ಅನೇಕ ಪೊಲೀಸ್ ಠಾಣೆಗಳಲ್ಲಿ ಕೇಸ್‍ಗಳಿರುವ ಸ್ಯಾಂಟ್ರೋ ರವಿಗೆ ಹಲವು ಸಚಿವರ ಸಖ್ಯ!?
News

ಅನೇಕ ಪೊಲೀಸ್ ಠಾಣೆಗಳಲ್ಲಿ ಕೇಸ್‍ಗಳಿರುವ ಸ್ಯಾಂಟ್ರೋ ರವಿಗೆ ಹಲವು ಸಚಿವರ ಸಖ್ಯ!?

January 5, 2023

ಬೆಂಗಳೂರು, ಜ.4-ಹತ್ತಾರು ಕೇಸ್‍ಗಳನ್ನು ಹಾಕಿಸಿ ಕೊಂಡಿರುವ ಸ್ಯಾಂಟ್ರೋ ರವಿಗೆ ಯಾವ್ಯಾವ ಮಂತ್ರಿ ಜೊತೆ ಸಂಬಂಧವಿದೆ? ನನ್ನ ಸರ್ಕಾ ರವನ್ನು ಪತನಗೊಳಿಸಲು ಮುಂಬೈಗೆ ತೆರಳಿದ್ದವರು ಮೋಜು ಮಾಡಲು 12 ಯುವತಿಯರನ್ನು ಕಳುಹಿಸಿಕೊಟ್ಟಿದ್ದು ಯಾರು? ಆ ಯುವತಿಯರನ್ನು ಮುಂಬೈಗೆ ಕರೆ ದೊಯ್ದವರು ಯಾರು ಎಂಬು ದನ್ನು ದಮ್ಮು, ತಾಕತ್ತು ಇದ್ದರೆ ಮುಖ್ಯಮಂತ್ರಿಗಳು ಜನತೆಗೆ ತಿಳಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಭಾವಿ ಶಾಸಕರ ಜೊತೆ ಸ್ಯಾಂಟ್ರೋ ರವಿಗೆ ಇರುವ ಸಂಬಂಧದ ಬಗ್ಗೆ ಉನ್ನತ ಮಟ್ಟದ ತನಿಖೆಯಾ ಗಬೇಕೆಂದು ತಾವು ಆಗ್ರಹಿಸುವುದಾಗಿ ತಿಳಿಸಿದ ಅವರು, ಆತನೊಂದಿಗೆ ಫೋಟೋದಲ್ಲಿ ಫೋಸ್ ಕೊಟ್ಟಿರುವ ಸಚಿವರ ಕೆಲ ಭಾವಚಿತ್ರಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದರು.

ಸ್ಯಾಂಟ್ರೋ ರವಿಯೊಂದಿಗೆ ಬಿಜೆಪಿ ಸರ್ಕಾರದ ಯಾವ ಮಂತ್ರಿ ಸಂಪರ್ಕದಲ್ಲಿ ಇಲ್ಲಾ ಹೇಳಿ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ಯಾರು? ಈ ಸರ್ಕಾರದಲ್ಲಿ ಯಾರೊಂದಿಗೆ ಈತನ ಸಂಪರ್ಕವಿದೆ. ಇವನ ಬಗ್ಗೆ ಮಾಹಿತಿಯನ್ನು ರಹಸ್ಯವಾಗಿ ಡುವಂತೆ ಯಾರಿಗೆ ಸೂಚನೆ ಕೊಟ್ಟಿದ್ದೀರಿ ಎಂದು ಮುಖ್ಯ ಮಂತ್ರಿಗಳನ್ನುದ್ದೇಶಿಸಿ ಕುಮಾರಸ್ವಾಮಿ ಪ್ರಶ್ನೆ ಎಸೆದರು.

ಸ್ಯಾಂಟ್ರೋ ರವಿ ವಿರುದ್ಧ 1995ರಿಂದಲೇ ಕೇಸ್‍ಗಳಿವೆ. ಕೇವಲ ಯಾವುದೋ ಒಂದು ಠಾಣೆಯಲ್ಲಿ ಮಾತ್ರ ಕೇಸ್ ಇದೆ ಎಂದು ಹೇಳಲಾಗುವುದಿಲ್ಲ. ಮೈಸೂರಿನ ನಜರ್‍ಬಾದ್, ಕುವೆಂಪುನಗರ, ನರಸಿಂಹರಾಜ, ಮಂಡಿ, ಬೆಂಗಳೂರಿನ ಜಯನಗರ, ಮೈಕೋ ಲೇಔಟ್,
ಜೆ.ಪಿ.ನಗರ, ತಿಲಕ್‍ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಇವನ ಮೇಲೆ ಗಂಭೀರ ಪ್ರಕರಣಗಳು ದಾಖಲಾಗಿವೆ. ಇಂತಹ ವ್ಯಕ್ತಿ ಪೊಲೀಸರಿಗೆ ಧಮ್ಕಿ ಹಾಕುತ್ತಾನೆ. ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ದಂಧೆ ನಡೆಸುತ್ತಾನೆ ಎಂದ ಅವರು, ಡಿವೈಎಸ್‍ಪಿ ಅವರಿಗೆ ತನ್ನನ್ನು `ಸಾರ್’ ಎಂದು ಕರೆಯಬೇಕು ಎಂದು ದಭಾಯಿಸುತ್ತಾನೆ. ಮುಖ್ಯಮಂತ್ರಿಗಳೇ ನನ್ನನ್ನು ಸಾರ್ ಎಂದು ಕರೆಯುತ್ತಾರೆ. ಆಫ್ಟ್ರಾಲ್ ಡಿಎಸ್‍ಪಿ ನೀನು ನನ್ನನ್ನು `ಸಾರ್’ ಎಂದು ಕರೆಯುವುದಿಲ್ಲವೇ ಎಂದು ದಭಾಯಿಸುತ್ತಾನೆ. ಯಾರೋ ಇನ್ಸ್‍ಪೆಕ್ಟರ್‍ಗೆ 50 ಲಕ್ಷ ರೂ. ಮಾತನಾಡಿಕೊಂಡು ಕುಂಬಳಗೋಡು ಠಾಣೆಗೆ ವರ್ಗಾವಣೆ ಮಾಡಿಸಿದ್ದಾನಂತೆ. ಅವರು 25 ಲಕ್ಷ ರೂ. ಕೊಟ್ಟು, ಉಳಿದ 25 ಲಕ್ಷ ರೂ. ಕೊಡಬೇಕಾಗಿದೆಯಂತೆ. ಇನ್ಸ್‍ಪೆಕ್ಟರೊಬ್ಬರಿಗೆ ನೆಲಮಂಗಲ ಸಂಚಾರ ಅಥವಾ ದೊಡ್ಡಬಳ್ಳಾಪುರಕ್ಕೆ ಡಿಸೆಂಬರ್‍ನಲ್ಲಿ ಟ್ರಾನ್ಸ್‍ಫರ್ ಮಾಡಿಸುತ್ತೇನೆ ಎಂದು ಹೇಳುತ್ತಾನೆ. ಕುಮಾರ ಕೃಪಾದಲ್ಲಿ ಇದ್ದೀನಿ, ಬಾ ಎಂದು ಡಿವೈಎಸ್‍ಪಿಯನ್ನು ಕರೆಯುತ್ತಾನೆ. ಇದೆಲ್ಲಾ ಆಡಿಯೋ ರೆಕಾರ್ಡ್ ಇದೆ. ಇಂತಹ ವ್ಯಕ್ತಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಾನೆ. ಅವರನ್ನೇ ದಭಾಯಿಸುತ್ತಾನೆ ಎಂದಾದರೆ, ರಾಜ್ಯದಲ್ಲಿ ಪೊಲೀಸರು ಹ್ಯಾಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ನನಗಿರುವ ಮಾಹಿತಿ ಪ್ರಕಾರ ಸ್ಯಾಂಟ್ರೋ ರವಿಯೊಂದಿಗೆ ಕೋಟ್ಯಾಂತರ ರೂ. ವ್ಯವಹಾರ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಮಾಹಿತಿ ತರಿಸಿಕೊಂಡಿದ್ದೇನೆ. ಒಂದು ತಿಂಗಳ ಹಿಂದಿನವರೆಗೂ ಸ್ಯಾಂಟ್ರೊ ರವಿ ಕುಮಾರ ಕೃಪಾದಲ್ಲಿ ಇದ್ದುಕೊಂಡು ವ್ಯವಹಾರ ನಡೆಸುತ್ತಿದ್ದ. ಇವನಿಗೆ ಕುಮಾರ ಕೃಪಾದಲ್ಲಿ ಕೊಠಡಿ ಕೊಟ್ಟವರು ಯಾರು? ಕೊಠಡಿ ಕೊಡುವಂತೆ ಶಿಫಾರಸು ಮಾಡಿದವರು ಯಾರು? ಎಂಬುದನ್ನು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು. ಪೊಲೀಸರಿಂದ ಬಂಧಿಸಲ್ಪಡಬೇಕಾದ ವ್ಯಕ್ತಿ ಸಚಿವರುಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಹಾಗಾದರೆ ಈ ಸಚಿವರಿಗೂ ಅವನಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಮಂತ್ರಿ ನಾಗೇಶ್ ಅವರೊಂದಿಗೆ ಅದ್ಯಾಗೆ ಫೋಟೋ ತೆಗೆಸಿಕೊಂಡನೋ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ಮೈಸೂರಿನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾಳೆ. ಅದು ಎಫ್‍ಐಆರ್ ಆಗಿದೆ. ಒಡನಾಡಿಯವರು ನಿಂತು ಎಫ್‍ಐಆರ್ ಮಾಡಿಸಿದ್ದಾರೆ ಎಂದ ಕುಮಾರಸ್ವಾಮಿ, ಇಂತಹ ನೀಚನ ಹೆಗಲ ಮೇಲೆ ಕೇಸರಿ ಟವಲ್ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳಲೂ ಕೂಡ ಬಿಜೆಪಿಯವರು ನಾಚಿಕೆ ಪಡುವುದಿಲ್ಲ ಎಂದರಲ್ಲದೇ, ನಮ್ಮನ್ನು ಟ್ರೋಲ್ ಮಾಡ್ತಾರಲ್ಲಾ, ಬಿಜೆಪಿ ಸೋಷಿಯಲ್ ಮೀಡಿಯಾದವರು ದಮ್ಮು, ತಾಕತ್ತು ಇದ್ದರೆ ಈ ವಿಷಯವನ್ನು ಟ್ರೋಲ್ ಮಾಡಲಿ ಎಂದು ಸವಾಲು ಹಾಕಿದರು.

Translate »