ಮೈಸೂರು, ಜು.13(ಪಿಎಂ)- ಪರಿವಾರ ಮತ್ತು ತಳವಾರ ಪದಗಳನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ದ್ದರೂ ರಾಜ್ಯದಲ್ಲಿ ಅಧಿಕಾರಿಗಳು ತಡೆಯೊಡ್ಡುವ ಮೂಲಕ ಗೊಂದಲ ಸೃಷ್ಟಿಸಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಯುತ್ತಿರುವ ಅನುಮಾನವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿ ಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ ಕನಸ್ಸಾಗಿತ್ತು. ಹೀಗಾಗಿ ಅವರು ಈ ಸಂಬಂಧ ಕುಲಶಾಸ್ತ್ರೀಯ ಅಧ್ಯಯನಕ್ಕೆ ಚಾಲನೆ ನೀಡಿದ್ದರು. ಬಳಿಕ ಲೋಕಸಭೆಯಲ್ಲಿ ಈ ಕುರಿತ ಬಿಲ್ ಅನುಮೋದನೆಗೊಂಡು ಕೇಂದ್ರ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಅದರಂತೆ ಪರಿವಾರ ಮತ್ತು ತಳವಾರ ಪದಗಳನ್ನು ಪ್ರವರ್ಗ-1ರಿಂದ ಪರಿಶಿಷ್ಟ ವರ್ಗದ ಪಟ್ಟಿಗೆ ಸೇರ್ಪಡೆ ಗೊಳಿಸಲಾಗಿತ್ತು. ಆದರೆ ಈಗ ಅಧಿಕಾರಿಗಳ ನಡೆ ಅಚ್ಚರಿ ಮೂಡಿಸಿದ್ದು, ಈ ಸಮುದಾಯಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಿಂದ ಮತ್ತೆ ಪ್ರವರ್ಗ-1ಕ್ಕೆ ಸೇರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಗೊಂದಲವಿದೆ ಎಂಬ ಕಾರಣ ನೀಡಿ ಜಾತಿ ಪ್ರಮಾಣ ಪತ್ರ ನೀಡಲು ತಡೆ ನೀಡಿದ್ದಾರೆ. ಇದರಿಂದ ಈ ಎರಡೂ ಸಮುದಾಯಗಳು ಸೌಲಭ್ಯಗಳಿಂದ ವಂಚಿತವಾಗಲಿವೆ ಎಂದು ವಿಷಾದಿಸಿದರು.
ಎಲ್ಲಾ ಸ್ಪಷ್ಟವಾಗಿದ್ದರೂ ಅಧಿಕಾರಿಗಳು ಅನಗತ್ಯ ವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಜವಾಬ್ದಾರಿ ಯನ್ನು ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರೆ. ಪರಿವಾರ ಮತ್ತು ತಳವಾರ ಸಮುದಾಯಗಳಿಗೆ 38 ವರ್ಷ ಗಳಿಂದ ನ್ಯಾಯ ಸಿಕ್ಕಿರಲಿಲ್ಲ. ಆದರೆ ನಮ್ಮ ಸರ್ಕಾರ ಅವರಿಗೆ ನ್ಯಾಯ ಕೊಡಿಸಿದೆ. ಆದರೆ ಸರ್ಕಾರವೇ ನಿಲ್ಲಿಸಿದೇ ಎಂಬ ತಪ್ಪು ಸಂದೇಶ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಈ ಗೊಂದಲ ನಿವಾರಣೆ ಮಾಡಿ ಅವರಿಗೆ ನ್ಯಾಯ ದೊರಕಿಸಿ ಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದಿದ್ದೇನೆ ಎಂದರು.
ಆತ್ಮ ನಿರ್ಭರ್‍ನಿಂದ ಸದೃಢ ಭಾರತ: ದೇಶದ ಜನತೆ ಲಾಕ್‍ಡೌನ್ ಸಂಕಷ್ಟದಿಂದ ಎದುರಿಸುತ್ತಿರುವ ಸಮಸ್ಯೆ ಗಳ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಯವರು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ (ಸ್ವಾವಲಂಬಿ ಭಾರತ) ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಸದೃಢ ಭಾರತ ನಿರ್ಮಾಣ ಮಾಡು ತ್ತಿದೆ ಎಂದು ಪ್ರತಾಪ್ ಸಿಂಹ ಪ್ರತಿಪಾದಿಸಿದರು.
ಮಾ.25ರಿಂದ ಲಾಕ್‍ಡೌನ್ ಜಾರಿಯಾಯಿತು. ಈ ಸಂದರ್ಭದಲ್ಲಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಯಡಿ ದೇಶದ 80 ಕೋಟಿಗೂ ಅಧಿಕ ಪಡಿತರ ಚೀಟಿ ದಾರರಿಗೆ ಉಚಿತವಾಗಿ ಪಡಿತರ ನೀಡಲಾಗಿದೆ. ಬಿಪಿಎಲ್ ಕಾರ್ಡಿಗೆ ಮಾಸಿಕ ತಲಾ 5 ಕೆಜಿ ಅಕ್ಕಿ, ಅಂತ್ಯೋದಯ ಕಾರ್ಡಿಗೆ ತಲಾ 35 ಕೆಜಿ ಅಕ್ಕಿ ಸೇರಿ ದಂತೆ ಇನ್ನಿತರ ಧಾನ್ಯ ನೀಡಲಾಗಿದೆ. ಈ ಕಾರ್ಯ ಕ್ರಮವನ್ನು ಮುಂದಿನ ನವೆಂಬರ್‍ವರೆಗೆ ವಿಸ್ತರಿಸಲಾ ಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಮೂರು ತಿಂಗಳ ಉಚಿತ ಗ್ಯಾಸ್ ಪೂರೈಕೆ ಘೋಷಣೆ ಮಾಡಿತ್ತು. ಇದನ್ನೂ ನವೆಂಬರ್‍ವರೆಗೆ ವಿಸ್ತರಿಸ ಲಾಗಿದೆ ಎಂದು ವಿವರಿಸಿದರು.
ಜನ್‍ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 3 ತಿಂಗಳವರೆಗೆ ಮಾಸಿಕ 500 ರೂ. ಕೊಡಲಾಗಿದೆ. ಹಿರಿಯ ನಾಗರಿಕರು, ವಿಧವೆಯರು, ವಿಕಲಚೇತ ನರು ಸೇರಿದಂತೆ 3 ಕೋಟಿ ಜನತೆಗೆ ತಲಾ ಸಾವಿರ ರೂ.ಗಳನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 8.7 ಕೋಟಿ ರೈತರಿಗೆ ತಲಾ 2 ಸಾವಿರ ರೂ. ಹಣ ವನ್ನು ವರ್ಷದ ಆರಂಭದಲ್ಲೇ (ಏಪ್ರಿಲ್) ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದರು. 200 ಕೋಟಿ ರೂ.ಗಿಂತಲೂ ಕಡಿಮೆ ಮೌಲ್ಯದ ಸರ್ಕಾರಿ ಯೋಜನೆ ಗಳಿಗೆ ಇನ್ನು ಮುಂದೆ ಅಂತಾರಾಷ್ಟ್ರೀಯ ಟೆಂಡರ್ ಪದ್ಧತಿ ಕೈಬಿಟ್ಟಿದ್ದು, ಇದರಿಂದ ದೊಡ್ಡ ಕಾಮಗಾರಿ ಗಳು ದೇಶದ ಎಂಎಸ್‍ಎಂಇ ಸಂಸ್ಥೆಗಳಿಗೂ ದೊರೆ ಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಜೊತೆಗೆ ಎಂಎಸ್‍ಎಂಇ ಸಂಸ್ಥೆಗಳ ವ್ಯಾಖ್ಯಾನ ಪುನರ್‍ರಚಿಸಲಾಗಿದೆ. ಅದರಂತೆ 1 ಕೋಟಿ ರೂ. ಹೂಡಿಕೆ ಹಾಗೂ 5 ಕೋಟಿ ರೂ. ವಹಿವಾಟು ಹೊಂದಿ ರುವ ಕೈಗಾರಿಕೆಗಳನ್ನು ಅತೀಸಣ್ಣ ಕೈಗಾರಿಕೆ ಎಂದು ವರ್ಗೀಕರಿಸಲಾಗಿದೆ. ಅಲ್ಲದೆ, 10 ಕೋಟಿ ರೂ. ಹೂಡಿಕೆ ಹಾಗೂ 50 ಕೋಟಿ ರೂ. ವಹಿವಾಟು ಹೊಂದಿದ್ದರೆ ಸಣ್ಣ ಕೈಗಾರಿಕೆ, 20 ಕೋಟಿ ರೂ. ಹೂಡಿಕೆ ಹಾಗೂ 100 ಕೋಟಿ ರೂ. ವಹಿವಾಟು ಹೊಂದಿದ್ದರೆ ಮಧ್ಯಮ ಕೈಗಾರಿಕೆಗಳೆಂದು ವರ್ಗೀಕರಣ ಮಾಡಲಾಗಿದೆ. ಇದರಿಂದ ಈ ಸಂಸ್ಥೆಗಳ ತೆರಿಗೆ ಹೊರೆ ಕಡಿಮೆ ಯಾಗುವ ಜೊತೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ ಎಂದು ವಿವರಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರಾಧ್ಯಕ್ಷ ಶ್ರೀವತ್ಸ, ಪರಿವಾರ-ತಳವಾರ ಸಮುದಾಯದ ಶ್ರೀಧರ್, ಆತ್ಮಾನಂದ ಗೋಷ್ಠಿಯಲ್ಲಿದ್ದರು.