ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…
ಮೈಸೂರು

ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…

March 2, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್‍ಕುಮಾರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂಬುದು ಇಂದು ಮೈಸೂರಿನಲ್ಲಿ ಬಹಿರಂಗವಾಗಿದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸುವಾರಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕೆಂದು ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರನ್ನು ಮನವಿ ಮಾಡಿಕೊಂಡೆವು.

ಅದೇನೇ ಇರಲಿ ಯಾರೇ ಅಭ್ಯರ್ಥಿಯಾದರೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಗೆಲ್ಲಿಸುತ್ತೇವೆಂದು ನೀವೆಲ್ಲಾ ಸಂಕಲ್ಪ ಮಾಡಬೇಕು. ಮೈಸೂರು ನಗರ ಸೇರಿದಂತೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅಭ್ಯರ್ಥಿ ಯಾರೇ ಆದರೂ ನೀವು ಗೆಲ್ಲಿಸುತ್ತೀರಿ ಎಂದು ನಂಬಿಕೆಯಿದೆ ಎಂದರ ಲ್ಲದೆ, ನಿಖಿಲ್ ಕುಮಾರ್ ಅವರನ್ನು ಮೈಸೂರಿಗೆ ಕಳುಹಿಸಿ ಕೊಡಿ, ನಾವು ಗೆಲ್ಲಿಸುತ್ತೇವೆ ಎಂದು ಪೀಠಿಕೆ ಹಾಕಿದರು.

ನಿಖಿಲ್ ಕುಮಾರ್ ಮಾತನಾಡಿ, ನಾನು ಸಮಾಜದಲ್ಲಿ ಗೌರವಯುತ ವಾಗಿ ಬದುಕಲು ದಾರಿ ಮಾಡಿಕೊಟ್ಟವರು ನಮ್ಮ ತಂದೆ. ಇವರು ಮುಖ್ಯ ಮಂತ್ರಿ ಆಗಲು ಮೈಸೂರು ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದಾರೆ. ಸಾವಿರಾರು ಒತ್ತಡದ ನಡುವೆ ನಮ್ಮ ತಂದೆ ದಿನಕ್ಕೆ 4 ಗಂಟೆಯೂ ನಿದ್ದೆ ಮಾಡುತ್ತಿಲ್ಲ. ರೈತರು, ಬಡವರ ಒಳಿತಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. 37 ಸ್ಥಾನ ಪಡೆದು ಮುಖ್ಯಮಂತ್ರಿ ಆಗುವಲ್ಲಿ ನಿಮ್ಮ ಆಶೀರ್ವಾದ, ದೇವರ ಅನುಗ್ರಹವೇ ಕಾರಣ. ನಿಮ್ಮ ಋಣ ಎಂದಿಗೂ ನಮ್ಮ ಮೇಲಿರುತ್ತದೆ. ಬಡ ರೈತ ಕುಟುಂಬದ ದೇವೇಗೌಡರನ್ನು ಪ್ರಧಾನಮಂತ್ರಿಗಳಾಗುವ ಮಟ್ಟಕ್ಕೆ ಬೆಳೆಸಿದ್ದು ನೀವು. ಮುಂಬರುವ ಚುನಾವಣೆಯಲ್ಲೂ ಅವರಿಗೆ ಶಕ್ತಿ ತುಂಬಬೇಕು. ಯಾರೇ ಅಭ್ಯರ್ಥಿಯಾ ದರೂ ಗೆಲ್ಲಿಸಬೇಕು. ರಾಜಕಾರಣದಲ್ಲಿ ನಾನು ಈಗ ಕಣ್ಣು ಬಿಡುತ್ತಿದ್ದೇನೆ. ನಾನೂ ನಿಮ್ಮ ಮನೆ ಮಗ. ನನಗೂ ಅವಕಾಶ ಮಾಡಿಕೊಡಿ. ನಮ್ಮ ತಂದೆ ಹೇಳುವಂತೆ ನಿಮ್ಮ ಸೇವಕನಾಗಿ ದುಡಿಯುತ್ತೇನೆ. ನಿಮ್ಮ ಜೊತೆಯಲ್ಲೇ ಇರುತ್ತೇನೆ. ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ, ತಿದ್ದಿ ಹೇಳಿ ಎಂದು ಹೇಳುವ ಮೂಲಕ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ಚಾಮಿ ಅವರು ತಮ್ಮ ಭಾಷಣದ ಕೊನೆಯಲ್ಲಿ, ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಪಕ್ಷದ ಹಿರಿಯರು, ಕಿರಿಯರ ಮೇಲೂ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದ್ದು, ನಿಖಿಲ್ ಕುಮಾರ್ ಸಂಭಾವ್ಯ ಅಭ್ಯರ್ಥಿ ಎಂಬುದಕ್ಕೆ ಪುಷ್ಠಿ ನೀಡಿದಂತಿತ್ತು.

ಮುಂಬರುವ ಲೋಕಸಭಾ ಚುನಾವಣೆಯನ್ನು ಹೊಂದಾಣಿಕೆಯಿಂದ ಎದುರಿಸಲು ನಿರ್ಧರಿಸಿರುವ ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆ ವಿಚಾರವಾಗಿ ಗೊಂದಲವಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿರುವುದರಿಂದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದೆಂಬ ವಿಶ್ವಾಸ ವರಿಷ್ಠರಲ್ಲಿದೆ.

Translate »