ಮೈಸೂರಲ್ಲಿ ಮತ್ತೆ ಕೊರೊನಾ ಸೋಂಕಿನಿಂದ 8 ಮಂದಿ ಸಾವು
ಮೈಸೂರು

ಮೈಸೂರಲ್ಲಿ ಮತ್ತೆ ಕೊರೊನಾ ಸೋಂಕಿನಿಂದ 8 ಮಂದಿ ಸಾವು

July 12, 2020

ಮೈಸೂರು, ಜು.11(ಎಂಟಿವೈ)-ಸತತವಾಗಿ 5 ದಿನಗಳಿಂದ ಮೈಸೂರಿನಲ್ಲಿ ಕೊರೊನಾ ಸೋಂಕಿನ ಸಾವು ದಾಖಲಾಗು ತ್ತಿದ್ದು, ಶನಿವಾರ ಮಹಿಳೆ ಸೇರಿ 8 ಮಂದಿ ಮೃತಪಟ್ಟಿದ್ದು, ಸಾಂಸ್ಕøತಿಕ ನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ.

ಹೊಸ ಸೋಂಕು ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದ್ದು, ಇಂದು ದಾಖಲೆಯ 83 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಮೈಸೂರಿನಲ್ಲಿ ಸೋಂಕು ಸಮುದಾಯಕ್ಕೆ ಹರಡುತ್ತಿದೆಯೇ? ಎಂಬ ಆತಂಕ ಜನರನ್ನು ಕಾಡ ತೊಡಗಿದೆ. ಈ ಮಧ್ಯೆ ಎನ್.ಆರ್. ಮೊಹಲ್ಲಾದ ಕೆಲ ಪ್ರದೇಶಗಳನ್ನು ವಾರದ ಮಟ್ಟಿಗೆ ಮಿನಿ ಲಾಕ್‍ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

ಕೇವಲ 200 ಮೀಟರ್ ವ್ಯಾಪ್ತಿಯಲ್ಲಿ 4 ಕೊರೊನಾ ಸಾವುಗಳು ಸಂಭವಿಸಿವೆ ಎಂದು  ಜಿಲ್ಲಾಧಿಕಾರಿಗಳು ತಿಳಿಸಿ ರುವುದು ಆತಂಕಕ್ಕೆ ಎಡೆಮಾಡಿದೆ. ಇಂದು ಮೈಸೂರಿನ ಶಂಕರಮಠ ರಸ್ತೆಯ 42 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆ ಯಲ್ಲಿ, ಚಾಮರಾಜ ಮೊಹಲ್ಲಾದ 71 ವರ್ಷದ ವೃದ್ಧ ಕೆ.ಆರ್.ಆಸ್ಪತ್ರೆಯಲ್ಲಿ, ರಾಮಕೃಷ್ಣನಗರದ 76 ವರ್ಷದ ವೃದ್ಧ, ಮಂಡಿಮೊಹಲ್ಲಾದ 55 ವರ್ಷದ ವ್ಯಕ್ತಿ, ರಾಜೀವ್ ನಗರದ 68 ವರ್ಷದ ವೃದ್ಧ ಕೋವಿಡ್ ಆಸ್ಪತ್ರೆಯಲ್ಲಿ, ಮಂಡಿಮೊಹಲ್ಲಾದ ರತನ್ ಸಿಂಗ್ ರಸ್ತೆಯ 56 ವರ್ಷ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಡ್ಯದ ದ್ವಾರಕಾನಗರದ 58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಮೈಸೂರಿನಲ್ಲಿ ಇಂದು 83 ಮಂದಿ ಸೇರಿ ಈವರೆಗೆ ಒಟ್ಟು 773 ಮಂದಿಗೆ ಸೋಂಕು ತಗುಲಿದಂತಾಗಿದ್ದು, ಇಂದು 22 ಮಂದಿ ಸೇರಿ ಇದುವರೆಗೆ ಒಟ್ಟು 385 ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 360 ಸಕ್ರಿಯ ಸೋಂಕಿತರ ಪೈಕಿ 258 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 24 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 78 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಇವರಲ್ಲಿ 12 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಪತ್ತೆಯಾದ ಸೋಂಕಿತರು ವಾಸವಿದ್ದ ಮೈಸೂರಿನ ಜೆಎಸ್‍ಎಸ್ ಡೆಂಟಲ್ ಕಾಲೇಜ್ ಹಿಂಭಾಗದ ಆಟೋ ಸ್ಟ್ಯಾಂಡ್ ಬಳಿ ಇರುವ ಕಾವೇರಿನಗರ, ತಿಲಕ್‍ನಗರ 3ನೇ ಮುಖ್ಯರಸ್ತೆಯ 11ನೇ ಕ್ರಾಸ್, ಬೋಗಾದಿ 2ನೇ ಹಂತದ ವಸಂತನಗರ, ಜಯಲಕ್ಷ್ಮಿ ಪುರಂ 3ನೇ ಮುಖ್ಯರಸ್ತೆ, ಹೆಬ್ಬಾಳ ಸೂರ್ಯ ಬೇಕರಿ ಬಳಿಯ ಎಸ್‍ಬಿಐ ಮುಖ್ಯ ರಸ್ತೆ, ಮಂಡಿಮೊಹಲ್ಲಾದ ಸಾಡೇ ರಸ್ತೆ, ಬಂಬೂ ಬಜಾರ್, ಕೆ.ಆರ್. ಮೊಹಲ್ಲಾ ವೀಣೆ ಶೇಷಣ್ಣ ರಸ್ತೆಯ 5ನೇ ಕ್ರಾಸ್, ನಂಜುಮಳಿಗೆ ಸರ್ಕಲ್ ಹೊಸ ಬಂಡಿಕೇರಿಯ 3ನೇ ಕ್ರಾಸ್, ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿಯ ವಿಜಯ ಬ್ಯಾಂಕ್ ಹತ್ತಿರದ ರಸ್ತೆ, ರಾಮಸ್ವಾಮಿ ಸರ್ಕಲ್ ಡಿ. ಸುಬ್ಬಯ್ಯ ರಸ್ತೆ, ಉದಯಗಿರಿ ಸೈಯದ್ ಅಬ್ದುಲ್ ರೆಹಮಾನ್ ರಸ್ತೆ, ಗೋಕುಲಂ 3ನೇ ಹಂತದ ಆದಿತ್ಯ ಆಸ್ಪತ್ರೆ ಸಮೀಪದ ರಸ್ತೆ, ಗಂಗೋತ್ರಿ ಲೇಔಟ್ ಬಿಸಿಲು ಮಾರಮ್ಮ ದೇವಸ್ಥಾನ ಬಳಿ 11ನೇ ಕ್ರಾಸ್, ಲೋಕನಾಯಕನಗರ ಇಡಿ ಆಸ್ಪತ್ರೆ ಹಿಂಭಾಗದ 2ನೇ ಮುಖ್ಯ ರಸ್ತೆಯ 5ನೇ ಕ್ರಾಸ್, ರಾಮಕೃಷ್ಣನಗರ ಆಲದ ಮರ ಬಳಿ ರಸ್ತೆ, ವಿದ್ಯಾ ರಣ್ಯಪುರಂ 4ನೇ ಮುಖ್ಯರಸ್ತೆಯ 9ನೇ ಕ್ರಾಸ್, ಕೃಷ್ಣಮೂರ್ತಿಪುರಂ 4ನೇ ಕ್ರಾಸ್, ರಾಜೀವ್‍ನಗರ 2ನೇ ಹಂತದ 10ನೇ ಕ್ರಾಸ್, ಸರಸ್ವತಿಪುರಂ ಕುಕ್ಕರಹಳ್ಳಿ ಕೆರೆ ಬಳಿ ರಸ್ತೆ, ಕೆ.ಆರ್.ನಗರ ತಾಲೂಕಿನ ಮುದ್ದನಹಳ್ಳಿ ಮತ್ತು ಮಾವತ್ತೂರು ಸೇರಿದಂತೆ 27 ಪ್ರದೇಶಗಳನ್ನು ಹೊಸದಾಗಿ ಕಂಟೇನ್ಮೆಂಟ್ ಝೋನ್‍ಗಳೆಂದು ಜಿಲ್ಲಾಡಳಿತ ಘೋಷಿಸಿದೆ.  ಹೋಂ ಐಸೋಲೇಷನ್‍ನಲ್ಲಿ ಮೈಸೂರಲ್ಲಿದ್ದಾರೆ 78 ಮಂದಿ

ದಿನೇ ದಿನೆ ವಿಶ್ವಾಸಾರ್ಹ ಚಿಕಿತ್ಸಾ ನೆಲೆ
ಮೈಸೂರು, ಜು.11(ಎಸ್‍ಬಿಡಿ)- ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಹೋಂ ಐಸೋಲೇಷನ್‍ನಲ್ಲಿ ಶುಶ್ರೂಷೆ ಪಡೆಯುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆ.
ಯಾವುದೇ ರೋಗ ಲಕ್ಷಣ ಇಲ್ಲದಿರುವ ಕೊರೊನಾ ಸೋಂಕಿತರು ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಲು ಸರ್ಕಾರ ಅನುಮತಿ ನೀಡುತ್ತಿದ್ದಂತೆ ಮೈಸೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲಾಡ ಳಿತ ಪ್ರಕಟಿಸಿದ ಶನಿವಾರದ ಬುಲೆಟಿನ್ ಪ್ರಕಾರ ಒಟ್ಟು 360 ಸಕ್ರಿಯ ಪ್ರಕರಣಗಳಲ್ಲಿ ಸದ್ಯ 78 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿ ಇದ್ದಾರೆ. 24 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದ 258 ಮಂದಿ ಕೋವಿಡ್ ಆಸ್ಪತ್ರೆಯಲ್ಲಿದ್ದಾರೆ. ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಎರಡೇ ದಿನದಲ್ಲಿ ದುಪ್ಪಟ್ಟಾಗಿದೆ. ಜು.9ರಂದು 37 ಮಂದಿ ಹೋಂ ಐಸೋ ಲೇಷನ್‍ನಲ್ಲಿ, 14 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದರು. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲ ದಿದ್ದರೆ ಅವರೂ ಮನೆಗೆ ಶಿಫ್ಟ್ ಆಗಬಹುದು. ಮನೆ ಯಲ್ಲೇ ಪ್ರತ್ಯೇಕವಾಗಿರಲು ಬಯಸಿದರೆ ಆರೋಗ್ಯಾಧಿಕಾರಿ ಗಳು ಪರಿಶೀಲನೆ ನಡೆಸುತ್ತಾರೆ.

ಯಾವುದೇ ರೋಗ ಲಕ್ಷಣಗಳಿಲ್ಲ, ಅವರ ಮನೆಯಲ್ಲಿ ಅಗತ್ಯ ಸೌಲಭ್ಯವಿರುವುದನ್ನು ಖಚಿತಪಡಿಸಿಕೊಂಡು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ವೈದ್ಯಕೀಯ ಉಪಕರಣ ಗಳು ಹಾಗೂ ಸುರಕ್ಷತಾ ವಸ್ತುಗಳನ್ನು ಕೊಳ್ಳುವುದಕ್ಕೆ ಐದಾರು ಸಾವಿರ ರೂ. ಹೊಂದಿಸಿ ದರೆ ಸಾಕು. ಹಾಗಾಗಿ ಹೋಂ ಐಸೋಲೇಷನ್‍ಗೆ ಹೆಚ್ಚು ಜನ ಮುಂದಾಗುತ್ತಿದ್ದಾರೆ. ಆದರೆ 17 ದಿನ ಹೊರಬರದೆ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು.

ಚಾ.ನಗರದಲ್ಲಿ ಪ್ರಥಮ ಕೊರೊನಾ ಸೋಂಕು ಸಾವು ಪ್ರಕರಣ ಕೊಳ್ಳೇಗಾಲ ಆಸ್ಪತ್ರೆಯಲ್ಲಿ 58 ವರ್ಷದ ವ್ಯಕ್ತಿ ಸಾವು
ಚಾಮರಾಜನಗರ, ಜು.11(ಎಸ್‍ಎಸ್)- ಚಾಮರಾಜ ನಗರ ಜಿಲ್ಲೆಯಲ್ಲಿ ಶನಿವಾರ ಮೊದಲ ಕೊರೊನಾ ಸಾವು ಪ್ರಕರಣ ದಾಖಲಾಗಿದ್ದು, ಹನೂರು ತಾಲೂಕಿನ ಕಾಮಗೆರೆಯ ಕೊಂಗರಹಳ್ಳಿ ನಿವಾಸಿ 58 ವರ್ಷದ ವ್ಯಕ್ತಿ ಕೊಳ್ಳೇಗಾಲ ಉಪವಿಭಾಗದ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಜು.8ರಂದು ಆಸ್ಪತ್ರೆಗೆ ದಾಖಲಾಗಿದ್ದ ಈ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಆದರೆ ಅದರ ವರದಿ ಬರುವ ಮುನ್ನವೇ ಆತ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಆತನ ಗಂಟಲ ದ್ರವವನ್ನು ಟ್ರೂ ನಾಟ್ ಪರೀಕ್ಷೆಗೆ ಒಳಪಡಿಸಲಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ವಾರ್ಡ್ ಅನ್ನು ಸ್ಯಾನಿಟೈಸ್ ಮಾಡಿ ಸೀಲ್‍ಡೌನ್ ಮಾಡಲಾಗಿದೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ವೈದ್ಯೇತರ ಸಿಬ್ಬಂದಿ, ಸಂಬಂಧಿಕರು ಹಾಗೂ ಆತನ ಸಂಪರ್ಕದಲ್ಲಿದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮೃತ ದೇಹವನ್ನು ಕೋವಿಡ್-19ರ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರ ನಡೆಸಲು ಕ್ರಮ ವಹಿಸಲಾಗಿದೆ ಎಂದು ಡಿಸಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಹಾಸನದಲ್ಲಿ 34 ಮಂದಿಗೆ ಸೋಂಕು, ಇಬ್ಬರ ಸಾವು, ಸೋಂಕಿತರ ಸಂಖ್ಯೆ 654
ಹಾಸನ,ಜು.11- ಹಾಸನ ಜಿಲ್ಲೆಯಲ್ಲಿ ಶನಿವಾರ 34 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು 654 ಮಂದಿಗೆ ಸೋಂಕು ತಗುಲಿ ದಂತಾಗಿದೆ. ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಅರಸೀಕರೆ ಯಲ್ಲಿ 16, ಹಾಸನ ತಾಲೂಕಿನಲ್ಲಿ 11, ಅರಕಲಗೂಡಿನಲ್ಲಿ 3, ಆಲೂರಿನಲ್ಲಿ 2, ಚನ್ನರಾಯಪಟ್ಟಣ ಮತ್ತು ಸಕಲೇಶ ಪುರದಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಈವರೆಗೆ ಒಟ್ಟು 386 ಮಂದಿ ಗುಣಮುಖರಾಗಿದ್ದಾರೆ. ಉಳಿದ 251 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »