ಪಾಕ್ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್‍ ಅಭಿನಂದನ್‍ಇಂದು ಬಿಡುಗಡೆ
ಮೈಸೂರು

ಪಾಕ್ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್‍ ಅಭಿನಂದನ್‍ಇಂದು ಬಿಡುಗಡೆ

March 1, 2019

ನವದೆಹಲಿ: ಪಾಕಿಸ್ತಾನ ವಶದಲ್ಲಿರುವ ಭಾರತದ ಮಿಗ್-21 ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ನಾಳೆ (ಮಾ.1) ಬಿಡುಗಡೆಯಾಗಿ, ಭಾರತಕ್ಕೆ ಮರಳಲಿದ್ದಾರೆ. ಈ ಮೂಲಕ ಭಾರತ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಸಾಧಿಸಿದೆ.

ಇಂದು ಮಧ್ಯಾಹ್ನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಲ್ಲಿನ ಸಂಸತ್‍ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆ ಘೋಷಿಸಿದರು. `ನಿನ್ನೆ ನಡೆದ ಘಟನೆಯಲ್ಲಿ ಭಾರತದ ಯುದ್ಧ ವಿಮಾನ ಮಿಗ್-21 ಪತನಗೊಂಡಿದ್ದು, ಅದರ ಪೈಲಟ್ ಸೆರೆ ಹಿಡಿದಿದ್ದೇವೆ. ಶಾಂತಿ ಸಂದೇಶದ ರೂಪದಲ್ಲಿ ಅವರನ್ನು ನಾಳೆ (ಮಾ.1) ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ’ ಎಂದು ಅವರು ಹೇಳಿದರು. ಪಾಕ್ ಪ್ರಧಾನಿಯ ಈ ಘೋಷಣೆಗೆ ಅಲ್ಲಿನ ಸಂಸತ್‍ನಲ್ಲಿ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಅದಕ್ಕೆ ಬದಲಾಗಿ ಪಾಕ್‍ನ ಎಲ್ಲಾ ಸಂಸದರು ಮೇಜು ಕುಟ್ಟುವ ಮೂಲಕ ಪ್ರಧಾನಿ ಇಮ್ರಾನ್ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಬುಧವಾರ ವಿಂಗ್ ಕಮಾಂಡರ್ ಅಭಿ ನಂದನ್ ಅವರನ್ನು ಪಾಕ್ ಸೆರೆ ಹಿಡಿ ದಿರುವ ವಿಚಾರ ಖಚಿತವಾಗುತ್ತಿದ್ದಂತೆಯೇ ಭಾರತ, ಪಾಕ್‍ಗೆ ಎಚ್ಚರಿಕೆ ಸಂದೇಶ ರವಾ ನಿಸಿತ್ತು. ಜಿನೀವಾ ಒಪ್ಪಂದ ಉಲ್ಲಂಘಿಸಿ ನಮ್ಮ (ಭಾರತ) ಪೈಲಟ್ ಮೇಲೆ ಹಲ್ಲೆ ನಡೆಸಲಾಗಿದೆ. ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು. ತಕ್ಷಣವೇ ಅವ ರನ್ನು ಬಿಡುಗಡೆ ಮಾಡಬೇಕು. ಇಲ್ಲದಿ ದ್ದರೆ ಗಂಭೀರ ಪರಿಣಾಮ ಎದುರಿಸಬೇಕಾ ಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿತ್ತು.

ಅಲ್ಲದೆ ಭಾರತದಲ್ಲಿರುವ ಪಾಕ್ ರಾಯ ಭಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿಕೊಂಡು ಪಾಕ್ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಅಭಿನಂದನ್ ಬಿಡು ಗಡೆ ಮಾಡದಿದ್ದರೆ ಕಠಿಣ ಕ್ರಮ ಅನಿ ವಾರ್ಯ ಎಂದು ಎಚ್ಚರಿಸಲಾಗಿತ್ತು.

ಇಂದು ಬೆಳಿಗ್ಗೆ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳು ಅಮೇರಿಕಾ, ಜರ್ಮನ್, ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಚೀನಾ ಸೇರಿದಂತೆ 10 ದೇಶಗಳ ರಾಯಭಾರಿಗಳ ಜೊತೆ ಸಭೆ ನಡೆಸಿ, ಇಂದಿನ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದರು. ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೇಲೆ ಹಲ್ಲೆ ನಡೆಯುತ್ತಿರುವ ದೃಶ್ಯಗಳ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅಮೇರಿಕಾ ಸೇರಿದಂತೆ ಅಂತರರಾಷ್ಟ್ರೀಯ ಸಮೂಹಗಳಿಂದ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಾಯಿತು. ಜೊತೆಗೆ ಮಿತ್ರ ರಾಷ್ಟ್ರಗಳಾದ ಚೀನಾ ಮತ್ತು ಸೌದಿ ಅರೇಬಿಯಾ ಬೆಂಬಲವೂ ಪಾಕ್‍ಗೆ ದೊರೆಯದಂತಾಯಿತು. ಈ ಹಿನ್ನೆಲೆಯಲ್ಲಿ ಭಾರತದೊಂದಿಗಿನ ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಕೇವಲ ಎರಡೇ ದಿನದಲ್ಲಿ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಪಾಕ್ ಸರ್ಕಾರ ನಿರ್ಧರಿಸಿದೆ.

ಅಭಿನಂದನ್ ಅವರನ್ನು ನಾಳೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಅಥವಾ ಅಂತರರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆಗೆ ಪಾಕ್ ಹಸ್ತಾಂತರಿಸಬಹುದು ಎಂದು ಹೇಳಲಾಗಿದ್ದು, ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಲಿರುವ ಅಭಿನಂದನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಜಾಯ್ ಥೋವಸ್ ಕುರಿಯನ್ ನೇತೃತ್ವದ ವಾಯುಪಡೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆ 5 ಗಂಟೆಗೆ ಭೂ ಸೇನೆ, ವಾಯುಸೇನೆ ಮತ್ತು ನೌಕಾಪಡೆ ಮುಖ್ಯಸ್ಥರ ಜಂಟಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಆದರೆ ಅಭಿನಂದನ್ ಅವರ ಬಿಡುಗಡೆ ಘೋಷಣೆಯಾಗುತ್ತಿದ್ದಂತೆಯೇ ಸುದ್ದಿಗೋಷ್ಠಿಯನ್ನು ಸಂಜೆ 7 ಗಂಟೆಗೆ ಮುಂದೂಡಲಾಯಿತು. ಈ ಸಮಯದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರೂ ಸೇನಾ ಮುಖ್ಯಸ್ಥರ ಜೊತೆ ಮಹತ್ವದ ಸಭೆ ನಡೆಸಿ, ಮುಂದಿನ ನಡೆ ಬಗ್ಗೆ ಚರ್ಚಿಸಿದರು. ನಾಳೆ ತಾಯ್ನಾಡಿಗೆ ಮರಳಲಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸ್ವಾಗತಿಸಲು ಅವರ ಕುಟುಂಬ ವರ್ಗದವರು ಇಂದು ರಾತ್ರಿ 10.35ರ ವಿಮಾನದಲ್ಲಿ ಚೆನ್ನೈನಿಂದ ನವದೆಹಲಿಗೆ ತೆರಳಿದರು.

Translate »