ವಿಜ್ಞಾನ ಪ್ರದರ್ಶನದಲ್ಲಿ ಸ್ವಾಮಿ ಯುಕ್ತೇಶಾನಂದಜೀ ಮಹರಾಜ್
ಮೈಸೂರು: ವಿಜ್ಞಾನ ಪ್ರಯೋಗಗಳು ಮನುಷ್ಯನ ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ರಾಮಕೃಷ್ಣ ವಿದ್ಯಾ ಶಾಲೆಯ ಕರೆಸ್ಟಾಂಡೆಂಟ್ ಸ್ವಾಮಿ ಯುಕ್ತೇಶಾನಂದಜೀ ಮಹರಾಜ್ ಅಭಿಪ್ರಾಯಪಟ್ಟರು.
ಮೈಸೂರಿನ ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾ ಕೇಂದ್ರದ ಶಾರದಾ ಸಭಾಂಗಣದಲ್ಲಿ ರಾಮಕೃಷ್ಣ ವಿದ್ಯಾ ಕೇಂದ್ರ, ಆರ್‍ಕೆವಿಕೆ ಸಂಯುಕ್ತ ಪದವಿಪೂರ್ವ ಕಾಲೇಜು, ಬೆಂಗಳೂರಿನ ಗ್ಯಾನ್‍ಪ್ರೊ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ವಿಜ್ಞಾನ ಪ್ರದರ್ಶನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ವಿಷಯವನ್ನಾದರೂ ಆಸಕ್ತಿಯಿಂದ ಕೇಳಿಸಿಕೊಂಡು, ಮನನ ಮಾಡಿ ಅದರಲ್ಲಡಗಿರುವ ವಿಷಯವನ್ನು ತಿಳಿದು, ಅದನ್ನು ಜ್ಞಾನವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಪಾಠಗಳನ್ನು ಆಸಕ್ತಿಯಿಂದ ಕೇಳಿಸಿಕೊಂಡು ಅದಕ್ಕೆ ಸಂಬಂ ಧಿಸಿದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡರೆ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಕೇಂದ್ರದ ಶಾಲಾ ಸಮಿತಿ ಅಧ್ಯಕ್ಷ ಜೆ.ಕೆ.ಬಸಪ್ಪ, ಉಪಾಧ್ಯಕ್ಷ ಎಚ್.ಕೆ.ಅಶೋಕ್ ಕುಮಾರ್, ನಿವೃತ್ತ ಪ್ರಾಚಾರ್ಯ ಬಿ.ಎಸ್.ಶ್ರೀಕಂಠಯ್ಯ ಗ್ಯಾನ್‍ಪ್ರೊ ಸಂಸ್ಥಾಪಕ ಮತ್ತು ಸಿಇಓ ಡಾ.ಸುಪ್ರೀತ್ ಕಿಟ್ಟನ್‍ಕೆರೆ, ಮುಖ್ಯೋಪಾಧ್ಯಾಯರಾದ ಜಿ.ಎನ್. ವಿಶ್ವನಾಥ್ ಮತ್ತು ವೀಣಾ ಕೆ.ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.