ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ
ಮೈಸೂರು

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

March 1, 2019

ಬೆಂಗಳೂರು: ಶುಕ್ರವಾರದಿಂದ ಆರಂಭ ವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಪಿಯು ಮಂಡಳಿ ಎಲ್ಲಾ ಸಿದ್ಧತೆ, ಭದ್ರತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರದ ಸುತ್ತ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವ ಮೂಲಕ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧ ಹೇರಲಾಗಿದೆ.

ಹಿಂದಿನ ಸಾಲಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿರುವ ವ್ಯಕ್ತಿಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ಗಳನ್ನು ನಿಷೇಧಿಸಲಾಗಿದೆ. ಗೃಹ ಇಲಾಖೆ ಜತೆ ಭದ್ರತೆ ಸಂಬಂಧ ಸೂಕ್ತ ಕ್ರಮ ವಹಿಸಲಾಗಿದೆ. ವಾಟ್ಸಾಪ್, ಮೆಸೇಜ್‍ನಲ್ಲಿ ವಿದ್ಯಾರ್ಥಿ ಗಳಿಗೆ ಪ್ರಶ್ನೆಗಳು ಸಿಕ್ಕಿದರೆ ತಕ್ಷಣ ಅವರು
ದೂರು ನೀಡಬೇಕು. ಒಂದು ವೇಳೆ ವಿದ್ಯಾರ್ಥಿಗಳು ಇದನ್ನು ಮುಚ್ಚಿಟ್ಟರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 6,73,606 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 3,34,738 ವಿದ್ಯಾರ್ಥಿನಿಯರು, 3,38,868 ವಿದ್ಯಾರ್ಥಿಗಳಿದ್ದಾರೆ. 1013 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸ ಲಾಗಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿ ಗಳಿಗೆ ಉಚಿತ ಬಸ್‍ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‍ನಲ್ಲಿ ಪ್ರವೇಶಪತ್ರ ತೋರಿಸಿದರೆ ಪ್ರಯಾಣ ಉಚಿತವಾಗಿರುತ್ತದೆ. ಕಳೆದ ಸಾಲಿಗಿಂತ ಈ ಬಾರಿ 12,000 ಹೆಚ್ಚು ವಿದ್ಯಾರ್ಥಿ ಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪ್ರಶ್ನೆ ಪತ್ರಿಕೆಗಳು ಲೀಕ್ ಆಗದಂತೆ ತಡೆಯಲು ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಿರಿ ಎಂದು ಪಿಯು ಮಂಡಳಿ ಅಭಯ ನೀಡಿದೆ.

ಪರೀಕ್ಷಾ ಅಕ್ರಮ ತಡೆಯಲು 2026 ಮಂದಿ ವಿಶೇಷ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಸ್ಕ್ವಾಡ್‍ಗಳು ಕಾರ್ಯ ನಿರ್ವಹಿಸಲಿದ್ದಾರೆ. 54 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯ ಲಿದ್ದು, ಪ್ರಪ್ರಥಮ ಬಾರಿಗೆ ಆನ್‍ಲೈನ್ ಮೂಲಕ ಮೌಲ್ಯಮಾಪನ ಮಾಡಿದ ಅಂಕ ಕೇಂದ್ರದಿಂದಲೇ ನೇರವಾಗಿ ಅಪ್‍ಲೋಡ್ ಆಗುತ್ತದೆ. ಪ್ರಶ್ನೆ ಪತ್ರಿಕೆ ಸಾಗಿಸುವ ಎಲ್ಲ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಸಲಾ ಗಿದೆ. ಉತ್ತರ ಪತ್ರಿಕೆ ಕೊಠಡಿಗೆ 24×7 ಪೆÇಲೀಸ್ ಭದ್ರತೆ ಮಾಡಲಾಗಿದೆ.
ಮೈಸೂರಲ್ಲೂ ಸಕಲ ಸಿದ್ಧತೆ: 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಾಳೆ(ಮಾ.1)ಯಿಂದ ಆರಂಭವಾಗಲಿದೆ. ಮೈಸೂರು ನಗರದ 26 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 50 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ 34,685 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಆ ಪೈಕಿ 28,777 ಮಂದಿ ಹೊಸಬರು, 4,495 ಪುನರಾವರ್ತಿತ ಹಾಗೂ ಖಾಸಗಿಯಾಗಿ ನೊಂದಾಯಿಸಿಕೊಂಡಿರುವ 1,413 ಮಂದಿ ಪರೀಕ್ಷೆಗೆ ಹಾಜರಾಗುವರು ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪನಿರ್ದೇಶಕ ಡಾ.ದಯಾನಂದ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ

Translate »