ಸೇವೆ ಮಾಡುವುದರಲ್ಲಿ ಸಂತೃಪ್ತಿ,  ಅಸಮಾನ ವೇತನಕ್ಕೆ ಅತೃಪ್ತಿ
ಮೈಸೂರು

ಸೇವೆ ಮಾಡುವುದರಲ್ಲಿ ಸಂತೃಪ್ತಿ, ಅಸಮಾನ ವೇತನಕ್ಕೆ ಅತೃಪ್ತಿ

June 25, 2021

ಮೈಸೂರು, ಜೂ.24(ವೈಡಿಎಸ್)- ಕೊರೊನಾ ಸಂದರ್ಭ ದಲ್ಲೂ ಜೀವನವನ್ನು ಪಣಕ್ಕಿಟ್ಟು ಸೇವೆ ನೀಡು ತ್ತಿದ್ದು, ಸಂತೃಪ್ತಿ ಇದೆ. ಆದರೆ, ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ…

ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನರ್ಸ್ ಬೃಂದಾ ಅವರ ಬೇಸರದ ನುಡಿಗಳು. ಕೊರೊನಾ ಮೊದಲ ಅಲೆ ಸಂದರ್ಭ ಭಯವಾಗುತ್ತಿತ್ತು. ಈಗ ಭಯವಿಲ್ಲ. ಯೋಧರಂತೆ ನಾವೂ ಕೂಡ ಕೊರೊನಾ ಸಂದರ್ಭದಲ್ಲಿ ಬದುಕನ್ನು ಪಣಕ್ಕಿಟ್ಟು ಸೇವೆ ನೀಡುತ್ತಿದ್ದೇವೆ ಎಂಬ ಹೆಮ್ಮೆ ಇದೆ. ಕುಟುಂಬ ಮತ್ತು ನಮ್ಮ ಬಗ್ಗೆಯೂ ಕೇರ್ ತೆಗೆದುಕೊಂಡು ಸಾಮಾನ್ಯ ಜನರ ಸೇವೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ಮೊದಲೆಲ್ಲಾ ಸ್ಟಾಫ್ ನರ್ಸ್ ಬಗ್ಗೆ ಜನ ಕೇವಲವಾಗಿ ಮಾತನಾ ಡುತ್ತಿದ್ದರು. ಅವರ ಬೆಲೆ ಏನೆಂದು ಇಂದು ಜನರಿಗೆ ಅರ್ಥವಾಗು ತ್ತಿದೆ. ಗೌರವವೂ ಸಿಗುತ್ತಿದೆ. ನಮ್ಮ ಕೆಲಸದ ಬಗ್ಗೆ ಹೆಮ್ಮೆ ಇದೆ ಎಂದರು.

12 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಹುಣ ಸೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 1 ವರ್ಷದಿಂದ ಕೊರೊನಾ ವಾರಿಯರ್ ಆಗಿ ಕೆಲಸ ಮಾಡು ತ್ತಿದ್ದೇನೆ. ಖಾಯಂ ದಾದಿಯರಿಗೆ ಸಮನಾಗಿ ಕೆಲಸ ಮಾಡುತ್ತಿದ್ದೇವೆ. ಸಂಬಳದಲ್ಲಿ ವ್ಯತ್ಯಾಸ ಇರಬಹುದು. ಆದರೆ, ಗೌರವ, ಸೇವೆಯಲ್ಲಿ ಯಾವುದೇ ತಾರತಮ್ಯ ಇಲ್ಲ. ಪ್ರ್ರಾಮಾಣಿಕವಾಗಿ ಕೆಲಸ ಮಾಡುತ್ತಿ ದ್ದೇವೆ ಎಂದರು. ಎಲ್ಲಾ ತರಹದ ಜನರೂ ಆಸ್ಪತ್ರೆಗೆ ಬರುತ್ತಾರೆ. ಅವರಲ್ಲಿ ಮೊದಲ ಅಲೆಗಿಂತ 2ನೇ ಅಲೆ ಬಗ್ಗೆ ಹೆಚ್ಚು ಭಯ ವಿರುವುದರಿಂದ ನಾವು ಅವರಿಗೆ `ಏನೂ ಆಗುವುದಿಲ್ಲ. ನಾವಿದ್ದೇವೆ, ಧೈರ್ಯವಾಗಿರಿ’ ಎಂದು ಆತ್ಮವಿಶ್ವಾಸ ತುಂಬಬೇಕು. ಅಗ ಅವರು ಚಿಕಿತ್ಸೆಗೆ ಸ್ಪಂದಿಸಿ ಬೇಗ ಗುಣವಾಗುತ್ತಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗುವಾಗ ಹಾರೈಸುತ್ತಾರೆ. ಬೇರೆಲ್ಲೋ ಸಿಕ್ಕಿದಾಗಲೂ ಚೆನ್ನಾಗಿ ಮಾತನಾಡಿಸುತ್ತಾರೆ. ಇದಕ್ಕಿಂತ ತೃಪ್ತಿ ಬೇಕಾ? ಎಂದರು.
ಪಿಪಿಇ ಕಿಟ್ ಧರಿಸಿದ ಮೇಲೆ ನೀರನ್ನು ಕುಡಿಯಲಾಗಲ್ಲಾ ಎಂದೇನಿಲ್ಲಾ? ಪಿಪಿಇ ಕಿಟ್ ತೆಗೆದು ಕುಡಿಯಬಹುದು. ಆದರೆ, ಮನೆಯಲ್ಲಿ ವಯಸ್ಸಾದ ಪೋಷಕರು, ಮಕ್ಕಳಿದ್ದು, ಅವರಿಗೆ ನಮ್ಮಿಂದ ಯಾವುದೇ ತೊಂದರೆ ಆಗಬಾರದೆಂದು ನಮಗೆಷ್ಟೇ ತೊಂದರೆ ಎನಿಸಿದರೂ ಪಿಪಿಇ ಕಿಟ್ ತೆಗೆಯುವುದಿಲ್ಲ. ಕೆಲಸ ಮುಗಿದ ಬಳಿಕವೇ ಪಿಪಿಇ ಕಿಟ್ ತೆಗೆದು ಫ್ರೆಶಪ್ ಆದ ನಂತರ ನೀರು ಕುಡಿಯುತ್ತೇವೆ ಎಂದರು. ಕರ್ತವ್ಯದ ವೇಳೆ ಅಧಿಕಾರಿಗಳು ತುಂಬಾ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

Translate »