ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ
ಮಹಾರಾಷ್ಟ್ರದಲ್ಲಿ ಮರಳಿ ಕಾಂಗ್ರೆಸ್ ಮುಂಚೂಣಿಗೆ ತರುತ್ತೇನೆ: ನೂತನ ಉಸ್ತುವಾರಿ ಪಾಟೀಲ್
ಬೆಂಗಳೂರು, ಸೆ.12(ಕೆಎಂಶಿ)-ಮಹಾರಾಷ್ಟ್ರ ಉಸ್ತುವಾರಿ ಮತ್ತು ಇತರ ಪ್ರಮುಖ ಹುದ್ದೆಯಿಂದ ಪಕ್ಷ ನನ್ನ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ ಎಂದಿರುವ ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಎಲ್ಲವೂ ನಮ್ಮ ಕೈಯಲ್ಲಿರುವುದಿಲ್ಲ. ನಮಗೆ ಏನು ಸಿಗಬೇಕೋ ಅದು ಸಿಗುತ್ತೆ ಎಂದಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಾನು ನೆಹರೂ ಮತ್ತು ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವೆನು. ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಮುಂದಾದರೂ ಅದಕ್ಕೆ ನನ್ನ ಬೆಂಬಲವಿದೆ. ಹುದ್ದೆ ಸಿಗಲಿಲ್ಲವೆಂದು ವ್ಯಥೆಪಟ್ಟವನಲ್ಲ. ಈ ಹಿಂದೆ ಎಷ್ಟೋ ಬಾರಿ ಅನೇಕ ಪ್ರಮುಖ ಹುದ್ದೆಗಳು ಕೈತಪ್ಪಿವೆ. ನನಗೆ ತಿಳಿಯದಂತೆ ಅಷ್ಟೇ ದೊಡ್ಡ ಹುದ್ದೆಗಳು ಲಭ್ಯವಾಗಿವೆ. ನಾನು ಒಬ್ಬ ನಿಷ್ಠಾವಂತ ಪಕ್ಷದ ಕಾರ್ಯಕರ್ತ ಎಂದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕತ್ವಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ.
ಕಾಂಗ್ರೆಸ್ ಮುಂಚೂಣಿಗೆ ತರುವೆ: ಈ ಮಧ್ಯೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮತ್ತೊಬ್ಬ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಹೆಚ್.ಕೆ. ಪಾಟೀಲ್ ಅವರಿಗೆ ಮಹಾರಾಷ್ಟ್ರದ ಉಸ್ತುವಾರಿ ನೀಡಿದ್ದಾರೆ. ಅಲ್ಲಿ ಮರಳಿ ಕಾಂಗ್ರೆಸ್ ಅನ್ನು ಮುಂಚೂಣಿಗೆ ತರಲು ನಾನು ಶ್ರಮಿಸುವೆ ಎಂದು ತಿಳಿಸಿದ್ದಾರೆ. ಪಕ್ಷದ ನಾಯಕಿ ಸೋನಿಯಾಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಈ ಹೆಚ್ಚಿನ ಹೊಣೆಗಾರಿಕೆ ನೀಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅಭಾರಿಯಾಗಿದ್ದೇನೆ.
ಪಕ್ಷ ಗಟ್ಟಿಗೊಳಿಸಲು ಸೋನಿಯಾ ಮತ್ತು ರಾಹುಲ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ವೀರಪ್ಪಮೊಯಿಲಿ ಸಂಪುಟದಲ್ಲಿ ನಾನು ಮೊದಲು ಮಂತ್ರಿ ಯಾಗಿದ್ದೆ. ನಂತರ ಎಸ್.ಎಂ. ಕೃಷ್ಣಾ, ಧರ್ಮಸಿಂಗ್, ಇತ್ತೀಚೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದರು. ಕೋವಿಡ್‍ನಿಂದ ಮೃತಪಟ್ಟವರ ಪ್ರಮಾಣದ ಬಗ್ಗೆ ಸರ್ಕಾರ ವಾಸ್ತವ ಸಂಗತಿ ತಿಳಿಸಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ಹೆಚ್ಚಿದೆ. ರಾಜ್ಯ ಸರ್ಕಾರದ ಅಂಕಿ ಸಂಖ್ಯೆಗಳು ಕುತೂಹಲ ಮೂಡಿಸುತ್ತಿದೆ ಎಂದರು. ಶ್ವಾಸಕೋಶದ ಸಮಸ್ಯೆಗಳಿಂದ ಶೇ.8.5 ಜನ ಮೃತಪಟ್ಟಿದ್ದರೆ, ಇದು ಸತ್ಯಕ್ಕೆ ದೂರ. ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆಯು ಚರ್ಚೆ ಮಾಡುವುದಾಗಿ ತಿಳಿಸಿದರು.