ಬೈಕ್‍ಗಳಿಗೆ ಕಾರು ಡಿಕ್ಕಿ: ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ ಹುಣಸೂರು ಬಳಿ ದುರಂತ
ಮೈಸೂರು

ಬೈಕ್‍ಗಳಿಗೆ ಕಾರು ಡಿಕ್ಕಿ: ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ ಹುಣಸೂರು ಬಳಿ ದುರಂತ

January 12, 2022

ಹುಣಸೂರು,ಜ.11(ಕೆಕೆ)- ಬೈಕ್‍ಗಳಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ತೀವ್ರವಾಗಿ ಗಾಯ ಗೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ತಾಲೂಕಿನ ಬನ್ನಿಕುಪ್ಪೆ ಗ್ರಾಮ ನಿವಾಸಿ ಹಾಗೂ ಪತ್ರಕರ್ತ ಚಲುವ ರಾಜ್ ಅವರ ಪುತ್ರ ಕೀರ್ತಿರಾಜ್(24), ಮೈಸೂರಿನ ಮಂಡಿ ಮೊಹ ಲ್ಲಾದ ಕೈಲಾಸಪುರಂ ನಿವಾಸಿ ನಾಗರಾಜು ಪುತ್ರ ಹಾಗೂ ಕೆಇಬಿ ಉದ್ಯೋಗಿ ರವಿಕುಮಾರ್(43) ಮೃತಪಟ್ಟವರಾಗಿದ್ದು, ಮೈಸೂರು ಉದಯಗಿರಿ ನಿವಾಸಿ ಇರ್ಫಾನ್ ಹಾಗೂ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದ ನಾಗೇಂದ್ರ ತೀವ್ರವಾಗಿ ಗಾಯಗೊಂಡು ಮೈಸೂ ರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿವರ: ಬಜಾಜ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೀರ್ತಿರಾಜ್ ಸೋಮ ವಾರ ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ವೆಂಟೋ ಕಾರಿ(ಕೆಎ-03, ಎನ್‍ವಿ-4267)ನಲ್ಲಿ ಬನ್ನಿಕುಪ್ಪೆ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರ್ಯನಿಮಿತ್ತ ತನ್ನ ಸ್ನೇಹಿತ ಇರ್ಫಾನ್ ಜೊತೆ ಬುಲೆಟ್ ಬೈಕ್(ಕೆಎ-55, ಇಬಿ-3643)ನಲ್ಲಿ ಕೊಡಗಿನ ಗೋಣಿಕೊಪ್ಪಕ್ಕೆ ಹೋಗಿ, ಮೈಸೂರಿಗೆ ರವಿಕುಮಾರ್ ಮರಳುತ್ತಿದ್ದರು. ಇದೇ ಸಂದರ್ಭ ಮತ್ತೊಂದು ಬೈಕ್(ಕೆಎ-45, ವಿ-2430)ನಲ್ಲಿ ಬನ್ನಿಕುಪ್ಪೆಯ ನಾಗೇಂದ್ರ ಹುಣಸೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಸೋಮನಹಳ್ಳಿ ಬಳಿ ಕೀರ್ತಿರಾಜ್ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರವಿಕುಮಾರ್ ಹಾಗೂ ನಾಗರಾಜು ಅವರ ಬೈಕ್‍ಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ನಂತರ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿ ಕೀರ್ತಿರಾಜ್ ಸ್ಥಳದಲ್ಲೇ ಮೃತಪಟ್ಟರೆ, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರವಿಕುಮಾರ್, ಇರ್ಫಾನ್ ಹಾಗೂ ನಾಗರಾಜು ಅವರನ್ನು ಚಿಕಿತ್ಸೆಗಾಗಿ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೇ ರವಿಕುಮಾರ್ ಕೊನೆಯುಸಿರೆಳೆÀದಿದ್ದಾರೆ. ಘಟನೆಯಲ್ಲಿ ಬೈಕ್‍ಗಳು ಜಖಂಗೊಂಡಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ರವಿಕುಮಾರ್, ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ನೇತೃತ್ವದ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲದೇ ಮೃತ ಕೀರ್ತಿರಾಜ್ ಅವರ ಮೃತದೇಹವನ್ನು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »