ಜೈಲು ಬಂದಿಗಳನ್ನು ಮನುಷ್ಯರಂತೆ ನೋಡಿ: ಸಿಬ್ಬಂದಿಗಳಿಗೆ ಎಡಿಜಿಪಿ ಎನ್.ಎಸ್.ಮೇಘರಿಕ್ ಕಿವಿಮಾತು
ಮೈಸೂರು

ಜೈಲು ಬಂದಿಗಳನ್ನು ಮನುಷ್ಯರಂತೆ ನೋಡಿ: ಸಿಬ್ಬಂದಿಗಳಿಗೆ ಎಡಿಜಿಪಿ ಎನ್.ಎಸ್.ಮೇಘರಿಕ್ ಕಿವಿಮಾತು

June 2, 2018

ಮೈಸೂರು: ಜೈಲು ಬಂಧಿಗಳನ್ನು ಮನುಷ್ಯರಂತೆ ನೋಡಿ, ಅವರ ವಿಷಯದಲ್ಲಿ ಮಾನವೀಯತೆ ಪ್ರದರ್ಶಿಸಿ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮತ್ತು ಕಾರಾಗೃಹಗಳ ಮಹಾ ನಿರೀಕ್ಷಕ ಎನ್.ಎಸ್.ಮೇಘರಿಕ್ ಅವರು ಕಾರಾಗೃಹಗಳ ಮಹಿಳಾ ವೀಕ್ಷಕಿಯರಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.

ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ವತಿಯಿಂದ ಮೈಸೂರಿನ ಸೆಂಟ್ರಲ್ ಜೈಲು ಆವರಣದಲ್ಲಿ ಇಂದು ಏರ್ಪಡಿಸಿದ್ದ 45ನೇ ತಂಡದ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖೈದಿಗಳನ್ನು ಮನುಷ್ಯರಂತೆ ನೋಡಿ ಎಂದು ನುಡಿದಿದ್ದಾರೆ.

ಯಾವುದೋ ಕೆಟ್ಟ ಸಂದರ್ಭಕ್ಕೆ ಸಿಲುಕಿ ಅಪರಾಧವೆಸಗಿದವರು. ಯಾವುದೇ ತಪ್ಪನ್ನು ಎಸಗದಿದ್ದರೂ ಸಹ ಅನಿವಾರ್ಯವಾಗಿ ಜೈಲು ಸೇರಿದವರೂ ಇರಬಹುದು. ಅವರ ಮನಸ್ಥಿತಿ ಯಾವ ಸಂದರ್ಭದಲ್ಲಿ ಯಾವ ರೀತಿ ಇರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅವರ ವರ್ತನೆ, ಮನಸ್ಸಿನ ಸ್ಥಿತಿಯನ್ನು ಅರಿತು ನೀವು ಕೆಲಸ ಮಾಡಬೇಕು ಎಂದು ಮೇಘರಿಕ್ ತಿಳಿಸಿದರು.

ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುವವರು ಮೊದಲು ತಮ್ಮ ರಕ್ಷಣೆ ಬಗ್ಗೆ ಗಮನ ಕೊಡಬೇಕು. ಹೊರಗೆ ಹುಲಿಯಾಗಿದ್ದವರು ಒಳಗೆ ಇಲಿಯಾಗುತ್ತಾರೆ ಎಂಬುದು ನಾಣ್ಮಡಿಯಾದರೂ ಕೆಲ ಸಮಯ ಇಲಿಯೂ ಕಚ್ಚುತದೆಯಾದರಿಂದ ಸಿಬ್ಬಂದಿಗಳು ಮೈಯೆಲ್ಲಾ ಕಣ್ಣಾಗಿರಬೇಕೆಂದು ಸಲಹೆ ನೀಡಿದರು.
ಪೊಲೀಸರ ಬಗ್ಗೆ ಜನರಲ್ಲಿ ನೆಗೆಟಿವ್ ಭಾವನೆ ಇದೆ. ನೀವು ಉತ್ತಮವಾಗಿ ಕೆಲಸ ಮಾಡಿ ಆ ನೆಗೆಟಿವ್ ಚಿಂತನೆಯನ್ನು ಹೋಗಲಾಡಿಸಬೇಕು. ರಾಜ್ಯಾದ್ಯಂತ ಜೈಲು ಅಧಿಕಾರಿಗಳಿಗೆ 230 ಮೊಬೈಲ್ ಫೋನ್‍ಗಳನ್ನು ನೀಡಲಾಗಿದೆ. ಸಿಬ್ಬಂದಿ ಮೃತಪಟ್ಟರೆ 30 ಲಕ್ಷ ರೂ.ಗಳವರೆಗೆ ಪರಿಹಾರ ಸಿಗುತ್ತದೆ. ಆರೋಗ್ಯ ತಪಾಸಣೆಯಂತಹ ಹಲವು ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿರುವುದರಿಂದ ನಾವು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯಾದ್ಯಂತ ಎಲ್ಲಾ ಜೈಲುಗಳಿಗೂ ಮೂಲ ಸೌಲಭ್ಯ ಕಲ್ಪಿಸಿ ಬಲಿಷ್ಠಗೊಳಿಸಲಾಗಿದೆ. 2017ರ ಡಿಸೆಂಬರ್ 31ರವರೆಗೆ 1070 ಜೈಲು ಸಿಬ್ಬಂದಿಗಳು, 32 ಜೈಲರ್‍ಗಳನ್ನು ನೇಮಕ ಮಾಡಿದೆ. ಮುಂದೆಯೂ ಸೌಲಭ್ಯ ಒದಗಿಸಲು ಇಲಾಖೆ ಸಿದ್ದವಿದೆ. ಯಾರು ಏನೇ ಸಹಾಯ ಬೇಕೆಂದರೂ ತಮ್ಮನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಮೇಘರಿಕ್ ಸಿಬ್ಬಂದಿಗಳಿಗೆ ಇದೇ ವೇಳೆ ಅಭಯ ನೀಡಿದರು.

Translate »