ಬೆಂಗಳೂರು, ಜು. 11- ರಾಜ್ಯದಲ್ಲಿ ಕೊರೊನಾ ಅಬ್ಬರಿಸುತ್ತಲೇ ಇದ್ದು, ಶನಿವಾರ 2798 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 36,216ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಬೆಂಗಳೂರಿನವರದೇ ಸಿಂಹಪಾಲಾಗಿದ್ದು, ರಾಜಧಾನಿಯಲ್ಲಿ ಒಟ್ಟಾರೆ 16,862 ಮಂದಿಗೆ ಸೋಂಕು ತಗುಲಿದಂತಾಗಿದೆ.
ಇಂದು ಮೈಸೂರಿನಲ್ಲಿ 8 ಮಂದಿ ಸೇರಿದಂತೆ ರಾಜ್ಯದಲ್ಲಿ ದಾಖಲೆಯ 70 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಲ್ಲಿ 23 ಮಂದಿ ಬೆಂಗಳೂರಿಗರು. ಅಲ್ಲದೆ, ಚಾಮರಾಜನಗರದಲ್ಲಿ ಪ್ರಥಮ ಕೊರೊನಾ ಸಾವು ಪ್ರಕರಣ ದಾಖಲಾಗಿದೆ. ಇಂದು 880 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 14,716 ಮಂದಿ ಗುಣಮುಖರಾದಂತಾಗಿದೆ. ಉಳಿದ 20,883 ಸಕ್ರಿಯ ಸೋಂಕಿತರ ಪೈಕಿ 504 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,
ಅವರೆಲ್ಲರನ್ನೂ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ದ. ಕನ್ನಡದಲ್ಲಿ 186, ಉಡುಪಿ 90, ಮೈಸೂರು 83, ತುಮಕೂರು 78, ಧಾರವಾಡ 77, ಯಾದಗಿರಿ 74, ದಾವಣಗೆರೆ 72, ಕಲಬುರಗಿ ಮತ್ತು ಬಳ್ಳಾರಿ ತಲಾ 65, ಬೀದರ್ 63, ವಿಜಯನಗರ 48, ಉತ್ತರ ಕನ್ನಡ ಮತ್ತು ಗದಗ ತಲಾ 40, ಬಾಗಲಕೋಟೆ 37, ಹಾಸನ 34, ರಾಮನಗರ 30, ಶಿವಮೊಗ್ಗ 26, ಮಂಡ್ಯ ಮತ್ತು ಕೊಪ್ಪಳ ತಲಾ 23, ಚಿಕ್ಕಬಳ್ಳಾಪುರ 20, ಚಾಮರಾಜನಗರ 17, ಹಾವೇರಿ 16, ರಾಯಚೂರು 14, ಕೋಲಾರ ಮತ್ತು ಕೊಡಗು ತಲಾ 12, ಚಿತ್ರದುರ್ಗ 9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ ಮತ್ತು ಚಿಕ್ಕಮಗಳೂರು ತಲಾ 3 ಪ್ರಕರಣ ದಾಖಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕದ 40,083 ಮತ್ತು ದ್ವಿತೀಯ ಸಂಪರ್ಕದ 32,349 ಮಂದಿ ಸೇರಿ ಒಟ್ಟು 72,432 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.