ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
ಮೈಸೂರು

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

December 14, 2020

ಉಡುಪಿ,ಡಿ.13-ನಾಡಿನ ಹಿರಿಯ ವಿದ್ವಾಂಸರು, ಪದ್ಮಶ್ರೀ ಪುರಸ್ಕೃತರೂ ಆದ ಡಾ.ಬನ್ನಂಜೆ ಗೋವಿಂದಾಚಾರ್ಯ (84) ಭಾನುವಾರ ಬೆಳಗ್ಗೆ 11.15ಕ್ಕೆ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರು ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು, ಶಿಷ್ಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.

12 ದಿನಗಳ ಹಿಂದೆ ಗೋವಿಂದಾಚಾರ್ಯರ ಪುತ್ರ ವಿಜಯಭೂಷಣ ಆಚಾರ್ಯ ನಿಧನರಾಗಿದ್ದರು. ಮಗನ ನಿಧನದ ಎರಡು ವಾರ ತುಂಬುವ ಮೊದಲೇ ತಂದೆಯೂ ನಿರ್ಗಮಿಸಿದ್ದಾರೆ. ಪಡುಮನ್ನೂರು ನಾರಾಯಣ ಆಚಾರ್ಯರ ಪುತ್ರರಾದ ಗೋವಿಂದಾಚಾರ್ಯರು ವೇದ, ಉಪನಿಷತ್, ಪುರಾಣ, ರಾಮಾಯಣ, ಮಹಾ ಭಾರತ ಕುರಿತು ದೇಶ-ವಿದೇಶ ಗಳಲ್ಲಿ 26 ಸಾವಿರ ಗಂಟೆ ಗಳಿಗೂ ದೀರ್ಘ ಕಾಲ ಉಪ ನ್ಯಾಸ ಹಾಗೂ ಪ್ರವಚನ ನೀಡಿ ದ್ದಾರೆ. ಉಡುಪಿಯ ಕೃಷ್ಣ ಮಠದ ಆಸ್ಥಾನ ವಿದ್ವಾನ್ ಆಗಿಯೂ ಕಾರ್ಯನಿರ್ವಹಿಸಿದ್ದರು.

2009ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾ ಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋ ತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. 1979ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತ ರಾಗಿದ್ದರು. ಕೃಷ್ಣ ಮಠ, ಅಷ್ಟಮಠಗಳು ಸೇರಿದಂತೆ ನಾಡಿನ ಪ್ರಸಿದ್ಧ ಮಠ ಹಾಗೂ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾ ರತ್ನಾಕರ, ಪಂಡಿತ ರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಬಿರುದು ಸಂದಿದೆ.

ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಆಚಾರ್ಯರ ನಿಧನದ ಸುದ್ದಿ ತಿಳಿಯತ್ತಿದ್ದಂತೆ ಮೀನು ಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ರಘುಪತಿ ಭಟ್ ಅವರು ಅಂತಿಮ ದರ್ಶನ ಪಡೆದರು. ಸಂಜೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆದಿದೆ.

ಪ್ರಧಾನಿ ಮೋದಿ ಸಂತಾಪ: ನಾಡು ಶ್ರೇಷ್ಠ ಜ್ಞಾನಿಗಳನ್ನು, ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಿದೆ. ನಾಡಿನ ಹಿರಿಯ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಸಾಹಿತಿ, ಕವಿ, ಪ್ರವಚನಕಾರ ಉಡುಪಿಯ ಡಾ. ಬನ್ನಂಜೆ ಗೋವಿಂದಾಚಾರ್ಯರು ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ವೇದ, ಪುರಾಣಗಳ ಕುರಿತ ಅವರ ಕೃತಿಗಳು, ಪ್ರವಚನಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತ ಗೊಳಿಸುವಂತಿದ್ದವು. ಅನೇಕ ಸಂಸ್ಕೃತ, ಕನ್ನಡ ಗ್ರಂಥಗಳನ್ನು ಅವರು ರಚಿಸಿದ್ದರು ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಾಹಿತ್ಯಕ್ಕೆ ನೀಡಿರುವ ಅಪಾರ ಕೊಡುಗೆಗಳಿಂದಾಗಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಬಗೆಗೆ ಅವರು ತೋರಿರುವ ಉತ್ಸಾಹ ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

 

Translate »