ಮೈಸೂರಲ್ಲಿ ಖಾಸಗಿ ಶಾಲಾ ವಾಹನ ಚಾಲಕರಿಗೆ ಸುರಕ್ಷತಾ ಅರಿವು
ಮೈಸೂರು

ಮೈಸೂರಲ್ಲಿ ಖಾಸಗಿ ಶಾಲಾ ವಾಹನ ಚಾಲಕರಿಗೆ ಸುರಕ್ಷತಾ ಅರಿವು

June 16, 2018

ಮೈಸೂರು: ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿರುವ ಮೈಸೂರು ಜಿಲ್ಲಾಡಳಿತವು, ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಪ್ರಾದೇಶಿಕ ಸಾರಿಗೆ ಜಂಟಿ ಆಯುಕ್ತರ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಖಾಸಗಿ ಶಾಲಾ-ಕಾಲೇಜುಗಳ ವಾಹನಗಳ ತಪಾಸಣೆ ಮತ್ತು ಚಾಲಕರಿಗೆ ಅರಿವಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸದ್ವಿದ್ಯಾ, ವಿದ್ಯಾವರ್ಧಕ, ಎಸ್‍ವಿಐ, ವಿಶ್ವ ಪ್ರಜ್ಞ ಸಂಯುಕ್ತ ಪಿಯು ಕಾಲೇಜು, ಮೈಕಾ, ಅಮೃತ ವಿದ್ಯಾಲಯ, ಶೇಷಾದ್ರಿ ಪುರಂ ಕಾಲೇಜು ಸೇರಿದಂತೆ ಮೈಸೂರಿನ ಸುಮಾರು 300 ಖಾಸಗಿ ಶಿಕ್ಷಣ ಸಂಸ್ಥೆ ಗಳ ಚಾಲಕರು ತಮ್ಮ ವಾಹನಗಳೊಂದಿಗೆ ಭಾಗವಹಿಸಿದ್ದರು.

ಸುಪ್ರೀಂಕೋರ್ಟಿನ ಸೇಫ್ಟಿ ಕಮಿಟಿ ಮಾರ್ಗಸೂಚಿಯನ್ವಯ ವಾಹನಗಳನ್ನು ರಿಪೇರಿ ಮಾಡಿಸಿಕೊಂಡು ಸುಸ್ಥಿತಿಯಲ್ಲಿರಿಸ ಬೇಕು. ಹೊರಗಿನ ಭಾಗಕ್ಕೆ ಕಿಟಕಿ ಗಾಜಿನ ಬಳಿಕ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸ ಬೇಕು. ಇಂಜಿನ್‍ಗೆ ಸ್ಪೀಡ್ ಗವರ್ನರ್ ಹಾಕಿಸ ಬೇಕು. ಪ್ರತೀ ಬಸ್ಸಿಗೆ ಅಟೆಂಡರ್‍ವೊಬ್ಬ ರನ್ನು ನೇಮಿಸಬೇಕು. ಮಕ್ಕಳ ಲಗೇಜ್ ಬ್ಯಾಗ್ ಇರಿಸಲು ಸ್ಥಳಾವಕಾಶವಿರಬೇಕು. ಮೈಸೂರು ನಗರ ವ್ಯಾಪ್ತಿಯಲ್ಲಿ ಗಂಟೆಗೆ ಗರಿಷ್ಠ 40 ಕಿ.ಮೀ. ವೇಗದಲ್ಲಿ ವಾಹನ ಚಾಲನೆ ಮಾಡಬೇಕು. ಶಾಲಾ ವಾಹನಗಳ ಚಾಲಕ ರನ್ನು ನೇಮಿಸಿಕೊಳ್ಳುವಾಗ ಕನಿಷ್ಠ 4 ವರ್ಷ ಚಾಲನಾ ಅನುಭವವಿರುವವರನ್ನು ಪರಿಗಣಿಸಬೇಕು ಎಂಬಿತ್ಯಾದಿ ಸಲಹೆ-ಸೂಚನೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿದರು.

ನಿಗದಿತ ಸಂಖ್ಯೆಯ ಮಕ್ಕಳನ್ನು ಮಾತ್ರ ವಾಹನಗಳಲ್ಲಿ ಕರೆದೊಯ್ಯಬೇಕು. ಸುರಕ್ಷಿತ ಚಾಲನೆ, ಸಮಯ ಪಾಲನೆ ಮಾಡುವುದು, ಮಕ್ಕಳು ಮನೆ ತಲುಪುವ ಬಗ್ಗೆ ಖಾತರಿ ಪಡಿಸುವುದು ಇನ್ನಿತರೆ ವಿಷಯಗಳ ಬಗ್ಗೆ ವಾಹನ ಚಾಲಕರು ಮತ್ತು ಅಟೆಂಡರ್ ಗಳು ಎಚ್ಚರ ವಹಿಸುವಂತೆಯೂ ಸಾರಿಗೆ ಅಧಿಕಾರಿಗಳು ತಾಕೀತು ಮಾಡಿದರು.

ರಿಪೇರಿ ಇದ್ದಲ್ಲಿ 15 ದಿನದೊಳಗಾಗಿ ವಾಹನಗಳನ್ನು ಸರಿಪಡಿಸಿ ಸುಸ್ಥಿತಿಯಲ್ಲಿರಿಸಿ ಕೊಳ್ಳಬೇಕು. ತಪ್ಪಿದಲ್ಲಿ ಮತ್ತೊಮ್ಮೆ ವಾಹನ ಗಳನ್ನು ತಪಾಸಣೆ ಮಾಡಿ ಸಂಬಂಧ ಪಟ್ಟವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸ ಲಾಗುವುದೆಂದೂ ಇದೇ ಸಂದರ್ಭ ಎಚ್ಚರಿಕೆ ನೀಡಲಾಯಿತು. ಸಾರಿಗೆ ಜಂಟಿ ಆಯುಕ್ತ ಡಾ. ಸಿ.ಟಿ.ಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ (ಪಶ್ಚಿಮ) ಪ್ರಭುಸ್ವಾಮಿ, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕಿ ಮಮತ, ಚಂದ್ರಕಾಂತ್, ರಾಜಪ್ಪ, ಕೃಷ್ಣ ನಾಯಕ್, ಜಗನ್ನಾಥ ರಾವ್, ಪ್ರಭಾಕರ್, ಸತೀಶ, ಚಾಲ್ರ್ಸ್ ಹಾಗೂ ಇತರರು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಖಾಸಗಿ ಶಾಲಾ-ಕಾಲೇಜುಗಳ ವ್ಯಾನು, ಬಸ್ಸುಗಳ ಸ್ಥಿತಿಯನ್ನು ಸಾರಿಗೆ ಅಧಿಕಾರಿಗಳು ತಪಾಸಣೆ ಮಾಡಿದರು.

Translate »