ಮೈಸೂರು ಜಿಲ್ಲೆಯಲ್ಲಿ 18 ವರ್ಷದೊಳಗಿನ  130 ಮಕ್ಕಳಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ 18 ವರ್ಷದೊಳಗಿನ 130 ಮಕ್ಕಳಿಗೆ ಸೋಂಕು

January 12, 2022

ಮೈಸೂರು, ಜ.11(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೆ ಹೆಚ್ಚಾಗು ತ್ತಿದ್ದು, 18 ವರ್ಷದೊಳಗಿನ ಮಕ್ಕಳಿಗೂ ಸೋಂಕು ತಗುಲಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ 130 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆ ಪೈಕಿ ರೋಗ ಲಕ್ಷಣಗಳಿರುವ ನಾಲ್ಕು ಮಕ್ಕಳು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗಿ ದ್ದಾರೆ. ಉಳಿದವರನ್ನು ಹೋಂ ಐಸೋಲೇಷನ್ ಮಾಡಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ.

ಸೋಮವಾರದವರೆಗೆ ಒಟ್ಟು 1,438 ಕೊರೊನಾ ಸಕ್ರಿಯ ಪ್ರಕರಣ ಗಳಿದ್ದು, 115 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ, 42 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 1,181 ಮಂದಿ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.

ಪ್ರತೀದಿನ ಸದ್ಯ ಸರಾಸರಿ 300ರಿಂದ 320 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿ ಯಾಗುತ್ತಿವೆ ಎಂದರು. 3ನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತ ರಾಗುವರು ಎಂಬ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 18 ವರ್ಷದೊಳ ಗಿನ ಮಕ್ಕಳಿಗೆ ಹಾಸಿಗೆಗಳನ್ನು ಮೀಸಲಿರಿಸಿದ್ದು, ಆಕ್ಸಿಜನೇಟೆಡ್ ಹಾಗೂ ವೆಂಟಿಲೇಟರ್ ಸೌಲಭ್ಯದೊಂದಿಗೆ ಐಸಿಯು ಬೆಡ್‍ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ಒಂದು ಶಾಲೆಯಲ್ಲಿ, ಒಂದು ಹಾಸ್ಟೆಲ್‍ನಲ್ಲಿ ಅಥವಾ ವಸತಿ ಶಾಲೆಯಲ್ಲಿ ಹೆಚ್ಚು ಮಕ್ಕಳಿಗೆ ಕೊರೊನಾ ತಗುಲಿರುವ ಮಾಹಿತಿ ಇಲ್ಲ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿರುವುದರಿಂದ ಜನರು ಆತಂಕಕ್ಕೀಡಾಗುತ್ತಿರುವುದು ಸಹಜ ಎಂದ ಅವರು, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಮಾಹಿತಿಗಳಿಗೆ ಕಿವಿಗೊಡಬಾರದು ಎಂದರು.

ಈಗಾಗಲೇ ಮೈಸೂರಿನ ಜಿಲ್ಲಾ ಕೋವಿಡ್ ಆಸ್ಪತ್ರೆ, ಪಿಕೆಟಿಬಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೀಡಿ ಕಾರ್ಮಿಕರ ಆಸ್ಪತ್ರೆ, ತುಳಸಿದಾಸ ದಾಸಪ್ಪ ಆಸ್ಪತ್ರೆ, ಕೆ.ಆರ್.ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಸಾಮಾನ್ಯ, ಆಕ್ಸಿಜನೇಟೆಡ್ ಹಾಸಿಗೆ ಹಾಗೂ ಐಸಿಯುಗಳನ್ನು ಸಜ್ಜುಗೊಳಿಸಲಾಗಿದೆ. ಔಷಧಿ, ವೈದ್ಯರು, ಸಿಬ್ಬಂದಿ, ಸೆಕ್ಯೂರಿಟಿ ಹಾರ್ಡ್, ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಲಾಗಿದ್ದು, ಆಕ್ಸಿಜನ್ ಜನರೇಟೆಡ್ ಯೂನಿಟ್‍ಗಳೂ ಸಹ ಕಾರ್ಯನಿರ್ವಹಿಸುತ್ತಿವೆ ಎಂದು ಡಾ. ಪ್ರಸಾದ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಆರ್‍ಟಿ-ಪಿಸಿಆರ್ ಟೆಸ್ಟ್ ಸಂಖ್ಯೆಯನ್ನು ಹೆಚ್ಚು ಮಾಡಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಅಗತ್ಯ ಮುಂಜಾಗ್ರತೆ ವಹಿಸುವ ಮೂಲಕ ಸೋಂಕು ಹರಡದಂತೆ ತಡೆಯಲು ಸಹಕರಿಸಬೇಕೆಂದು ಸಲಹೆ ನೀಡಿದ್ದಾರೆ.

Translate »