- ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
- ಈ ಸಂಘಟನೆ ನಿಷೇಧ ಸಂಬಂಧ ಸರ್ಕಾರದ ಚಿಂತನೆ
ಬೆಂಗಳೂರು, ಆ.13(ಕೆಎಂಶಿ)-ರಾಜ್ಯದ ಹಲವೆಡೆ ನಡೆದ ಗಲಭೆಗಳಲ್ಲಿ ಎಸ್‍ಡಿಪಿಐ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಯನ್ನು ನಿಷೇಧಿಸುವ ಸಂಬಂಧ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕೂಡ ಎಸ್‍ಡಿಪಿಐ ಪಾತ್ರ ಇರುವುದು ಕಂಡು ಬಂದಿದೆ. ಈ ಸಂಘಟನೆಯ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಕಳೆದ 2 ದಿನಗಳ ಹಿಂದೆ ನಡೆದ ಗಲಭೆ ಬಗ್ಗೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಪ್ರಮುಖವಾಗಿ ಎಸ್‍ಡಿಪಿಐ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಎಲ್ಲಾ ಮಾಹಿತಿಯನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಇಡೀ ಘಟನೆಯ ಹಿಂದೆ ರಾಜಕಾರಣ ತಳುಕು ಹಾಕಿಕೊಂಡಿದೆ ಎಂದ ಅವರು, ಘಟನೆಗೆ ಸಂಬಂಧಿಸಿದಂತೆ 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸು ತ್ತಿದ್ದೇವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನೂ ಕೂಡ ಗುರುತಿಸಲಾಗಿದ್ದು, ಅವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಲು 3 ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.