ಮೈಸೂರು, ಜು.6(ಆರ್‍ಕೆಬಿ)- ಸ್ಪರ್ಶ ಜಾತಿಗಳಾದ ಬಂಜಾರ, ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಸಮು ದಾಯಗಳ ಕುರಿತು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋ ಗವು ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಆದೇಶ ವನ್ನು ಯಥಾವತ್ತಾಗಿ ಪಾಲಿಸಬೇಕು. ಹಾಗೆಯೇ ತೆಗೆದು ಕೊಂಡ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದರು.
ನಗರದ ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ಸೋಮವಾರ ಆದಿ ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಮತ್ತು ಎಡಗೈ ಹೋರಾಟ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪರಿಶಿಷ್ಟ ಜಾತಿ (ಅಸ್ಪøಶ್ಯ) ಪಟ್ಟಿಯಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಸೇರ್ಪಡೆ ಗೊಂಡಿರುವ ಸ್ಪರ್ಶ ಜಾತಿಗಳಾದ ಬಂಜಾರ ಅಥವಾ ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಸಮುದಾಯಗಳ ಕುರಿತು ಸರ್ವೋಚ್ಛ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ ಎಂದರು.
ಸ್ಪರ್ಶ ಜಾತಿಗಳಾದ ಬಂಜಾರ, ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಸಮುದಾಯಗಳು ಅಸ್ಪøಶ್ಯತೆಗೆ ಒಳಗಾಗಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಎಲ್ಲಾ ರಾಜಕಾರಣಿಗಳಿಂದ ಮೀಸಲಾತಿಗೆ ಹೊಡೆತ ಬಿದ್ದಿದೆ. ಸುಮಾರು 40 ವರ್ಷಗಳಿಂದ ಮೀಸಲಾತಿಯ ಸೌಲಭ್ಯವನ್ನು ಈ ಸಮುದಾಯಗಳು ಪಡೆದುಕೊಂಡಿದ್ದರೂ, ಕಾನೂನಾತ್ಮಕವಾಗಿ ಪಡೆದುಕೊಂಡಿಲ್ಲ ಎಂದು ಕಿಡಿ ಕಾರಿದರು. ಪರಿಶಿಷ್ಟ ಜಾತಿಯವರನ್ನು ಎಡಗೈ, ಬಲಗೈ ಎಂದು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳ ಲಾಗಿದೆ. ಗ್ರಾಪಂನಿಂದ ಹಿಡಿದು ಪಾರ್ಲಿಮೆಂಟ್‍ವರೆಗೆ ಜನರಿಗೆ ರಾಜಕೀಯದ ಆಸೆ ತೋರಿಸಿ ಮೋಸ ಮಾಡುವ ಕಾರ್ಯ ನಡೆಯುತ್ತಲೇ ಇದೆ. ಹೀಗಾಗಿ, ಅಂಬೇಡ್ಕರ್ ಆಶಯಗಳು ಇಂದಿಗೂ ಪೂರ್ಣಗೊಂಡಿಲ್ಲ ಎಂದು ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದರು.
ಸ್ಪರ್ಶ ಜಾತಿಗಳಾದ ಬಂಜಾರ, ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಸಮುದಾಯಗಳಲ್ಲಿ ಬಡವರಿದ್ದರೆ ಅವರಿಗೂ ಸರ್ಕಾರ ನೆರವು ನೀಡಲಿ. ಅದರ ಹೊರತಾಗಿ, ನಮ್ಮ ಮೀಸಲಾತಿ ಯಲ್ಲಿಯೇ ಅವರಿಗೂ ಏಕೆ ಸೌಲಭ್ಯವನ್ನು ಕಲ್ಪಿಸುತ್ತೀರಿ? ಈ ಕುರಿತು ಪಾರದರ್ಶಕವಾಗಿ ನಡೆದುಕೊಳ್ಳುವ ಮೂಲಕ ನೊಂದವರು, ಅರ್ಹರಿಗೆ ಮಾತ್ರವೇ ಮೀಸಲಾತಿಯನ್ನು ಒದಗಿಸಬೇಕಿದೆ ಎಂದರು. ಗೋಷ್ಠಿಯಲ್ಲಿ ಬುದ್ಧ ವಿಹಾರ ಸಂಚಾಲಕ ರೇವಣ್ಣ, ವಿಜಯ್‍ಕುಮಾರ್, ಪಾಲಿಕೆ ಸದಸ್ಯ ಸುನಂದಕುಮಾರ್, ಪೌರ ಕಾರ್ಮಿಕರ ಸಂಘದ ಸಂಚಾಲಕ ಲೋಕೇಶ್, ವಕೀಲರ ಸಂಘದ ಸದಸ್ಯ ವಿಷ್ಣುವರ್ಧನ್, ಅಶೋಕ್ ಉಪಸ್ಥಿತರಿದ್ದರು.