ನವದೆಹಲಿ: ಎರಡು ದಿನಗಳ ಕಾಲ ಪಾಕ್ ಸೇನಾ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಬಿಡುಗಡೆಯಾಗಿ ಬರುತ್ತಾರೆ ಎಂಬ ಸಂಭ್ರಮ ಇಂದು ಬೆಳಿಗ್ಗೆಯಿಂದಲೇ ದೇಶದೆಲ್ಲೆಡೆ ಮನೆ ಮಾಡಿತ್ತು.
ದೇಶದ ಜನತೆ ಅವರ ಆಗಮನವನ್ನು ಕಾತುರದಿಂದ ಎದುರು ನೋಡುತ್ತಿದ್ದರು. ಆದರೆ ಅಭಿನಂದನ್ ಹಸ್ತಾಂತರ ವಿಳಂಬವಾ ಗುತ್ತಿದ್ದಂತೆಯೇ ಹಲವು ಊಹಾಪೋಹಗಳು ಗರಿ ಬಿಚ್ಚಿಕೊಂಡವು. ಅಭಿನಂದನ್ ಅವರನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ನಿನ್ನೆ ಸಂಜೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಲ್ಲಿನ ಸಂಸತ್‍ನಲ್ಲಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯೇ ಅಭಿನಂದನ್ ಬಿಡುಗಡೆಯಾಗುತ್ತಾರೆ ಎಂಬ ಕಾತುರದಿಂದ ದೇಶಾದ್ಯಂತ ಕೋಟಿ ಕೋಟಿ ಜನರು ಟಿವಿಗಳ ಮುಂದೆ ಕುಳಿತು ಅಭಿನಂದನ್ ಆಗಮನವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.
ಆನಂತರ ಹಸ್ತಾಂತರದ ಪ್ರಕ್ರಿಯೆಗಳು ಮುಗಿದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂಬ ಸುದ್ದಿವಾಹಿನಿಗಳ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಜನರು ಅಭಿನಂದನ್ ಆಗಮನವನ್ನು ನಿರೀಕ್ಷಿಸಿ ಟಿವಿಗಳ ಮುಂದೆ ಅಲುಗಾಡದೇ ಕುಳಿತ್ತಿದ್ದರು.
ಕರ್ನಾಟಕದಲ್ಲಿ ಇಂದು ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ವಾಪಸ್ಸಾದ ವಿದ್ಯಾರ್ಥಿಗಳೂ ಟಿವಿ ಮುಂದೆಯೇ ಕುಳಿತು ಅಭಿ ನಂದನ್ ಆಗಮನಕ್ಕಾಗಿ ಕಾಯುತ್ತಿದ್ದರು. ಸುದ್ದಿವಾಹಿನಿಗಳು ವಾಘಾ ಗಡಿಯಿಂದ ನೇರ ಪ್ರಸಾರ ಮಾಡುತ್ತಿದ್ದವು. ಸಂಜೆ 5 ಗಂಟೆ ಸುಮಾರಿನಲ್ಲಿ ಬೆಂಗಾವಲಿನೊಂದಿಗೆ ಸೇನಾ ವಾಹನಗಳು ಚಲಿಸಿದ ದೃಶ್ಯವನ್ನು ಪ್ರಸಾರ ಮಾಡಿದ ವಾಹಿನಿಗಳು ಇನ್ನೇನು, ಅಭಿನಂದನ್ ಭಾರತ ಪ್ರವೇಶಿಸಲಿದ್ದಾರೆ ಎಂದು ಹೇಳತೊಡಗಿದರು. ಕೆಲ ವಾಹಿನಿಗಳಂತೂ ವಾಘಾ ಗಡಿಯಲ್ಲೇ ಅಭಿನಂದನ್ ಇದ್ದಾರೆ, ಅವರನ್ನು ಪಾಕ್ ಸೇನೆ ಭಾರತಕ್ಕೆ ಹಸ್ತಾಂತರಿಸಿದೆ. ಕೆಲವೇ ಕ್ಷಣಗಳಲ್ಲಿ ಅವರು ಭಾರತ ಪ್ರವೇಶಿಸಲಿದ್ದಾರೆ ಎಂದು ಅಬ್ಬರ-ಸಡಗರದಿಂದಲೇ ಪ್ರಸಾರ ಮಾಡಿತು. ಆದರೆ ಗಂಟೆಗಳು ಕಳೆಯುತ್ತಿದ್ದರೂ ಅಭಿನಂದನ್ ಭಾರತ ಪ್ರವೇಶಿಸುವುದಿರಲಿ, ಅವರ ಮುಖ ದರ್ಶನವೂ ಕೂಡ ಆಗದ ಕಾರಣ ಹಲವಾರು ಊಹಾಪೋಹಗಳು ಗರಿ ಬಿಚ್ಚಿಕೊಂಡವು. ಪಾಕ್ ಪ್ರಧಾನಿ ಅಭಿನಂದನ್ ಹಸ್ತಾಂತರದ ಬಗ್ಗೆ ಘೋಷಣೆ ಮಾಡಿದ್ದರೂ, ಅಲ್ಲಿನ ಐಎಸ್‍ಐ ಮತ್ತು ಸೇನೆ ಅದಕ್ಕೆ ಒಪ್ಪುತ್ತಿಲ್ಲ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಐಎಸ್‍ಐ ಮತ್ತು ಸೇನೆಯ ಒತ್ತಡಕ್ಕೆ ಸಿಲುಕಿದ್ದಾರೆ ಎಂಬ ಊಹಾಪೋಹಗಳು ಹರಡಿದವು. ಕೆಲವು ಸುದ್ದಿವಾಹಿನಿಗಳೂ ಇದೇ ವದಂತಿಗಳನ್ನು ಪ್ರಸಾರ ಮಾಡಿದವು. ಅಭಿನಂದನ್ ಇಂದು ಹಸ್ತಾಂತರವಾಗುವುದೇ ಅನುಮಾನ ಎನ್ನುವ ಮಟ್ಟಿಗೆ ಕೆಲ ಸುದ್ದಿವಾಹಿನಿಗಳಲ್ಲಿ ಚರ್ಚೆಗಳೂ ನಡೆದು ಹೋದವು.
ಚುನಾಯಿತ ಪ್ರತಿನಿಧಿಯಾಗಿರುವ ಇಮ್ರಾನ್ ಖಾನ್, ಸೇನೆ ಮತ್ತು ಐಎಸ್‍ಐ ಒತ್ತಡಕ್ಕೆ ಮಣಿದಿದ್ದಾರೆ ಎಂದರೆ ಅವರ ಪ್ರಧಾನಿ ಸ್ಥಾನಕ್ಕೆ ಅಗೌರವ ಎಂದು ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದ ಕೆಲವರು ವಿಶ್ಲೇಷಣೆಯನ್ನೂ ಮಾಡಿದರು. ಆದರೆ ಕ್ಷಣ-ಕ್ಷಣಕ್ಕೂ ವಾಘಾ ಗಡಿಯ ಚಿತ್ರಣಗಳು ಬದಲಾಗುತ್ತಿದ್ದವು. ಪಾಕ್ ಸೇನೆಯು ಹಸ್ತಾಂತರಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪ್ರಕ್ರಿಯೆಗಳನ್ನೂ ಪೂರ್ಣ ಗೊಳಿಸಿ ರಾತ್ರಿ 9.20ರ ವೇಳೆಗೆ ವಾಘಾ ಗಡಿಯಲ್ಲಿರುವ ಭಾರತ ಮತ್ತು ಪಾಕಿಸ್ತಾನ ಗೇಟ್ ಬಳಿಯೇ ಅಭಿನಂದನ್ ಅವರನ್ನು ಕರೆತರುತ್ತಿ ರುವ ದೃಶ್ಯಗಳು ಟಿವಿ ಪರದೆಯಲ್ಲಿ ಕಾಣಿಸುತ್ತಿದ್ದಂತೆಯೇ ಊಹಾ ಪೋಹಗಳೂ ಕೊನೆಗೊಂಡು ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿತು.