ಭಾರತಕ್ಕೆ ‘ಅಭಿನಂದನ’
ಮೈಸೂರು

ಭಾರತಕ್ಕೆ ‘ಅಭಿನಂದನ’

March 2, 2019

ಶುಕ್ರವಾರ ರಾತ್ರಿ 9.30ಕ್ಕೆ ವಾಘಾ ಗಡಿ ಮೂಲಕ ತಾಯ್ನಾಡಿಗೆ ಮರಳಿದ ವೀರ ಸೇನಾನಿ

ನವದೆಹಲಿ: ಕಳೆದ 2 ದಿನಗಳಿಂದ ಪಾಕ್ ಸೇನೆ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ರಾತ್ರಿ ವಾಘಾ ಹಾಗೂ ಅಟಾರಿ ಗಡಿ ಮೂಲಕ ಭಾರತ ಪ್ರವೇಶಿಸಿದರು.

ರಾತ್ರಿ 9.20ರ ವೇಳೆಗೆ ಇಬ್ಬರು ಪಾಕ್ ಸೈನಿ ಕರು ಬಂದೂಕುಗಳನ್ನು ಕೆಳಮುಖವಾಗಿರಿಸಿ ಕೊಂಡು ವಾಘಾ ಗಡಿಯ ಪಾಕ್ ಪ್ರದೇಶದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದಂತೆಯೇ ಅವರ ಹಿಂದೆ ಓರ್ವ ಮಹಿಳಾಧಿಕಾರಿ ಸೇರಿ ದಂತೆ ಪಾಕ್ ಸೇನಾಧಿಕಾರಿಗಳ ನಡುವೆ ಕಡು ನೀಲಿ ಬಣ್ಣದ ಕೋಟ್, ಬಿಳಿ ಷರ್ಟ್ ಮತ್ತು ಗ್ರೇ ಕಲರ್ ಪ್ಯಾಂಟ್ ಧರಿಸಿದ್ದ ವಿಂಗ್ ಮಾಸ್ಟರ್ ಅಭಿನಂದನ್ ರಾಜ ನಡಿಗೆಯೊಂದಿಗೆ ಭಾರತ ದತ್ತ ಹೆಜ್ಜೆ ಹಾಕಿದರು. ಭಾರತ ಮತ್ತು ಪಾಕ್ ಗಡಿಯ ಗೇಟ್ ಬಳಿ ಬರುತ್ತಿದ್ದಂತೆಯೇ ಪಾಕ್ ಸೇನಾಧಿಕಾರಿಗಳು ಗೇಟ್ ತೆರೆದು ಭಾರತೀಯ ಸೇನಾಧಿಕಾರಿಗಳ ಬಳಿ ಬಂದು ಕೆಲ ಕಾಗದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಿಂತಿರುಗುತ್ತಿ ದ್ದಂತೆಯೇ ರಾಜ ಗಾಂಭೀರ್ಯವಾಗಿ ವೇಗದ ಹೆಜ್ಜೆಗಳನ್ನಿಡುತ್ತಾ ಅಭಿನಂದನ್ ಭಾರತದ ನೆಲಕ್ಕೆ ಕಾಲಿಟ್ಟರು. ಈ ವೇಳೆ ಭಾರತೀಯ ವಾಯುಪಡೆಯ ಅಧಿಕಾರಿಯೋರ್ವರು ಅಭಿನಂದನ್ ಅವರಿಗೆ ಹಸ್ತಲಾಘವ ಮಾಡಿ ಸ್ವಾಗತಿಸಿದರು. ಅದೇ ವೇಳೆ ಮತ್ತೋರ್ವ ಅಧಿಕಾರಿ ಅಭಿನಂದನ್ ಹೆಗಲ ಮೇಲೆ ಕೈಯಿಟ್ಟು ಆಲಂಗಿಸುತ್ತಾ ಅಮೃತಸರದ ಕಡೆಗೆ ತೆರಳಲು ಸಿದ್ಧವಾಗಿದ್ದ ವಾಹನದೆಡೆಗೆ ಕರೆದೊಯ್ದರು.

ವಾಘಾ ಗಡಿಯಿಂದ ಅಭಿನಂದನ್ ಅವರನ್ನು ರಸ್ತೆ ಮಾರ್ಗವಾಗಿ ಅಮೃತಸರಕ್ಕೆ ಕರೆದೊಯ್ದು ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿದ ನಂತರ ವಿಮಾನದಲ್ಲಿ ನವದೆಹಲಿಗೆ ಕರೆದೊಯ್ಯಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಭಿನಂದನ್ ಅವರು ಸೇನಾ ವಾಹನಗಳ ಬೆಂಗಾವಲಿನೊಂದಿಗೆ ಅಮೃತಸರದತ್ತ ಪ್ರಯಾಣ ಬೆಳೆಸುತ್ತಿದ್ದಂತೆಯೇ ಸುದ್ದಿಗಾರರ ಜೊತೆ ಮಾತನಾಡಿದ ಭಾರತೀಯ ವಾಯುಪಡೆಯ ಏರ್ ವೈಸ್ ಮಾರ್ಷಲ್ ರವಿ ಕಪೂರ್ ಅವರು, ಪಾಕಿಸ್ತಾನ ಸೇನೆಯು ನಮಗೆ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಹಸ್ತಾಂತರಿಸಿದೆ. ಅವರು ಸ್ವದೇಶಕ್ಕೆ ಹಿಂದಿರುಗಿದ್ದು ಸಂತೋಷ ತಂದಿದೆ. ಅವರು ಯುದ್ಧ ವಿಮಾನದಿಂದ ಪ್ಯಾರಾಚೂಟ್ ಮೂಲಕ ಜಿಗಿದಿದ್ದರು. ಅದರಿಂದಾಗಿ ಅವರಿಗೆ ಗಾಯಗಳೇನಾದರೂ ಆಗಿವೆಯೇ ಎಂಬುದರ ಬಗ್ಗೆ ವೈದ್ಯಕೀಯ ತಪಾಸಣೆ ಮಾಡಬೇಕಾಗಿದೆ. ಅಲ್ಲದೇ ಈ ರೀತಿ ಬಿಡುಗಡೆಯಾಗಿ ಬರುವ ಸೇನಾ ಯೋಧರು ಅಥವಾ ಅಧಿಕಾರಿಗಳನ್ನು ಸಂಪೂರ್ಣವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಇಂದು ಅವರನ್ನು ಅಮೃತಸರಕ್ಕೆ ರಸ್ತೆ ಮಾರ್ಗ ವಾಗಿ ಕರೆದೊಯ್ದು, ಅಲ್ಲಿಂದ ವಿಮಾನದಲ್ಲಿ ನವದೆಹಲಿಗೆ ಕೊಂಡೊಯ್ಯ ಲಾಗುವುದು ಎಂದರು. ಅಭಿನಂದನ್ ಇಂದು ಬಿಡುಗಡೆಯಾಗಲಿ ದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ವಾಘಾ ಗಡಿಯಲ್ಲಿ ಬೆಳಿಗ್ಗೆಯಿಂದಲೇ ಸೇನಾ ಪಡೆಗಳ ಚಟುವಟಿಕೆ ತೀವ್ರಗೊಂಡಿತ್ತು.

ಸಂಜೆ 5ರ ನಂತರ ಹೆಚ್ಚಿನ ಸೇನಾ ಪಡೆಗಳು ಜಮಾವಣೆಯಾಗಿ ಅಭಿನಂದನ್ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದವು. ಅದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರೂ ಕೂಡ ಜಮಾಯಿಸಿದ್ದು, ರಾತ್ರಿ 9.30ರಲ್ಲಿ ಅಭಿನಂದನ್ ಭಾರತದ ನೆಲಕ್ಕೆ ಕಾಲಿರಿಸುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ನಾಗರಿಕರು `ಭಾರತ್ ಮಾತಾ ಕೀ ಜೈ’, `ವಂದೇ ಮಾತರಂ’, `ವೆಲ್‍ಕಮ್ ಬ್ಯಾಕ್ ಅಭಿನಂದನ್’ ಘೋಷಣೆಗಳನ್ನು ಕೂಗುತ್ತಾ, ಅಭಿನಂದನ್ ಅವರನ್ನು ಸ್ವಾಗತಿಸಿದರು.

ಪಾಕ್ ಸೃಷ್ಟಿಸಿದ ಅಭಿನಂದನ್ ವೀಡಿಯೋದಲ್ಲೇನಿದೆ…

“ನನ್ನ ಹೆಸರು ವಿಂಗ್ ಕಮಾಂಡರ್ ಅಭಿನಂದನ್.., ನಾನು ಭಾರತೀಯ ವಾಯು ಪಡೆಯ ಫೈಟರ್(ಯುದ್ಧ) ವಿಮಾನದ ಪೈಲಟ್. ನಾನು ಟಾರ್ಗೆಟ್(ಪಾಕ್ ವಿಮಾನ) ಶೋಧದಲ್ಲಿದ್ದಾಗ ನಿಮ್ಮ (ಪಾಕ್) ವಾಯುಪಡೆ ನನ್ನ ವಿಮಾನವನ್ನು ಗುರಿಯಾಗಿಟ್ಟು ಸ್ಫೋಟಿಸಿತು. ನನ್ನ ವಿಮಾನ ಹಾನಿಗೊಳಗಾಗಿ ಭೂಮಿಗೆ ಬೀಳಲಾರಂಭಿಸಿದಾಗ ನಾನು ಪ್ಯಾರಾಚೂಟ್ ಸಮೇತ ವಿಮಾನದಿಂದ ಹೊರಕ್ಕೆ ಜಿಗಿದೆ. ನಾನು ನೆಲದ ಮೇಲೆ ಬಿದ್ದಾಗ ನನ್ನೊಡನೆ ಒಂದು ಪಿಸ್ತೂಲ್ ಇತ್ತು.

ಅಷ್ಟರಲ್ಲಾಗಲೇ ನನ್ನ ಸುತ್ತ ಜನರು ಸುತ್ತುಗಟ್ಟಿದ್ದರು. ನನ್ನನ್ನು ಆ ಗುಂಪಿನಿಂದ ರಕ್ಷಿಸಿಕೊಳ್ಳಲು ನನಗಿದ್ದ ಒಂದೇ ಮಾರ್ಗವೆಂದರೆ, ಅಲ್ಲಿಂದ ಓಡುವುದಾಗಿತ್ತು. ನಾನು ನನ್ನ ಪಿಸ್ತೂಲನ್ನು ಕೆಳಕ್ಕೆಸೆದು ಓಡಲಾರಂಭಿಸಿದೆ. ಆದರೆ ಆ ಜನರ ಗುಂಪು ನನ್ನನ್ನು ಅಟ್ಟಿಸಿಕೊಂಡು ಬಂದಿತು. ಅವರೆಲ್ಲ ಬಹಳ ಕೋಪೋದ್ರಿಕ್ತರಾಗಿದ್ದರು. ಅಷ್ಟರಲ್ಲೇ ಅಲ್ಲಿಗೆ ಇಬ್ಬರು ಪಾಕಿಸ್ತಾನಿ ಸೇನೆ (ಕ್ಯಾಪ್ಟನ್) ಅಧಿಕಾರಿಗಳು ಧಾವಿಸಿ ಬಂದರು. ನನ್ನನ್ನು ಆ ಉದ್ರಿಕ್ತ ಗುಂಪಿನಿಂದ ಬಚಾವ್ ಮಾಡಿದರು. ನನಗೆ ಯಾವುದೇ ಹಾನಿ ಆಗದಂತೆ ರಕ್ಷಿಸಿದರು. ನಂತರ ಪಾಕ್ ಕ್ಯಾಪ್ಟನ್‍ಗಳಿಬ್ಬರೂ ನನ್ನನ್ನು ಅವರ ಯೂನಿಟ್‍ಗೆ ಕರೆದೊಯ್ದರು. ಅಲ್ಲಿ ನನಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ, ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಹಾಗೂ ಹೆಚ್ಚಿನ ಚಿಕಿತ್ಸೆ ಸಹ ಒದಗಿಸಲಾಯಿತು. ಪಾಕಿಸ್ತಾನ ಸೇನೆ ಬಹಳ ವೃತ್ತಿ ಪರವಾಗಿ ಸೇವೆ ಸಲ್ಲಿಸುವಂತಹುದಾಗಿದೆ. ಅದರಲ್ಲಿ ನಾನು ‘ಶಾಂತಿ’ಯನ್ನು ಕಂಡಿದ್ದೇನೆ. ನಾನು ಪಾಕ್ ಸೇನೆಯ ಜತೆ ಸಾಕಷ್ಟು ಸಮಯ ಕಳೆದೆ. ಹಾಗೂ ನಾನು ಅದರಿಂದ ಬಹಳ ಪ್ರಭಾವಿತನಾಗಿದ್ದೇನೆ.

ಭಾರತೀಯ ಮಾಧ್ಯಮಗಳು ಸದಾಕಾಲ ಅತ್ಯಂತ ಸಣ್ಣ ಸಂಗತಿಯನ್ನು ಬಹಳ ವೈಭವೀಕರಿಸಿದಂತೆ, ಕಿಚ್ಚುಡುವಂತೆ ಬಿತ್ತರಿಸುತ್ತವೆ. ಅದರಿಂದ ಜನರು ಮಿಸ್‍ಲೀಡ್ ಆಗುತ್ತಾರೆ(ದಾರಿ ತಪ್ಪುತ್ತಾರೆ).’’

ಇದು ವಿಂಗ್ ಕಮಾಂಡರ್ ಅಭಿನಂದನ್ ಅವರಿಂದ ಅವರ ಬಿಡುಗಡೆಗೂ ಮುನ್ನಾ ಪಾಕ್ ಸೇನೆ ಕೊಡಿಸಿದ ಹೇಳಿಕೆಯ ವೀಡಿಯೋ ಕ್ಲಿಪಿಂಗ್. ಇದರಲ್ಲಿ ಅಭಿನಂದನ್ ತಮ್ಮ ವಾಯುಪಡೆ ಸಮವಸ್ತ್ರ ಧರಿಸಿದ್ದಾರೆ. ಶೇವ್ ಮಾಡಿದ ಮುಖದಲ್ಲಿ ಮೀಸೆ ಎದ್ದು ಕಾಣುವಂತಿದೆ. ಅದರ ಜತೆಗೇ ಅವರ ಬಲಗಣ್ಣಿಗೆ ಆಗಿರುವ ಗಾಯದ ಕಪ್ಪು ಕಲೆಯೂ ಸ್ಪಷ್ಟವಾಗಿ ಗೋಚರಿಸುತ್ತದೆ.

ಅಭಿನಂದನ್ ಅದೆಷ್ಟೇ ನಿರ್ಭಾವುಕರಾಗಿ ಹೇಳಿಕೆ ದಾಖಲಿಸಲು ಯತ್ನಿಸಿದ್ದರೂ ಅವರು ತಮ್ಮ ಮನಸ್ಸಿನ ವಿರುದ್ಧವಾಗಿ ಹೇಳಿಕೆ ನೀಡಬೇಕಾಗಿ ಬಂದಿದ್ದರ ನೋವು, ಬೇಸರ, ಹಿಂಸೆಯೂ ಕಂಡು ಕಾಣದಂತೆ ಗೋಚರಿಸುತ್ತದೆ. ವೀಡಿಯೋವನ್ನು ಹಲವು ಬಾರಿ ಎಡಿಟ್ ಮಾಡಿರುವಂತಿದೆ. ಅದರ ಹಿಂದೆ ಪಾಕ್ ಸೇನೆಯ ಪ್ರಹಸನ, ತಂತ್ರಗಾರಿಕೆ, ಸತ್ಯ ಮುಚ್ಚಿಡುವ, ಸುಳ್ಳನ್ನೇ ಸತ್ಯವಾಗಿ ಬಿಂಬಿಸುವ ಕುತಂತ್ರವೂ ಮನದಟ್ಟಾಗುತ್ತದೆ.

Translate »