ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಭವಿಷ್ಯ ಏನು ಬೇಕಾದರೂ ಆಗಬಹುದು
News

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಭವಿಷ್ಯ ಏನು ಬೇಕಾದರೂ ಆಗಬಹುದು

May 26, 2023

ಬೆಂಗಳೂರು, ಮೇ 25(ಕೆಎಂಶಿ)-ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾ ರದ ಭವಿಷ್ಯ ಏನು ಬೇಕಾ ದರೂ ಆಗಬಹುದು ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕುಮಾರಸ್ವಾಮಿ ನೀಡಿದ ಹೇಳಿಕೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತ ನಾಡಿ, ಮುಂದಿನ ನಾಲ್ಕೈದು ತಿಂಗಳಲ್ಲೇ ರಾಜ್ಯ ರಾಜಕೀಯ ಚಿತ್ರಣವೇ ಬದಲಾಗು ತ್ತದೆ ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಈ ಸರ್ಕಾರದಲ್ಲಿ ವಿಶ್ವಾಸದ ಕೊರತೆ ಇದೆ. ಹೀಗಾಗಿ ಬಹಳ ದಿನ ಉಳಿಯುವುದು ಕಷ್ಟ. ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗುತ್ತದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ಸಿನ ಕುತಂತ್ರ ರಾಜಕಾರಣದಿಂದ ನಾವು ಈ ಚುನಾವಣೆ ಸೋಲಬೇಕಾಯಿತು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದೆ ಬಿಟ್ಟು ನಮ್ಮ ಮತಗಳನ್ನು ಒಡೆಯಲಾಗಿದೆ. ಬಿಜೆಪಿ ಜೊತೆ ಕೈ ಜೋಡಿ ಸಲಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಕಾಂಗ್ರೆಸ್ ಹರಡಿದ್ದರಿಂದ ನಾವು ಸೋತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ರಾಜ್ಯದ ಜನತೆ ಪ್ರಥಮ ಬಾರಿಗೆ ಇಂತಹ ಫಲಿತಾಂಶವನ್ನು ಜೆಡಿಎಸ್‍ಗೆ ಕೊಟ್ಟಿದೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದರು. ಈ ಫಲಿತಾಂಶದಿಂದ ಯಾರೂ ಧೃತಿಗೆಡಬೇಕಿಲ್ಲ. ನಾವು ನಮ್ಮ ಹೋರಾಟದಿಂದ ಹಿಮ್ಮುಖರಾಗಬಾರದು. ಇದು ಶಾಶ್ವತ ಫಲಿತಾಂಶ ಅಲ್ಲ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಂಡು ಮುಂದಿನ ಹೆಜ್ಜೆಗಳನ್ನು ಇಡೋಣ ಎಂದು ಧೈರ್ಯ ತುಂಬಿದರು. ಅತ್ಯಂತ ಶ್ರಮವಹಿಸಿ ದುಡಿದಿದ್ದೀರಿ. ನಮ್ಮ ನಿರೀಕ್ಷೆ ಸುಳ್ಳಾಗಿದೆ. ಚುನಾವಣೆ ಸಮಯದಲ್ಲಿ ನಾನು ಕೆಲವು ಅಭ್ಯರ್ಥಿಗಳನ್ನು ಕೈಹಿಡಿದು ನಡೆಸುವಲ್ಲಿ ವಿಫಲನಾದೆ. ಎ-ಕೆಟಗರಿ ಅಭ್ಯರ್ಥಿಗಳಿಗಷ್ಟೇ ಒತ್ತು ನೀಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಕುಮಾರಸ್ವಾಮಿ ಕ್ಷಮೆ ಕೇಳಿದರು. ಕೆಲವು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಮೈಮರೆತರು. ಇನ್ನೂ ಕೆಲವು ಕ್ಷೇತ್ರಗಳಲ್ಲಿ ನಾವು ಆರ್ಥಿಕವಾಗಿ ಹಿನ್ನಡೆ ಅನುಭವಿಸಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ಹಣದಿಂದ ಚುನಾವಣೆ ಎದುರಿಸುವುದು ಬೇಡ. ಜನರ ಮನಸ್ಸನ್ನು ಬದಲಿಸಿ ಚುನಾವಣೆಗೆ ನಿಲ್ಲೋಣ ಎಂದು ಪ್ರೇರಣೆ ನೀಡಿದರು.

ಪಕ್ಷದ ಜಿಲ್ಲಾ ಘಟಕಗಳು ಬಹಳ ನಿಷ್ಕ್ರಿಯವಾಗಿವೆ. 224 ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ ಗಳನ್ನು ಹುಡುಕಲು ಸಾಧ್ಯವಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಪ್ರತಿ ಸಮುದಾಯದಿಂದ ಫೇಸ್ ವ್ಯಾಲ್ಯೂ ಇರುವ ಮುಖಂಡರನ್ನು ಹುಟ್ಟುಹಾಕಿ. ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು. ಪಕ್ಷಕ್ಕೆ ಜೀವ ತುಂಬುವ ಕಡೆ ಯೋಚಿಸಿ. ಕಾಂಗ್ರೆಸ್‍ನವರು ತಮ್ಮ ಗ್ಯಾರಂಟಿ ಯೋಜನೆಗಳಿಗೆ ನೀತಿ ನಿಯಮ ರೂಪಿಸುತ್ತಿದ್ದಾರೆ. ಜನರಿಗೆ ಈ ಬಗ್ಗೆ ಮನವರಿಕೆ ಮಾಡಿಸಿ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಅಭಿಯಾನ ಮಾಡಿ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು. ಜೆಡಿಎಸ್ ಪಕ್ಷಕ್ಕೆ ದೇವೇಗೌಡರ ಕುಟುಂಬದ ಹಣೆಪಟ್ಟಿಯನ್ನು ಕಾಂಗ್ರೆಸ್ ಕಟ್ಟಿದೆ. ಇದನ್ನು ಅಳಿಸಿಹಾಕಿ ಪಕ್ಷ ಕಟ್ಟೋಣ. ಎಲ್ಲರೂ ಮುಂದೆ ಬನ್ನಿ. ಪಕ್ಷ ಬಲಪಡಿಸೋಣ ಎಂದರು.

ಯಾರನ್ನಾದರೂ ಹಾಳು ಮಾಡಬೇಕು ಅಂದ್ರೆ ಅವರನ್ನು ಅಭ್ಯರ್ಥಿ ಮಾಡಿದರೆ ಸಾಕು ಎನ್ನುವ ಅನುಭವ ಈ ಚುನಾವಣೆಯಲ್ಲಿ ನನಗೆ ಆಗಿದೆ. ಮುಂದಿನ ಬಾರಿ ಅಭ್ಯರ್ಥಿಯಾಗಿ ನಿಲ್ಲಿ ಎನ್ನುವ ಧೈರ್ಯ ನನಗಿಲ್ಲ. ಹಣ ಪಡೆದ ಮತದಾರರು ಯಾವ ರೀತಿ ತೀರ್ಮಾನ ಮಾಡುತ್ತಾರೆ ಎಂಬ ಚಿತ್ರಣ ನಿಮ್ಮ ಎದುರೇ ಇದೆ. ಹಣ ಖರ್ಚು ಮಾಡಿ ಮುಂದಿನ ಚುನಾವಣೆ ಎದುರಿಸುವುದು ಬೇಡ ಎಂದರು.

ಕೆಲವು ಜಿಲ್ಲೆಗಳಲ್ಲಿ ನಮ್ಮ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಇದು ಪಕ್ಷ ಕಟ್ಟುವ ನಡೆಯಲ್ಲ. ದಯವಿಟ್ಟು ಅಂತಹವರು ಇದ್ದರೆ ಮುಂದಿನ ದಾರಿ ಬಗ್ಗೆ ಯೋಚಿಸಿ. ನಮಗೆ ಪಕ್ಷ ನಿಷ್ಠರು ಬೇಕು ಎಂದರು.

Translate »