ಬಜೆಟ್ ಅಧಿವೇಶನಕ್ಕೆ ತೆರೆ, ಮುಂದಿನ ಅಧಿವೇಶನ  ಬೆಳಗಾವಿಗೆ ಶಿಫ್ಟ್
ಮೈಸೂರು

ಬಜೆಟ್ ಅಧಿವೇಶನಕ್ಕೆ ತೆರೆ, ಮುಂದಿನ ಅಧಿವೇಶನ  ಬೆಳಗಾವಿಗೆ ಶಿಫ್ಟ್

July 14, 2018

ಬೆಂಗಳೂರು: 11 ದಿನಗಳ ಬಜೆಟ್ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಮುಂದಿನ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‍ಗೆ ಅಂಗೀಕಾರ, ರೈತರ ಸಾಲ ಮನ್ನಾ ಮೊತ್ತವನ್ನು 40 ಸಾವಿರ ಕೋಟಿ ರುಪಾಯಿಗೆ ಏರಿಕೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಅಧಿವೇಶನ ದಲ್ಲಿ ತೆಗೆದುಕೊಳ್ಳಲಾಗಿದೆ. ನಿನ್ನೆ ಬಿಜೆಪಿ ಸಭಾತ್ಯಾಗದ ಮಧ್ಯೆಯೇ ಕರ್ನಾಟಕ ಧನವಿನಿಯೋಗ ವಿಧೇಯಕ, ಮೋಟಾರು ವಾಹನಗಳ ತೆರಿಗೆ ವಿಧೇಯಕ, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ವಿಧೇಯಕ ಹಾಗೂ ಕರ್ನಾಟಕ

ವಿದ್ಯುಚ್ಛಕ್ತಿ ವಿಧೇಯಕಗಳಿಗೆ ವಿಧಾನಸಭೆ ಅಂಗೀಕಾರ ನೀಡಿತ್ತು. ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ವಿಧಾನಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದು, ಮುಂದಿನ ಅಧಿವೇಶನ ನವೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆಯಲಿದೆ.

ವಿಧಾನ ಪರಿಷತ್ ಕಲಾಪಕ್ಕೆ ನಿನ್ನೆಯೇ ತೆರೆ ಬಿದ್ದಿದ್ದು, ಮುಂದಿನ ತಿಂಗಳು ನಿವೃತ್ತಿ ಹೊಂದಲಿರುವ ಬಿಜೆಪಿಯ ಕೆ.ಬಿ.ಶಾಣಪ್ಪ ಮತ್ತು ತಾರಾ ಅನುರಾಧ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಪರಿಷತ್ ಸಭಾನಾಯಕಿ ಜಯಮಾಲಾ ಹಾಗೂ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಕೆ.ಬಿ.ಶಾಣಪ್ಪ ಮತ್ತು ತಾರಾ ಅನುರಾಧ ಅವರು ಮಾದರಿ ಪರಿಷತ್ ಸದಸ್ಯರಾಗಿದ್ದರು ಎಂದರು.

Translate »