ಮೈಸೂರಲ್ಲಿ ಇಂದಿನಿಂದ ಶಾಲೆ ಬಂದ್
ಮೈಸೂರು

ಮೈಸೂರಲ್ಲಿ ಇಂದಿನಿಂದ ಶಾಲೆ ಬಂದ್

January 12, 2022

ಮೈಸೂರು, ಜ.11(ಎಸ್‍ಬಿಡಿ)- ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ನಗರ ಹಾಗೂ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ನಾಳೆ(ಜ.12)ಯಿಂದ ಮುಂದಿನ ಆದೇಶದವರೆಗೆ ಬಂದ್ ಮಾಡಿ, ಆನ್‍ಲೈನ್ ತರಗತಿ ನಡೆಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇಂದು ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರ ಹಾಗೂ ತಾಲೂಕು ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆ ಹಾಗೂ ವಸತಿ ಶಾಲೆಗಳಿಗೂ ಈ ಆದೇಶ ಅನ್ವಯವಾಗಲಿದ್ದು, ಅಂಗನ ವಾಡಿ, ನರ್ಸರಿ ಹಾಗೂ 1ರಿಂದ 10ನೇ ತರಗತಿವರೆಗಿನ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಈ ಆದೇಶ ನಾಳೆ(ಜ.12)ಯಿಂದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದ್ದು, ಈ ಅವಧಿಯಲ್ಲಿ ಆನ್‍ಲೈನ್ ತರಗತಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 24ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಮೈಸೂರು ನಗರ ಹಾಗೂ ಮೈಸೂರು ತಾಲೂಕು ವ್ಯಾಪ್ತಿಯ ಶಾಲೆಗಳ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದ್ದು, ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಕಡ್ಡಾಯ ವಾಗಿ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಎಂದಿನಂತೆ ಭೌತಿಕ ತರಗತಿಗಳನ್ನು ಮುಂದುವರೆಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಕಳೆದ 3 ದಿನಗಳ ಕೋವಿಡ್ ವರದಿ ಪರಿಶೀಲಿಸಿದಾಗ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಮೈಸೂರು ತಾಲೂಕು ಹಾಗೂ ನಗರ ವ್ಯಾಪ್ತಿಯಲ್ಲಿ ಕಂಡುಬರುತ್ತಿವೆ. ಇಂದು ಜಿಲ್ಲೆಯಲ್ಲಿ ವರದಿಯಾದ ಒಟ್ಟು 562 ಪ್ರಕರಣಗಳಲ್ಲಿ 436 ಪ್ರಕರಣಗಳು ಅಂದರೆ ಶೇ.77.58ರಷ್ಟು ಪ್ರಕರಣ ಮೈಸೂರು ನಗರ ಹಾಗೂ ತಾಲೂಕಿನಿಂದಲೇ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಶಾಲೆಗಳ ಭೌತಿಕ ತರಗತಿಯನ್ನು ಸ್ಥಗಿತಗೊಳಿಸಿ, ಆದೇಶಿಸಲಾಗಿದೆ ಎಂದಿದ್ದಾರೆ.

ಒಮಿಕ್ರಾನ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಿರ್ವಹಣೆ ಸಂಬಂಧ ಹಿಂದೆ ಹೊರಡಿಸಲಾದ ಸರ್ಕಾರದ ಮಾರ್ಗಸೂಚಿಗಳೊಂದಿಗೆ ಕೆಲವು ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಹೊರಡಿಸಿ ಆದೇಶ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ, ಅವಶ್ಯವಿದ್ದಲ್ಲಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲು ಅವಕಾಶ ನೀಡಲಾಗಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಹೊರಡಿಸಲಾಗಿರುವ ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತ ದಂಡ ಸಂಹಿತೆಯ 188ನೇ ಪ್ರಕರಣದಡಿ ಹಾಗೂ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳಡಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಉಪಬಂಧಗಳಡಿ ಕ್ರಮ ಜರುಗಿಸಲಾಗುವುದು. ಆದೇಶದ ಪಾಲನೆ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶದಲ್ಲಿ ಸೂಚಿಸಿದ್ದಾರೆ.

ವರ್ಷಾರಂಭದೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮೈಸೂರು ನಗರದಲ್ಲಿ ಹೆಚ್ಚು ಪ್ರಕರಣ ವರದಿಯಾಗುತ್ತಿದ್ದವು. ಇತ್ತೀಚೆಗೆ ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸುತ್ತಿದೆ. ಅದರಲ್ಲೂ ನಗರಕ್ಕೆ ಹೆಚ್ಚು ಸಂಪರ್ಕವಿರುವ ಮೈಸೂರು ತಾಲೂಕಿನಲ್ಲಿ ಉಳಿದ ತಾಲೂಕುಗಳಿಗಿಂತ ಹೆಚ್ಚು ಸೋಂಕು ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಜಿಲ್ಲೆಯ 50ಕ್ಕೂ ಹೆಚ್ಚು ಶಾಲೆಗಳ ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಇದ ರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಭೌತಿಕ ತರಗತಿಗಳಿಂದ ಎಲ್ಲಾ ಮಕ್ಕಳಿಗೂ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಸದ್ಯಕ್ಕೆ ಮೈಸೂರು ನಗರ ಹಾಗೂ ತಾಲೂಕಿಗೆ ಅನ್ವಯವಾಗುವಂತೆ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲು ಆದೇಶಿಸಿ, ಆನ್‍ಲೈನ್ ತರಗತಿಗಳನ್ನು ಮಾತ್ರ ನಡೆಸುವಂತೆ ತಿಳಿಸಲಾಗಿದೆ.

Translate »