ಶನಿವಾರ ಇಲ್ಲವೇ ಭಾನುವಾರ ಸಂಪುಟ ವಿಸ್ತರಣೆ
News

ಶನಿವಾರ ಇಲ್ಲವೇ ಭಾನುವಾರ ಸಂಪುಟ ವಿಸ್ತರಣೆ

May 26, 2023

ಬೆಂಗಳೂರು, ಮೇ 25(ಕೆಎಂಶಿ)-ನೂತನ ಸಚಿವರ ಪಟ್ಟಿ ಬಹುತೇಕ ಪೂರ್ಣ ಗೊಂಡಿದ್ದು, ಶನಿವಾರ ಇಲ್ಲವೇ ಭಾನು ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಿಮಂಡಲ ವಿಸ್ತರಿಸಲಿದ್ದಾರೆ.

ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಕಳೆದ ಎರಡು ದಿನದಿಂದ ದೆಹಲಿ ಯಲ್ಲೇ ಬೀಡು ಬಿಟ್ಟಿದ್ದು, ನಾಳೆ (ಶುಕ್ರ ವಾರ) ನೂತನ ಸಚಿವರ ಪಟ್ಟಿಯೊಂದಿಗೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಇದೇ ವೇಳೆ ಖಾತೆ ಹಂಚಿಕೆಯ ವಿಚಾರ ಕೂಡ ಅಂತಿಮವಾಗಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶನಿವಾರ ಇಲ್ಲವೇ ಭಾನು ವಾರ ಮಂತ್ರಿಮಂಡಲ ವಿಸ್ತರಿಸುವುದಾಗಿ ತಿಳಿಸಿದರು. ನಾಳೆ ಸಂಜೆ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ತಾವು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆಯೇ ಬೆಂಗಳೂರಿಗೆ ಹಿಂತಿರುಗುವುದಾಗಿ ಹೇಳಿದರಲ್ಲದೆ, ಪಕ್ಷದ ವರಿಷ್ಠರು ನಾಳೆ ಸಂಜೆಯೊಳಗೆ ಅನುಮತಿ ನೀಡಿದರೆ ಶನಿವಾರ ಅಥವಾ ಭಾನುವಾರ ಸಂಪುಟ ವಿಸ್ತರಣೆ ಆಗಲಿದೆ ಎಂದರು. ಮಂತ್ರಿಮಂಡಲಕ್ಕೆ ಹೊಸದಾಗಿ ಎಷ್ಟು ಮಂದಿಯನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಮುಖ್ಯಮಂತ್ರಿಗಳು ನಿರಾಕರಿಸಿದರು.

ಬುಧವಾರ ಮಧ್ಯಾಹ್ನವೇ ದೆಹಲಿಗೆ ತೆರಳಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಂದು ಸಂಜೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಂತ್ರಿಮಂಡಲ ವಿಸ್ತರಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಇಂದು ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಟ್ಟಿಗೆ ಮೊದಲಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ, ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಾಳೆ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳು ಎಐಸಿಸಿ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಖರ್ಗೆ ಅವರನ್ನೂ ಕೂಡ ಭೇಟಿ ಮಾಡಿ ಸಂಭವನೀಯ ಸಚಿವರ ಪಟ್ಟಿಗೆ ಒಪ್ಪಿಗೆ ಪಡೆಯಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಂತ್ರಿಮಂಡಲದಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಪೈಪೋಟಿ ನಡೆಸಿದ್ದಾರೆ. ನಾಳೆ ಖರ್ಗೆ ಅವರನ್ನು ಭೇಟಿ ಮಾಡಿದಾಗ ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ದೊರೆಯಲಿದೆ. ಹಾಲಿ ಸಿದ್ಧಪಡಿಸಿರುವ ಪಟ್ಟಿಯನ್ನೇ ಯಥಾವತ್ತಾಗಿ ಖರ್ಗೆ ಅವರು ಒಪ್ಪಬಹುದು. ಅಥವಾ ಪಟ್ಟಿಯಲ್ಲಿ ಕೆಲ ಬದಲಾವಣೆಗಳು ಆಗಬಹುದು ಎಂದು ಹೇಳಲಾಗಿದೆ. ಈಗ 22 ಮಂದಿ ಸಂಭವನೀಯ ಸಚಿವರ ಪಟ್ಟಿ ಸಿದ್ಧವಾಗಿದ್ದು, ಮುಖ್ಯಮಂತ್ರಿಗಳು 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಂಡು 4 ಸ್ಥಾನಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

20 ನೂತನ ಸಚಿವರಲ್ಲಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ 5 ಮತ್ತು 6 ಸ್ಥಾನಗಳು, ಪರಿಶಿಷ್ಟರಿಗೆ 2, ಬೋವಿ, ಲಂಬಾಣಿ ಹಾಗೂ ಮುಸ್ಲೀಮರಿಗೆ ತಲಾ ಒಂದು ಸ್ಥಾನ ನೀಡಿ ಉಳಿದವುಗಳನ್ನು ಹಿಂದುಳಿದ ವರ್ಗದವರಿಗೆ ನೀಡುವ ನಿಟ್ಟಿನಲ್ಲಿ ಸಂಭವನೀಯ ಸಚಿವರ ಬಗ್ಗೆ ಸಿದ್ಧವಾಗಿದೆ.

Translate »