ಪದವೀಧರೆ ಮೇಲೆ ಅತ್ಯಾಚಾರ,ಜಾತಿ ನಿಂದನೆ:ಸ್ಯಾಂಟ್ರೋ ರವಿ ವಿರುದ್ಧ ಕೇಸ್ ದಾಖಲು
ಮೈಸೂರು

ಪದವೀಧರೆ ಮೇಲೆ ಅತ್ಯಾಚಾರ,ಜಾತಿ ನಿಂದನೆ:ಸ್ಯಾಂಟ್ರೋ ರವಿ ವಿರುದ್ಧ ಕೇಸ್ ದಾಖಲು

January 5, 2023

ಮೈಸೂರು, ಜ.4-ಪದವೀಧರೆಯನ್ನು ಅತ್ಯಾಚಾರ ಮಾಡಿ, ಬಲವಂತವಾಗಿ ಮದುವೆಯಾದ ನಂತರ ಜಾತಿ ನಿಂದನೆ ಮಾಡಿರುವ ಬಗ್ಗೆ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವರ: ಸ್ಯಾಂಟ್ರೋ ರವಿ ಮೊದಲಿಗೆ ಫೈನಾನ್ಷಿ ಯಲ್ ಅಸಿಸ್ಟೆಂಟ್ ಹುದ್ದೆಗೆ ಬೇಕಾಗಿದ್ದಾರೆ ಎಂದು ಪತ್ರಿಕೆಯಲ್ಲಿ 2019ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಜಾಹೀರಾತು ನೀಡಿದ್ದಾನೆ. ಜಾಹೀರಾತಿನಲ್ಲಿದ್ದ ಮೊಬೈಲ್ ಸಂಖ್ಯೆಗೆ ಮೈಸೂರಿನ ವಿಜಯನಗರ ನಿವಾಸಿ 27 ವರ್ಷ ವಯಸ್ಸಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ 2019ರ ಮಾರ್ಚ್ 2ರಂದು ಕರೆ ಮಾಡಿ ದಾಗ, ಸ್ಯಾಂಟ್ರೊ ರವಿ ಆಫೀಸ್ ಬಾಯ್ ಎನ್ನಲಾದ ಮಧುಸೂದನ್ ಯುವತಿಯ ಮನೆ ಬಳಿಗೇ ತೆರಳಿ ಆಕೆ ಮತ್ತು ಆಕೆಯ ತಂಗಿಯನ್ನು ವಿಜಯನಗರ 4ನೇ ಹಂತದ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಮನೆಯ ಮುಂಭಾಗ ಯಾವುದೇ ನಾಮಫಲಕ ಇರಲಿಲ್ಲ. ಹಾಲ್‍ನಲ್ಲಿ “ಶ್ರೀ ಕುಕ್ಕೆ ಸುಬ್ರಹ್ಮಣ್ಯ ಎಂಟರ್ ಪ್ರೈಸಸ್” ಎಂಬ ಬೋರ್ಡ್ ಜೊತೆಗೆ “ಕೆ.ಎಸ್. ಮಂಜುನಾಥ್, ಬಿ.ಎ., ಫೈನಾನ್ಷಿಯರ್” ಎಂಬ ಬೋರ್ಡ್ ಕೂಡ ಇದ್ದು, ಆತ ಯುವತಿ ಯನ್ನು ಸಂದರ್ಶನ ನಡೆಸಿ, ಆಕೆಯ ವಿದ್ಯಾಭ್ಯಾಸ ಹಾಗೂ ಕೌಟುಂಬಿಕ ವಿವರಗಳನ್ನು ತಿಳಿದುಕೊಂಡು ವಾಪಸ್ ಕಳುಹಿಸಿದ್ದಾನೆ. ಕೆಲ ನಿಮಿಷಗಳಲ್ಲೇ ಆಕೆಯ ಮೊಬೈಲ್‍ಗೆ “ಯು ಆರ್ ಸೆಲೆಕ್ಟೆಡ್” ಎಂಬ ಮೆಸೇಜ್ ಕಳುಹಿಸಿದ ನಂತರ ಯುವತಿಗೆ ಆತನೇ ಹೊಸ ಮೊಬೈಲ್ ಮತ್ತು ಸಿಮ್ ಕಾರ್ಡ್ ಅನ್ನು ಆಕೆಯ ಹೆಸರಿನಲ್ಲೇ ಕೊಡಿಸಿದ್ದಾನೆ. ಈ ಯುವತಿ ಅದೇ ವರ್ಷ ಮಾರ್ಚ್ 7ರಂದು ಕೆಲಸಕ್ಕೆ ಹಾಜರಾಗಿದ್ದಾಳೆ. ಅಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಆಫೀಸ್ ಬಾಯ್ ಮಧುಸೂದನ್, ಆಕೆಗೆ ಜ್ಯೂಸ್ ನೀಡಿದ್ದಾನೆ. ಅದನ್ನು ಕುಡಿದ ಕೆಲವೇ ನಿಮಿಷಗಳಲ್ಲಿ ಯುವತಿ ಪ್ರಜ್ಞಾಹೀನಳಾಗಿದ್ದು, ಮಧ್ಯಾಹ್ನ 3.30ರ ಸುಮಾರಿನಲ್ಲಿ ಪ್ರಜ್ಞೆ ಬಂದಾಗ ಆಕೆ ನಗ್ನ ಸ್ಥಿತಿಯಲ್ಲಿ ಕಚೇರಿಯ ರೂಂ ಮಂಚದ ಮೇಲೆ ಮಲಗಿದ್ದು, ಪಕ್ಕದಲೇ ಸ್ಯಾಂಟ್ರೊ ರವಿ ಕುಳಿತಿದ್ದ. ಆಕೆಯ ನಗ್ನ ಫೋಟೋಗಳನ್ನು ತೋರಿಸಿದ್ದಲ್ಲದೇ, ಪೊಲೀಸರಿಗೆ ದೂರು ನೀಡಿದರೆ ಕಚೇರಿಯಲ್ಲಿ 10 ಲಕ್ಷ ರೂ. ಕದ್ದಿರುವುದಾಗಿ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 2019ರ ಏಪ್ರಿಲ್ ತಿಂಗಳಿನಲ್ಲಿ ಸ್ಯಾಂಟ್ರೊ ರವಿ, ತನ್ನ ಅಣ್ಣ ಎಂದು ಶಶಿಭೂಷಣ್ ಎಂಬ ವಕೀಲರನ್ನು ಪರಿಚಯಿಸಿದ್ದಲ್ಲದೇ, ಶ್ರೀರಾಂಪುರದಲ್ಲಿರುವ ಅವರ ಮನೆಯಲ್ಲೇ ಮೇ 8ರಂದು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ, ಆಗ ಈ ವಿಚಾರ ತನ್ನ ತಂದೆಗೆ ತಿಳಿದಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಕೆ ತಿಳಿಸಿದ್ದಾಳೆ. 2019ರ ಜೂನ್ ತಿಂಗಳ ಒಂದು ದಿನ ತಾನು ಸ್ಯಾಂಟ್ರೊ ರವಿಯ ಮನೆಗೆ ಹೋಗದಿದ್ದಾಗ ಆತ ತಮ್ಮ ತಂದೆ ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾನೆ. ಜುಲೈ ತಿಂಗಳಿನಲ್ಲಿ ತನಗೆ ಲೈಂಗಿಕ ಸೋಂಕು ತಗುಲಿರುವುದು ಸ್ತ್ರೀರೋಗ ತಜ್ಞರಿಂದ ಖಚಿತವಾಗಿದ್ದು, ಸ್ಯಾಂಟ್ರೊ ರವಿಗೆ ಸೋಂಕು ಇರುವ ಮಾಹಿತಿ ಇದ್ದರೂ ಕೂಡ ಅದನ್ನು ಮುಚ್ಚಿಟ್ಟು ಮುನ್ನೆಚ್ಚರಿಕೆ ಕ್ರಮ ವಹಿಸದೇ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಅದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆತ ತನ್ನನ್ನು ವಿಜಯನಗರದ ಮನೆಯಿಂದ ಓಡಿಸಿದ್ದು, ತವರು ಮನೆಯಲ್ಲಿದ್ದಾಗ ಸ್ಯಾಂಟ್ರೊ ರವಿ ಖಾಸಗಿ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿ, ಅಲ್ಲಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. 2020ರ ಮಾರ್ಚ್‍ನಲ್ಲಿ ನಾವಿಬ್ಬರೂ ಕುವೆಂಪುನಗರದ ಅಪಾರ್ಟ್ ಮೆಂಟ್‍ವೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದೆವು. ಆ ವೇಳೆ 10 ಲಕ್ಷ ರೂ. ವರದಕ್ಷಿಣೆ ತರಬೇಕೆಂದು ಒತ್ತಾಯಿಸಿದ್ದಾನೆ. ಅಲ್ಲದೇ, ನಮ್ಮ ತಂದೆಯ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಸೇಲ್ ಡೀಡ್ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಲ್ಲದೇ, ಮನೆ ಬರೆದು ಕೊಡದೇ ಹೋದರೆ ನಿಮ್ಮ ಮನೆಯಲ್ಲೇ ಡ್ರಗ್ಸ್ ಇಟ್ಟು ಕೇಸ್ ದಾಖಲಿಸುತ್ತೇನೆ. ಕಳ್ಳತನದ ಆರೋಪದಲ್ಲಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. 2021ರ ಏಪ್ರಿಲ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ತನ್ನ ಹೆಸರಿನಲ್ಲಿ ಮೈಸೂರಿನ ವಿವಿಧ ಹೋಟೆಲ್‍ಗಳಲ್ಲಿ ರೂಂ ಬುಕ್ ಮಾಡಿದ್ದ ಆತ, ಅಲ್ಲಿ ತನ್ನನ್ನು ಇರಿಸಿಕೊಂಡಿದ್ದ. 2021ರ ನವೆಂಬರ್ 22ರಲ್ಲಿ ನಾವಿಬ್ಬರು ಬೆಂಗಳೂರಿನ ಶೇಷಾದ್ರಿಪುರಂನ ಹೋಟೆಲ್‍ವೊಂದರ ಬಳಿ ಮನೆ ಬಾಡಿಗೆಗೆ ವಾಸವಿ ದ್ದೆವು ಎಂದು ತಿಳಿಸಿರುವ ಯುವತಿ, ತಾನು ಗರ್ಭಿಣಿಯಾದಾಗ ಆತ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಲೈಂಗಿಕ ಕ್ರಿಯೆ ನಡೆಸುವಾಗ ವಿಕೃತವಾಗಿ ವರ್ತಿಸುತ್ತಿದ್ದ. ನಂತರ ತನ್ನ ಹಾಗೂ ತಂಗಿಯ ಮೇಲೆ ಬೆಂಗಳೂರಿನ ಕಾಟನ್‍ಪೇಟೆ ಠಾಣೆಯಲ್ಲಿ ಸುಳ್ಳು ಕೇಸು ಹಾಕಿಸಿ ಜೈಲಿಗೆ ಕಳುಹಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ವಿವಾಹಿತನಾಗಿದ್ದು, ಈ ವಿಚಾರವನ್ನು ಮುಚ್ಚಿಟ್ಟು ನನ್ನನ್ನು ಬಲಾತ್ಕಾರ ಹಾಗೂ ಬ್ಲಾಕ್‍ಮೇಲ್ ಮಾಡಿ 2ನೇ ವಿವಾಹವಾಗಿ ದ್ದಾನೆ. ಅವರಿಗಿರುವ ಸೋಂಕು ಮುಚ್ಚಿಟ್ಟು ಆ ಸೋಂಕನ್ನು ನನಗೆ ತಗುಲಿಸಿದ್ದಾನೆ. ಜಾತಿ ನಿಂದನೆ ಹಾಗೂ ದೈಹಿಕ ಹಲ್ಲೆ ನಡೆಸಿದ್ದಲ್ಲದೇ, ಮತ್ತೋರ್ವ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಯುವತಿ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ಕಿರುಕುಳ, ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ, ಐಪಿಸಿ 506, 498ಎ, 504, 376, 270, 313, 323ರಡಿ ಪ್ರಕರಣ ದಾಖಲಿಸಿ ಕೊಂಡಿರುವ ವಿಜಯನಗರ ಠಾಣೆ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

Translate »