ಹಸುಗಳ ಕಳವಿಗೆ ಯತ್ನ: ಇಬ್ಬರ ಬಂಧನ
ಮೈಸೂರು

ಹಸುಗಳ ಕಳವಿಗೆ ಯತ್ನ: ಇಬ್ಬರ ಬಂಧನ

June 16, 2018

ಮೈಸೂರು: ಹಸುಗಳನ್ನು ಕಳವು ಮಾಡಲೆತ್ನಿಸಿ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಇಬ್ಬರು ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಪುನೀತ್(20) ಹಾಗೂ ಹೇಮಂತ್(22) ಬಂಧಿತರಾಗಿದ್ದು, ಪರಾರಿಯಾಗಿರುವ ಮತ್ತೋರ್ವ ಆರೋಪಿ ನವೀನ್‍ಗೆ ಶೋಧ ನಡೆಸಲಾಗುತ್ತಿದೆ.

ವಿಜಯನಗರ 3ನೇ ಹಂತದ ನಿವಾಸಿ ಜನಾರ್ಧನ್ ಅವರು ತಮ್ಮ ಮನೆಯ ಸಮೀಪ ಚೌಡೇಶ್ವರಿ ದೇವಾಲಯದ ಹಿಂಭಾಗದಲ್ಲಿ 2 ಹಸುಗಳನ್ನು ಕಟ್ಟ್ಟಿಹಾಕಿದ್ದರು. ಬುಧವಾರ ರಾತ್ರಿ ಟಾಟಾ ಏಸ್ ಗೂಡ್ಸ್ ವಾಹನ(ಕೆಎ-10, 8978)ದಲ್ಲಿ ಬಂದಿದ್ದ ಈ ಮೂವರು ಆರೋಪಿಗಳು, ಹಸುಗಳನ್ನು ವಾಹನಕ್ಕೆ ಬಲವಂತವಾಗಿ ಹತ್ತಿಸುತ್ತಿದ್ದರು. ಈ ವೇಳೆ ಶಬ್ಧವಾಗಿದ್ದರಿಂದ ಜನಾರ್ಧನ್ ಅವರು ಮನೆಯಿಂದ ಹೊರ ಬಂದು ನೋಡಿದಾಗ ಹಸುಗಳ ಕಳವಿಗೆ ಯತ್ನಿಸುತ್ತಿರುವುದು ಕಂಡಿದೆ. ಕೂಡಲೇ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಆರೋಪಿಗಳು ಹಸುಗಳನ್ನು ವಾಹನದಿಂದ ಕೆಳಗೆ ತಳ್ಳಿ ಪರಾರಿಯಾಗಲು ಯತ್ನಿಸಿದ್ದಾರೆ. ಜನಾರ್ಧನ್ ಅವರು ಸಾರ್ವಜನಿಕರ ನೆರವಿನೊಂದಿಗೆ ಪುನೀತ್ ಹಾಗೂ ಹೇಮಂತ್‍ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದು, ನವೀನ್ ಎಂಬಾತ ಪರಾರಿಯಾಗಿದ್ದಾನೆ.

Translate »