ಸ್ಕೌಟ್ಸ್-ಗೈಡ್ಸ್‍ಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ವಿವಿಧ ಕಾರ್ಯಕ್ರಮ
ಮೈಸೂರು

ಸ್ಕೌಟ್ಸ್-ಗೈಡ್ಸ್‍ಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ವಿವಿಧ ಕಾರ್ಯಕ್ರಮ

November 4, 2018

ಮೈಸೂರು: ಪರಿಸರ ಪ್ರಜ್ಞೆ, ರಾಷ್ಟ್ರಪ್ರೇಮದೊಂದಿಗೆ ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.

ಮೈಸೂರಿನ ಬೇಡನ್ ಪೊವೆಲ್ ಶಾಲೆಯ ಆವರಣದಲ್ಲಿರುವ ಜಯಚಾಮ ರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಮೈಸೂರು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳ ಒಂದು ದಿನದ ಮಾಹಿತಿ ಕಾರ್ಯಾ ಗಾರವನ್ನು ಉದ್ಘಾಟಿಸಿದ ಅವರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ತನ್ನದೇ ಆದ ಇತಿಹಾಸವಿದ್ದು, ಕರ್ನಾಟಕದಲ್ಲಿಯೂ ಛಾಪು ಮೂಡಿಸಿದೆ. ಮುಂದಿನ ಪೀಳಿಗೆಗೆ ಪರಿಸರ ಪ್ರಜ್ಞೆ, ರಾಷ್ಟ್ರಪ್ರೇಮವನ್ನು ಕಲಿಸುವುದರೊಂದಿಗೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವುದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರಮಿಸುತ್ತಿದೆ ಎಂದು ಹೇಳಿದರು.

110 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲೆಡೆ ಪಸರಿಸಿದೆ. ಈ ಹಿಂದೆ ಮೈಸೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಬೆಳೆಯಲು ಮೈಸೂರು ರಾಜವಂಶಸ್ಥರು ನೆರವು ನೀಡಿದ್ದರು. ಬಳಿಕ ರಾಜ್ಯ ಸರ್ಕಾರಗಳು ಪ್ರೋತ್ಸಾಹ ನೀಡುತ್ತಾ ಬಂದಿವೆ. ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಿ, ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವುದ ಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾನಿಲಯಗಳ, ಶಾಲಾ-ಕಾಲೇಜುಗಳ ವಿದ್ಯಾರ್ಥಿ ಗಳನ್ನು ಸಂಸ್ಥೆಗೆ ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ ಪಿಯು ಕಾಲೇಜುಗಳ ಪ್ರಾಂಶು ಪಾಲರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಕಳೆದ ವರ್ಷ ಕಡಕೊಳ ಕೈಗಾರಿಕಾ ಪ್ರದೇಶದ ಅಡಕನಹಳ್ಳಿ ಬಳಿ ಕಾರ್ಯಕ್ರಮ ಯಶಸ್ವಿ ಯಾಗಿ ನಡೆದಿತ್ತು. ಈ ಸಾಲಿನ ಜಾಂಬೂರಿ ಉತ್ಸವವನ್ನು ಹಾಸನದಲ್ಲಿ ನಡೆಸಲು ಉದ್ದೇ ಶಿಸಲಾಗಿದೆ. ಈ ತಿಂಗಳ ಅಂತ್ಯ ಅಥವಾ ಡಿಸೆಂಬರ್‍ನಲ್ಲಿ ಈ ಉತ್ಸವ ನಡೆಯಲಿದೆ ಎಂದರು.

ಇದೇ ವೇಳೆ ಭಾರತ್ ಸ್ಕೌಟ್ಸ್‍ನ ಹಿರಿಯರಾದ ಜಾನಕಿ ವೇಣುಗೋಪಾಲ್ ಉಪನ್ಯಾಸ ನೀಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಚಳವಳಿ. ಅದು ನಿಂತ ನೀರಲ್ಲ. ಹೆಮ್ಮರವಾಗಿ ಬೆಳೆಯುತ್ತಿದೆ. ಎಲ್ಲರಿಗೂ ಸಂಸ್ಥೆಯ ಬಾಗಿಲು ತೆರೆದಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸೇರಬಹುದಾಗಿದೆ. ಶಿಕ್ಷಣ ನೀಡುವುದೇ ನಮ್ಮ ಗುರಿ ಎಂದರು. ಡಾ.ಸಿದ್ದೇಶ್, ಡಾ.ಕೆ.ವಿ.ಗುರುಮೂರ್ತಿ, ಕೆ.ಜಿ.ಗೋಪಾಲಕೃಷ್ಣ ಸಹ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ದಯಾನಂದ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಪಿ.ವಿಶ್ವನಾಥ್, ಡಾ.ಕಮಲಾರಾಮನ್ ಹಾಗೂ ಜಿಲ್ಲೆಯ ವಿವಿಧೆಡೆಯ 100ಕ್ಕೂ ಹೆಚ್ಚು ಪ್ರಾಂಶುಪಾಲರು ಪಾಲ್ಗೊಂಡಿದ್ದರು.

Translate »