷರ ಅನುಮತಿಯೇ ಇಲ್ಲದೇ ಮಾತನಾಡಲಾ ರಂಭಿಸಿದಾಗ ಸಭಾಧ್ಯಕ್ಷರು `ಏನಪ್ಪಾ… ನಿನ್ನಷ್ಟಕ್ಕೆ ನೀನ್ ಮಾತಾಡ್ಕೊಂಡ್ ಹೋದರೆ ನಾನ್ ಯಾಕ್ ಇಲ್ಲಿ ಕೂತಿರೋದು… ಒಂದು ನಿಮಿಷ ಕೂತ್ಕೋ… ನಾನೇ ಕರೀತೀನಿ’ ಎಂದರು.

ನೋಡಿ, ನಾನಿಲ್ಲಿದ್ದೀನಿ: ಕಪ್ಪು ಕನ್ನಡಕ ಧರಿಸಿ ಸದನಕ್ಕೆ ಆಗಮಿಸಿದ್ದ ಗೋವಿಂದ ಕಾರಜೋಳ ಅವರು ತಮ್ಮ ಮಾತಿನ ಸರದಿ ಯಲ್ಲಿ ಪದೇ ಪದೆ ಕನ್ನಡಕ ಸರಿಪಡಿಸಿ ಕೊಳ್ಳುತ್ತಾ ಅತ್ತಿಂದಿತ್ತ ನೋಡುತ್ತಾ ಮಾತ ನಾಡುತ್ತಿದ್ದರು. ಅದನ್ನು ಗಮನಿಸಿದ ರಮೇಶ್ ಕುಮಾರ್, `ನೋಡಿ ನಾನ್ ಇಲ್ಲಿದ್ದೀನಿ… ನನ್ ಕಡೆ ನೋಡ್ಕೊಂಡ್ ಮಾತಾಡಿ… ಕನ್ನಡ್ಕ ಹಾಕ್ಕೊಂಡ್ ಎಲ್ಲೆಲ್ಲೋ ನೋಡ್ಕೊಂಡ್ ಮಾತಾಡ್ತಾ ಇದ್ದೀರಲ್ಲಾ’ ಎಂದಾಗ ಕಾರ ಜೋಳ ಸೇರಿದಂತೆ ಎಲ್ಲಾ ಸದಸ್ಯರು ನಗೆಗಡ ಲಲ್ಲಿ ಮುಳುಗಿದರು. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸಭಾ ನಾಯಕಿಯೂ ಆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರನ್ನು `ಸಹಕಾರಿ ಸಚಿವ ಜಿ.ಟಿ.ದೇವೇಗೌಡರು’ ಎಂದು ಸಂಬೋಧಿಸಿದಾಗ ದೇವೇಗೌಡರು ಸೇರಿದಂತೆ ಇಡೀ ಸದನ ನಗೆಗಡಲಲ್ಲಿ ತೇಲಿತು. ಆನಂತರ ಸಾವರಿಸಿಕೊಂಡ ಜಯ ಮಾಲ, ತಮ್ಮ ತಪ್ಪನ್ನು ತಿದ್ದಿಕೊಂಡರು.

Translate »