ಕೊರೊನಾ ವಾರಿಯರ್ಸ್‍ಗೆ ಸಮರ್ಥನಂನಿಂದ ಸುರಕ್ಷಾ ಸಾಧನ ವಿತರಣೆಮೈಸೂರು, ಜೂ.27(ಎಸ್‍ಪಿಎನ್)-ಸಮರ್ಥನಂ ಅಂಗವಿಕಲ ಸಂಸ್ಥೆಯು ರಾಜ್ಯಾದ್ಯಂತ ಕೊರೊನಾ ವಾರಿಯರ್ಸ್‍ಗಳಿಗೆ ಕೊರೊನಾ ಸೋಂಕು ತಡೆಗಟ್ಟಲು ಸುರಕ್ಷಾ ಸಾಧನಗಳನ್ನು ನೀಡುತ್ತಿರುವುದು ಉತ್ತಮ ಸಂಗತಿ ಎಂದು ಶಾಸಕ ಎಸ್.ಎ.ರಾಮದಾಸ್ ಪ್ರಶಂಸಿಸಿದರು.
ಮೈಸೂರು ಪುರಭವನ ಆವರಣದಲ್ಲಿ `ಸಮರ್ಥನಂ ಅಂಗ ವಿಕಲ ಸಂಸ್ಥೆ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳಿಗೆ ವೈದ್ಯಕೀಯ ರಕ್ಷಣಾ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣ ಗೊಳಿಸುವ ಸಾಂಕ್ರಾಮಿಕ ರೋಗ. ಇದನ್ನು ತಡೆಗಟ್ಟಲು ಆಶಾ ಕಾರ್ಯ ಕರ್ತೆಯರು, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಗತ್ಯ ರಕ್ಷಾ ಕವಚಗಳನ್ನು ಹಲವು ಸಂಘ-ಸಂಸ್ಥೆಗಳು ನೀಡಿವೆ. ಸಮರ್ಥನಂ ಮಾತ್ರ ರಾಜ್ಯಾದ್ಯಂತ ಕೊರೊನಾ ವಾರಿ ಯರ್ಸ್‍ಗಳಿಗೆ ಸುರಕ್ಷತಾ ಕಿಟ್ ವಿತರಿಸುತ್ತಿದೆ ಎಂದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಈಗಾಗಲೇ `ಸಮರ್ಥನಂ’ ಮೈಸೂರು ಕೋವಿಡ್ ಆಸ್ಪತ್ರೆ ಹಾಗೂ ಜಯದೇವ ಆಸ್ಪತ್ರೆಗೆ ತಲಾ 15 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದೆ. ಲಾಕ್‍ಡೌನ್ ಸಂದರ್ಭ ವಿಕಲಚೇತನರು, ವಲಸೆ ಕಾರ್ಮಿ ಕರು, ದಿನಗೂಲಿ ನೌಕರರು ಮತ್ತು ಬಡ ಕುಟುಂಬಗಳ ಸಹಾ ಯಕ್ಕೆ ಧಾವಿಸಿ, 15 ಸಾವಿರ ರ್ಯಾಪಿಡ್ ರೆಸ್ಪಾನ್ಸ್ ರಿಲೀಫ್ ಕಿಟ್, ಆಹಾರ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಮುಖ್ಯಸ್ಥ ದೇವರಾಜು ಮಾತನಾಡಿ, ನಮ್ಮ ಸಂಸ್ಥೆಯ ಸಿಬ್ಬಂದಿ 1 ದಿನದ ವೇತನ(5 ಲಕ್ಷ ರೂ.) ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ ಎಂದರು.
ಈ ವೇಳೆ ವಲಯ ಕಚೇರಿ ಆಯುಕ್ತ ನಾಗರಾಜು, ಪಾಲಿಕೆ ಆರೋಗ್ಯಾಧಿಕಾರಿ ಜಯಂತ್, ತಾಲೂಕು ಆರೋಗ್ಯಾಧಿಕಾರಿ ಮಹದೇವಪ್ರಸಾದ್ ಹಾಗೂ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಎಂ.ಶಿವರಾಜು, ದರ್ಶನ್, ಸಿದ್ಧಾರೂಢ, ಅಖಿತ್‍ಕುಮಾರ್, ಆರೋಗ್ಯ ಪರಿವಿಕ್ಷಕ ಯೋಗೇಶ್ ಇತರರಿದ್ದರು