ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಸಂಹಾರ ಮಾಡದೇ ಬಿಡಲ್ಲ…
ಮೈಸೂರು

ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಸಂಹಾರ ಮಾಡದೇ ಬಿಡಲ್ಲ…

March 1, 2019

ನವದೆಹಲಿ: ಭದ್ರತೆ ವಿಚಾರದಲ್ಲಿ ರಾಜಿಯೇ ಇಲ್ಲ. ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಅವರನ್ನು ಸಂಹಾರ ಮಾಡಲು ಸಜ್ಜಾಗಿದ್ದೇವೆ ಎಂದು ಘೋಷಿಸಿದ ಭಾರತದ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯವನ್ನು ಪ್ರದರ್ಶಿಸಿದರು.

ಭೂ ಸೇನೆಯ ಮೇಜರ್ ಜನರಲ್ ಸುರೇಂದ್ರ ಸಿಂಗ್, ವಾಯುಸೇನೆಯ ಏರ್ ವೈಸ್ ಮಾರ್ಷಲ್ ರವಿ ಕಪೂರ್ ಮತ್ತು ನೌಕಾಪಡೆಯ ಅಡ್ಮಿರಲ್ ಡಿ.ಎಸ್.ಗುಜ್ರಾಲ್ ಅವರುಗಳು ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನದ ಕ್ಷಿಪಣಿಯ ತುಣುಕನ್ನು ಪ್ರದರ್ಶಿಸುವ ಮೂಲಕ ಆ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿತು ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸಿದರು.

ಪಾಕಿಸ್ತಾನವು ಫೆ.14ರಿಂದ ಸುಮಾರು 30 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದೆ ಎಂದ ಅವರು, ಫೆ.26ರಂದು ಪಾಕಿಸ್ತಾನ ಸೇನೆಯು ನೌಷೇರ ಮತ್ತು ಕೃಷ್ಣಘಾಟಿ ವಲಯದಲ್ಲಿ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಮೂರೂ ವಲಯಗಳಲ್ಲಿ ಸೇನೆ ಹೈ ಅಲರ್ಟ್ ಆಗಿತ್ತು. ಫೆ.27ರಂದು ಪಾಕ್‍ನ ಎಫ್-16 ಯುದ್ಧ ವಿಮಾನಗಳು ನಮ್ಮ ವಾಯು ನೆಲೆಯನ್ನು ಬಿಗಿಯಾಗಿಟ್ಟುಕೊಂಡು ದಾಳಿ ನಡೆಸಲು ಬರುತ್ತಿರುವುದು ರಾಡರ್‍ನಲ್ಲಿ ಪತ್ತೆಯಾಯಿತು. ತಕ್ಷಣವೇ ಅವುಗಳನ್ನು ಹಿಮ್ಮೆಟ್ಟಿಸಲು ನಮ್ಮ ಮಿಗ್-21 ಯುದ್ಧ ವಿಮಾನ ತೆರಳಿತು. ಅವರ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಯಿತು. ಅದೇ ವೇಳೆ ನಾವು ಒಂದು ಮಿಗ್ ವಿಮಾನವನ್ನು ಕಳೆದುಕೊಂಡಿದ್ದೇವೆ. ನಮ್ಮ ಮಿಗ್-21 ಪತನವಾಗಿ ಅದರ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಕೆಳಗೆ ಬಿದ್ದಾಗ ಅವರನ್ನು ಪಾಕ್ ಸೈನಿಕರು ವಶಕ್ಕೆ ಪಡೆದರು ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ಪಾಕ್ ಹಲವಾರು ಸುಳ್ಳುಗಳನ್ನು ಹೇಳಿತ್ತು. ಅವರು ಎಫ್-16 ವಿಮಾನವನ್ನೇ ಬಳಸಿಲ್ಲ ಎಂದರು. ಬದಲಿಗೆ ನಮ್ಮ ಮೂವರು ಪೈಲಟ್‍ಗಳು ಅವರ ವಶದಲ್ಲಿರುವುದಾಗಿ ಹೇಳಿದ್ದರು. ನಂತರ ಹೇಳಿಕೆ ಬದಲಿಸಿ ಓರ್ವ ಪೈಲಟ್ ವಶದಲ್ಲಿರುವುದಾಗಿ ಹೇಳಿದರು. ಭಯೋತ್ಪಾದಕರ ವಿರುದ್ಧ ಬಳಸಲು ಮಾತ್ರವೇ ಪಾಕ್‍ಗೆ ಅಮೇರಿಕಾ ಎಫ್-16 ಯುದ್ಧ ವಿಮಾನವನ್ನು ಸರಬರಾಜು ಮಾಡಿದೆ. ಆದರೆ, ಪಾಕ್ ಅದನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಸೇನೆ ಮೇಲೆ ದಾಳಿಗೆ ಬಳಸಿದೆ. ಅದಕ್ಕೆ ಸಾಕ್ಷಿಯಾಗಿ ನಾವು ಪತನಗೊಳಿಸಿದ ಎಫ್-16 ಯುದ್ಧ ವಿಮಾನದಿಂದ ಮಾತ್ರ ಉಡಾಯಿಸ ಬಹುದಾದ ಕ್ಷಿಪಣಿಯ ಅವಶೇಷಗಳು ರಜೌರಿ ಬಳಿ ಪತ್ತೆಯಾಗಿದೆ ಎಂದು ಹೇಳುತ್ತಾ, ಆ ಕ್ಷಿಪಣಿಯ ತುಣುಕನ್ನು ಸಾಕ್ಷಿಯಾಗಿ ಪ್ರದರ್ಶಿಸಿದರು.

ನಾವು ಕದನ ವಿರಾಮವನ್ನು ಉಲ್ಲಂಘಿಸಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್‍ನಲ್ಲಿ ಭಯೋತ್ಪಾದಕರ ನೆಲೆಯನ್ನು ಧ್ವಂಸ ಮಾಡಿದ್ದೇವೆ. ನಿಗದಿತ ಉದ್ದೇಶದಿಂದ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಭಯೋತ್ಪಾ ದಕರ ನೆಲೆಯನ್ನು ಧ್ವಂಸ ಮಾಡಲಾಯಿತು. ನಾವು ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ, ಪಾಕಿಸ್ತಾನ ನಮ್ಮ ಸೇನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಯಿತು ಎಂದ ಅವರು, ಪಾಕ್‍ನ ಪ್ರಚೋದನೆಯನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ತಕ್ಕ ಪಾಠ ಕಲಿಸಲು ಸನ್ನದ್ಧರಾಗಿದ್ದೇವೆ ಎಂದರು.

ಬಾಲಾಕೋಟ್‍ನಲ್ಲಿ ಭಯೋತ್ಪಾದಕರ ನೆಲೆಯನ್ನು ಧ್ವಂಸಗೊಳಿಸಿರುವುದಕ್ಕೆ ಸಾಕ್ಷ್ಯವನ್ನು ಸರ್ಕಾರಕ್ಕೆ ನೀಡಿದ್ದೇವೆ. ಅದನ್ನು ಬಿಡುಗಡೆ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದ ಅವರುಗಳು, ಭಯೋತ್ಪಾದಕರು ಎಲ್ಲೇ ಅಡಗಿದ್ದರೂ, ಅವರನ್ನು ಸಂಹಾರ ಮಾಡಲು ನಾವು ಸಜ್ಜಾಗಿದ್ದೇವೆ. ಪಾಕ್‍ನಲ್ಲಿರುವ ಭಯೋತ್ಪಾದಕರನ್ನೂ ಕೂಡ ಪತ್ತೆ ಹಚ್ಚಿ ಸಂಹಾರ ಮಾಡಲು ಸಿದ್ಧವಾಗಿದ್ದೇವೆ. ಪಾಕಿಸ್ತಾನ ನಮ್ಮನ್ನು ಪದೇ ಪದೆ ಕೆಣಕಿದರೆ ಅದಕ್ಕೂ ತಕ್ಕ ಉತ್ತರವನ್ನು ನೀಡುತ್ತೇವೆ ಎಂದರು.

ಸಮುದ್ರದ ಮೂಲಕ ಭಯೋತ್ಪಾದಕರು ನುಸುಳಲು ಯತ್ನಿಸಿದರೆ ನೌಕಾಪಡೆ ತಡೆಯುತ್ತದೆ. ಯಾವುದೇ ಕಾರಣಕ್ಕೂ ನುಸುಳುಕೋರರು ದೇಶದೊಳಗೆ ಬರಲು ಬಿಡುವುದಿಲ್ಲ ಎಂದು ಹೇಳಿದ ಅವರುಗಳು ಪಾಕ್ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ನಾಳೆ ಬಿಡುಗಡೆಯಾಗಿ ತಾಯ್ನಾಡಿಗೆ ಬರುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

Translate »