ಶಬರಿಮಲೆ ಏರುವಾಗ ಹೃದಯಾಘಾತ: ಕನ್ನಡತಿ ಸಾವು; ಬಂಧಿಸಲ್ಪಟ್ಟಿದ್ದ ಶಶಿಕಲಾ ಬಿಡುಗಡೆ
ಮೈಸೂರು

ಶಬರಿಮಲೆ ಏರುವಾಗ ಹೃದಯಾಘಾತ: ಕನ್ನಡತಿ ಸಾವು; ಬಂಧಿಸಲ್ಪಟ್ಟಿದ್ದ ಶಶಿಕಲಾ ಬಿಡುಗಡೆ

November 18, 2018

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ನಿನ್ನೆ ಸಂಜೆಯಿಂದಲೇ ಭಕ್ತರು ಬೆಟ್ಟ ಹತ್ತಲಾರಂಭಿಸಿದ್ದಾರೆ. ಇದೇ ವೇಳೆ, ಅಯ್ಯಪ್ಪಸ್ವಾಮಿ ದರ್ಶನಕ್ಕೆಂದು ಅಪ್ಪಚಿಮೇಡು ಬಳಿ ಬೆಟ್ಟ ಏರುತ್ತಿದ್ದ ಕರ್ನಾಟಕದ ಚಂದ್ರಕಾಂತ ಎಂಬ 50 ವರ್ಷ ವಯಸ್ಸಿನ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

3ನೇ ಬಾರಿಗೆ ಶಬರಿಮಲೆ ಅಯ್ಯಪ್ಪಸ್ವಾಮಿಯ ಬಾಗಿಲು ತೆರೆಯಲಾಗಿದ್ದು, ಭಕ್ತರ ದಂಡೇ ಧಾವಿಸುತ್ತಿದೆ. ಯಥಾಪ್ರಕಾರ 50 ವರ್ಷದೊಳಗಿನ ಕೆಲ ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಮುಂದಾಗಿದ್ದು, ಅವರನ್ನು ಹಿಂದು ಕಾರ್ಯಕರ್ತರು ಪ್ರವೇಶ ದ್ವಾರದ ಬಳಿಯೇ ತಡೆ ಹಿಡಿದಿದ್ದಾರೆ. ದೇವಾಲಯದ ಒಳಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶನ ಮಾಡಿಯೇ ಸಿದ್ಧ ಎಂದು ಹಠ ಹಿಡಿದಿದ್ದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿಯನ್ನು ಪ್ರತಿಭಟನಾಕಾರರು ವಾಪಸ್ ಕಳುಹಿಸಿದ್ದಾರೆ. ಮತ್ತೊಮ್ಮೆ ಬರುವ ದಿನಾಂಕವನ್ನು ಘೋಷಿಸದೆ ಅನಿರೀಕ್ಷಿತವಾಗಿ ಗೆರಿಲ್ಲಾ ತಂತ್ರದ ಮೂಲಕ ಭೇಟಿ ನೀಡುತ್ತೇನೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ಇಂದು ಕೂಡ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಗಲಾಟೆಗಳು ನಡೆಯುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ 15 ಸಾವಿರ ಪೊಲೀಸರು, 20 ಕಮಾಂಡೋ ಪಡೆ, 234 ಸಿಬ್ಬಂದಿಯನ್ನೊಳಗೊಂಡ ವಿಶೇಷ ಬಾಂಬ್ ಸ್ಕ್ವಾಡ್‍ಗಳನ್ನು ನಿಯೋಜಿಸಲಾಗಿದೆ. ತಮ್ಮ ಖಾಸಗಿ ವಾಹನಗಳಲ್ಲಿ ದೇಗುಲವನ್ನು ಪ್ರವೇಶಿಸುವ ಭಕ್ತರು ತಮ್ಮ ವಯಸ್ಸು, ವಿಳಾಸಗ ಳಿರುವ ಪಾಸ್‍ಗಳನ್ನು ತೋರಿಸುವುದು ಕಡ್ಡಾಯ ಎಂದು ನಿಯಮ ಮಾಡಲಾಗಿತ್ತು.

ಶಶಿಕಲಾ ಬಂಧನ: 50 ವರ್ಷ ಮೇಲ್ಪಟ್ಟ ಕೇರಳದ ಹಿಂದು ಐಕ್ಯ ವೇದಿ ರಾಜ್ಯಾಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ನಿನ್ನೆ ಮಧ್ಯರಾತ್ರಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ದೇವರ ದರ್ಶನಕ್ಕೆ ಹೋಗುತ್ತಿದ್ದ ಶಶಿಕಲಾ ಅವರನ್ನು ಶಬರಿಮಲೆಯ 18 ಚಿನ್ನದ ಮೆಟ್ಟಿಲುಗಳಿರುವ ಜಾಗದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಬಂಧಿಸಲಾಗಿದೆ. ಇದಕ್ಕೂ ಹಿಂದೆ ಎರಡು ಬಾರಿ ದೇಗುಲದ ಬಾಗಿಲು ತೆರೆದಾಗಲೂ 50 ವರ್ಷದೊಳ ಗಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ದ್ವಾರದ ಬಳಿ ಶಶಿಕಲಾ ಪ್ರತಿಭಟನೆ ನಡೆಸಿದ್ದರು. ಈ ಬಾರಿಯೂ ಆಕೆ ಪ್ರತಿಭಟನೆ ನಡೆಸಿ ಗಲಭೆಗೆ ಕಾರಣರಾಗುವ ಸಾಧ್ಯತೆ ಇದ್ದಿದ್ದರಿಂದ ವಾಪಸ್ ಹೋಗುವಂತೆ ಪೊಲೀಸರು ಸೂಚಿಸಿದ್ದರು.

Translate »