ಮೈಸೂರು: ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಹಾಗೂ ಕನ್ನಡ ಶಾಲೆಗಳ ಮುಚ್ಚಬಾರದು ಎಂಬ ಗಂಭೀರ ಸಂದೇಶ ಸಾರುವ ಉದ್ದೇಶದೊಂದಿಗೆ ನಿರ್ಮಿಸಲಾದ `ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಕಾಸರಗೋಡು’ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ನಮ್ಮ ಉದ್ದೇಶ ಸಾರ್ಥಕವಾಗಿದೆ ಎಂದು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.
ಕಾಸರಗೋಡಿನ ಗಡಿ ಭಾಗದಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿಗತಿಗಳ ಬಗ್ಗೆ ಜನರ ಮುಂದಿಡಬೇಕು ಎಂಬ ನನ್ನ ಉದ್ದೇಶದಲ್ಲಿ ಯಶಸ್ವಿಯಾಗಿದ್ದೇನೆ. ಹೇಳಬೇಕಾದ ವಿಷಯವನ್ನು ಸರಳವಾಗಿ ಹೇಳುವುದರೊಂದಿಗೆ ಪ್ರೇಕ್ಷಕರನ್ನು ಗಂಭೀರವಾಗಿ ಚಿಂತನೆಗೆ ಒಳಪಡಿಸುವುದು ನಮ್ಮ ಉದ್ದೇಶವಾಗಿತ್ತು. ಕೇವಲ ಮಕ್ಕಳನ್ನೇ ಸೇರಿಸಿಕೊಂಡು ಮಾಡಿದ ಚಿತ್ರ ನನಗೆ ಸವಾಲಾಗಿತ್ತು. ಆರಂಭದಲ್ಲಿ ಆತಂಕ ದೊಂದಿಗೆ ಚಿತ್ರ ಬಿಡುಗಡೆ ಮಾಡಲಾಯಿತಾದರೂ ಬಳಿಕ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರಮಂದಿರಗಳೇ ತಮ್ಮ ಚಿತ್ರದ ಪ್ರದರ್ಶನಕ್ಕೆ ಬೇಡಿಕೆ ಇಟ್ಟಿದ್ದು, ಇಂದು 150 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ಶುಕ್ರವಾರ ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂತಸವನ್ನು ಹಂಚಿಕೊಂಡರು.
ಕಾಸರಗೋಡು ಎಂಬುದು ಭಾವನಾತ್ಮಕ ವಿಷಯ. ಇಷ್ಟು ದಿನ ಕಾಸರಗೋಡಿನ ಬಗ್ಗೆ ಮಾತನಾಡದೇ, ಬರೆಯದೇ ಇದ್ದವರು ಕೂಡ ಇಂದು ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾಯಿ ಬಿಟ್ಟಿರುವುದು ನೋಡಿದರೆ ನಮ್ಮ ಉದ್ದೇಶ ಸಾರ್ಥಕ ವಾದಂತೆಯೇ ಆಗಿದೆ. ಚಿತ್ರದ ಯಶಸ್ಸಿನಿಂದ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಾಲನಟರಾದ ಸಂಪತ್, ರಂಜನ್,ಮಹೇಂದ್ರ, ಕಾರ್ಯ ನಿರ್ವಾಹಕ ನಿರ್ಮಾಪಕ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು.