ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ
ಮೈಸೂರು

ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ

March 2, 2019

ಮೈಸೂರು: ಮೈಸೂರಿನ ವಿಜಯಶ್ರೀಪುರ, ಕೆ.ಆರ್. ಮಿಲ್ ಕಾಲೋನಿ ನಿವಾಸಿಗಳು ಹಾಗೂ ಫಾಲ್ಕನ್ ಟೈರ್ಸ್ ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸಮಾ ರಂಭದಲ್ಲಿ ಮೈಸೂರು ಜಿಲ್ಲೆಯ ಜನತೆ ಪರವಾಗಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತ ನಾಡುವ ಸಂದರ್ಭದಲ್ಲಿ ವಿಜಯಶ್ರೀಪುರ ಹಾಗೂ ಕೆ.ಆರ್.ಮಿಲ್ ಕಾಲೋನಿ ನಿವಾಸಿ ಗಳು ತಮ್ಮ ಸಮಸ್ಯೆ ಬಗ್ಗೆ ಗಮನ ಸೆಳೆ ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರ ಸ್ವಾಮಿ, ನಾನು ಕೊಟ್ಟ ಮಾತನ್ನು ಉಳಿಸಿ ಕೊಳ್ಳುತ್ತೇನೆ. ವಿಜಯಶ್ರೀಪುರ ಬಡಾವಣೆ ನಿವಾಸಿಗಳ ಮನೆಗಳನ್ನು ಉಳಿಸಿಕೊಡು ತ್ತೇನೆ. ಫಾಲ್ಕನ್ ಟೈರ್ಸ್ ಕಾರ್ಖಾನೆ ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ನೂತನ ಕರಾರು ಮಾಡಿಕೊಳ್ಳಲಾಗಿದೆ. ಇನ್ನು ಕೆ.ಆರ್.ಮಿಲ್ ಕಾಲೋನಿ ನಿವಾಸಿಗಳ ಮೇಲಿನ ಸಾಲದ ತೀರುವಳಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2006ರಲ್ಲಿ ಹೆಚ್.ಡಿ. ಕೋಟೆಯ ತಾರಕ ಗೇಟ್ ಒಡೆದಾಗ ಸೂಕ್ತ ಪರಿಹಾರ ನೀಡಿದ್ದೆ.
ಈಗಲೂ ನಿಮ್ಮ ಯಾವುದೇ ಬೇಡಿಕೆಯನ್ನು ಈಡೇರಿಸುವುದು ನನ್ನ ಜವಾಬ್ದಾರಿ ಎಂದು ಅಭಯ ನೀಡಿದರು.

ಸಿದ್ದರಾಮಯ್ಯರಿಗಿಂತ ಒಂದು ಹೆಜ್ಜೆ ಮುಂದು: ಮಂಡ್ಯ ಜಿಲ್ಲೆಯಲ್ಲಿ ಏಳೆಂಟು ಸಾವಿರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೈಸೂರಿನ ಮೂಲಭೂತ ಸೌಕರ್ಯಕ್ಕೆ 150 ಕೋಟಿ ರೂ., ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ 570 ಕೋಟಿ ರೂ. ಸೇರಿದಂತೆ ಸುಮಾರು 3 ಸಾವಿರ ಕೋಟಿ ರೂ. ಅಂದಾಜಿನ ಕಾಮಗಾರಿಗಳ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಮೈಸೂರಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಿ, ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧವಾಗಿದ್ದೇನೆ. ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಜನೆಗಳಿಗೆ ಅನುದಾನ ನೀಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ನಿಮ್ಮ ಕುಟುಂಬಗಳಿಗೆ ನೆಮ್ಮದಿ ಕಲ್ಪಿಸುವ ನಿಟ್ಟಿನಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದರು.

ಕುತಂತ್ರಿಗಳ ವಿರುದ್ಧ ಹೋರಾಟ: ಮೈತ್ರಿ ಸರ್ಕಾರವನ್ನು ಅಭದ್ರ ಗೊಳಿಸಲು ಹವಣಿಸುವ ಕುತಂತ್ರಿಗಳ ವಿರುದ್ಧ ಹೋರಾಡುವುದರ ನಡುವೆ ಜನಪರವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಚಾಮುಂಡೇಶ್ವರಿ ಅನುಗ್ರಹದಿಂದ ನಾನು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ. ಈ ಸರ್ಕಾರ ಎಷ್ಟು ದಿನ ಇರುತ್ತದೋ? ಎಂಬ ಸಂಶಯವನ್ನು ಸರಿಸಿ, 9 ತಿಂಗಳ ಕಾಲ ಆಡಳಿತ ನಡೆಸಿದ್ದೇನೆ. ಚುನಾವಣಾ ಪೂರ್ವ ಭರವಸೆಯಂತೆ ರೈತರ ಸಾಲಮನ್ನಾ ಹೇಗೆ? ಮಾಡುತ್ತಾರೆ ಎಂಬ ಅನುಮಾನವಿತ್ತು. ಈ ಬಗ್ಗೆ ವಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಒಟ್ಟು 2.37 ಲಕ್ಷ ಕೋಟಿ ರೂ. ಆಯವ್ಯಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ, ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳಿಗೆ ಹಣ ವಿನಿಯೋಗಿಸಬೇಕು. ಇದೆಲ್ಲದರ ನಡುವೆ ರೈತರ ಸಾಲಮನ್ನಾಗೆ ಹಣ ಹೊಂದಿಸಲಾಗುತ್ತಿದೆ. ಚುನಾವಣೆಗೆ ಇನ್ನೆರಡು ತಿಂಗಳಿರುವಾಗ ರೈತರ ಬಗ್ಗೆ ಕಾಳಜಿ ತೋರುತ್ತಿರುವ ಪ್ರಧಾನಿ ಮೋದಿ ಅವರು, ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು ಘೋಷಿಸಿದ್ದಾರೆ. ಅದರಂತೆ ಕರ್ನಾಟಕಕ್ಕೆ 2098 ಕೋಟಿ ರೂ. ಬರಬಹುದು. ಆದರೆ ನಾವು ಹಾಲು ಉತ್ಪಾದಕರಿಗೆ 2,500 ಕೋಟಿ ರೂ. ಪ್ರೋತ್ಸಾಹ ಧನ, ಕೃಷಿ ಪಂಪ್‍ಸೆಟ್‍ಗಳ ಉಚಿತ ವಿದ್ಯುತ್‍ಗೆ 11 ಸಾವಿರ ಕೋಟಿ ರೂ. ಸೇರಿ ಒಟ್ಟು 13,500 ಕೋಟಿ ರೂ. ನೀಡಲಾಗುತ್ತಿದೆ. ಇದೆಲ್ಲಾ ಜನರಿಗೆ ಗೊತ್ತಿದೆ ಎಂದರು.

ಸ್ತ್ರೀಶಕ್ತಿ ಸಂಘಗಳಿಗೂ ಭರವಸೆ: ಭಾಷಣದ ನಡುವೆ ಮಹಿಳೆಯರು ಎದ್ದು ನಿಂತು ಸ್ತ್ರೀಶಕ್ತಿ ಸಂಘಗಳಿಗೆ ನೆರವಾಗಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ರೈತರ ಸಾಲ ಮನ್ನಾ ಪೂರ್ಣವಾದ ಬಳಿಕ ಸ್ತ್ರೀಶಕ್ತಿ ಸಂಘಗಳ ಮೇಲಿರುವ ಸಾಲವನ್ನೂ ಮನ್ನಾ ಮಾಡಲಾಗುವುದು. ಆವರೆಗೆ ಬ್ಯಾಂಕಿನಿಂದ ಯಾವುದೇ ನೋಟೀಸ್ ನೀಡದಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ರೈತರು ಒಡವೆಗಳನ್ನು ಅಡವಿಟ್ಟು ಸಾಲ ತರುತ್ತಿದ್ದಾರೆ. ಬೆಳೆ ಬರದಿದ್ದರೆ ಆ ಒಡವೆಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಅವುಗಳನ್ನು ಹರಾಜು ಮಾಡಲಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ `ರೈತ ಗೃಹಲಕ್ಷ್ಮೀ ಯೋಜನೆ’ಯನ್ನು ಜಾರಿಗೆ ತರಲಾಗಿದೆ. ಒಡವೆ ಮೇಲಿನ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ. `ಬಡವರ ಬಂಧು’ ಯೋಜನೆಯಿಂದ 4.50ಲಕ್ಷ ಬಡ ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಸಾವಿರದಿಂದ 10 ಸಾವಿರ ಬಡ್ಡಿ ರಹಿತ ಸಾಲ ಪಡೆದು ವ್ಯಾಪಾರಕ್ಕೆ ವಿನಿಯೋಗಿಸುತ್ತಿದ್ದಾರೆ. `ಕಾಯಕ’ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗರ್ಭಿಣಿಯರಿಗೆ ನೀಡುತ್ತಿರುವ ಒಟ್ಟು 12 ಸಾವಿರ ರೂ. ಮುಂದಿನ ವರ್ಷದಿಂದ ದುಪ್ಪಟ್ಟಾಗಲಿದೆ. ಹಿರಿಯ ನಾಗರಿಕರ ಗೌರವ ಧನವನ್ನು ಮಾಸಿಕ 2 ಸಾವಿರ ರೂ.ಗೆ ಏರಿಕೆ ಮಾಡಲಾಗುವುದು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಹಾಗೂ ಸಹಕಾರ ಸಚಿವ ಬಂಡಪ್ಪ ಕಾಶೆಂಪೂರ್ ಮಾತನಾಡಿ, ಕುಮಾರಸ್ವಾಮಿ ಅವರ 9 ತಿಂಗಳ ಆಡಳಿತದ ಬಗ್ಗೆ ವಿವರಿಸಿ, 5 ವರ್ಷ ಪೂರೈಸಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಅನ್ನದಾನಿ, ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ಮಹದೇವು, ಶಾಸಕರಾದ ಎನ್.ಮಹೇಶ್, ಅಶ್ವಿನ್‍ಕುಮಾರ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ನಗರಪಾಲಿಕೆ ಉಪಮೇಯರ್ ಷಫೀ ಅಹಮ್ಮದ್, ಮುಖಂಡರಾದ ಪ್ರೊ.ಕೆ.ಎಸ್.ರಂಗಪ್ಪ, ಅಬ್ದುಲ್ ಅಜೀಜ್(ಅಬ್ದುಲ್ಲಾ), ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಪಾಲಿಕೆ ಸದಸ್ಯರಾದ ಎಸ್.ಬಿ.ಎಂ ಮಂಜು, ಪ್ರೇಮಾ ಶಂಕರೇಗೌಡ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಗgಧ್ಯಕ್ಷ ಕೆ.ಟಿ.ಚೆಲುವೇಗೌಡ ಮತ್ತಿತರರು ಉಪಸ್ಥಿತರಿದ್ದರು.

Translate »